Advertisement

2A Reservation; ರವಿವಾರ ರಾಜ್ಯ ಹೆದ್ದಾರಿ ತಡೆದು ಇಷ್ಟಲಿಂಗ ಪೂಜೆ ಹೋರಾಟ

12:48 PM Dec 23, 2023 | Team Udayavani |

ರಾಯಚೂರು: ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ಕೋರಿ ಆರನೇ ಹಂತದ ಹೋರಾಟಕ್ಕೆ ಚಾಲನೆ ನೀಡಿದ್ದು, ಡಿ.24ರಂದು ಲಿಂಗಸೂಗುರು ತಾಲೂಕಿನ ಯರಡೋಣಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ತಡೆದು ಇಷ್ಟಲಿಂಗ ಪೂಜೆ ಮೂಲಕ ಹೋರಾಟ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದಾಗ ಸಿಎಂ ಒಂದು ವಾರದೊಳಗೆ ಕಾನೂನು ತಜ್ಞರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದರು. ಇಂದಿಗೆ ಅವರು ಹೇಳಿದ ಕಾಲಮಿತಿ ಮುಗಿದಿದೆ. ಹೀಗಾಗಿ ಪುನಃ ಹೋರಾಟ ಆರಂಭಿಸುತ್ತಿದ್ದೇವೆ. ಎಲ್ಲ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಇಷ್ಟಲಿಂಗ ಪೂಜೆ ಹೋರಾಟ ಮಾಡಲಾಗುವುದು. ನಾಳಿನ ಹೋರಾಟಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಚಾಲನೆ ನೀಡುವರು. ಶಾಸಕ ವಿಜಯಾನಂದ ಕಾಶಪ್ಪನವರ್, ಸಂಸದ ಕರಡಿ ಸಂಗಣ್ಣ ಸೇರಿ ಸಮಾಜದ ಗಣ್ಯರು ಪಾಲ್ಗೊಳ್ಳುವರು. ಸರ್ಕಾರಕ್ಕೆ ಸಂಕ್ರಾಂತಿವರೆಗೆ ಗಡುವು ನೀಡಲಾಗುತ್ತಿದೆ ಅಷ್ಟರೊಳಗೆ ನಿರ್ಧಾರ ಪ್ರಕಟಿಸಬೇಕು ಎಂದರು.

ಹಿಂದಿನ ಸರ್ಕಾರ 2ಡಿ ಮೀಸಲಾತಿ ನೀಡಲು ಮುಂದಾಗಿತ್ತು. ಆದರೆ, ನೀತಿ ಸಂಹಿತೆ ಜಾರಿಯಾದ ಕಾರಣ ಅದು ಜಾರಿ ಆಗಲಿಲ್ಲ. ಬಿಜೆಪಿ ಸರ್ಕಾರದ ನಿರ್ಧಾರವನ್ನು ಈ ಸರ್ಕಾರ ಒಪ್ಪುತ್ತಿಲ್ಲ. ಹೀಗಾಗಿ ನಮ್ಮ ಬೇಡಿಕೆಯನುಸಾರ 2ಎ ಮೀಸಲಾತಿಯನ್ನೇ ನೀಡಲಿ. ಹಿಂದೆ ಸಿದ್ದರಾಮಯ್ಯನವರೇ ಮೀಸಲಾತಿ ಪ್ರಮಾಣವನ್ನು ಶೇ.70ರಷ್ಡು ಹೆಚ್ಚಿಸಲು ಸಾಧ್ಯವಿದೆ ಎಂದಿದ್ದರು. ಅದರಂತೆ ಮೀಸಲಾತಿ ಹೆಚ್ಚಿಸಿ ಬೇಡಿಕೆ ಈಡೇರಿಸಲಿ ಎಂದರು.

ಸಮಾಜದ ಮುಖಂಡರಾದ ಬಾಬುರಾವ್ ಶೇಗುಣಸಿ, ಮಂಜುನಾಥ ಬ್ಯಾಳಿ, ವೀರೇಶ್ವರ ಎಂ.ಬಿ.ಕೊಟ್ಟೂರು ಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next