ಮುಂಬಯಿ: ಮುಂಬಯಿ ವಿಶ್ವವಿದ್ಯಾನಿಲಯವು ಮಾರ್ಚ್-ಎಪ್ರಿಲ್ ತಿಂಗಳಲ್ಲಿ ನಡೆಸಿದ ವಿವಿಧ ಕೋರ್ಸ್‌ಗಳ ಪರೀಕ್ಷೆಗಳಿಗೆ ಹಾಜರಾಗಿದ್ದ ವಿದ್ಯಾರ್ಥಿಗಳ ಸುಮಾರು 28,500ರಷ್ಟು ಉತ್ತರಪತ್ರಿಕೆಗಳು ನಾಪತ್ತೆಯಾಗಿವೆ ಎಂದು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು ವಿಶ್ವವಿದ್ಯಾನಿಲಯ ಆಡಳಿತದ ಈ ವಾದ ವನ್ನು ಒಪ್ಪಲು ಸಿದ್ಧವಿಲ್ಲವಾಗಿದ್ದು ಇನ್ನೂ ಅಧಿಕ ಸಂಖ್ಯೆಯಲ್ಲಿ ಉತ್ತರಪತ್ರಿಕೆಗಳು ನಾಪತ್ತೆ ಯಾಗಿದ್ದು ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ ಎಂದು ದೂರಿದ್ದಾರೆ.
ಮುಂಬಯಿ ವಿಶ್ವವಿದ್ಯಾನಿಲಯವು ಪ್ರಸಕ್ತ ವರ್ಷದಿಂದ ಆನ್‌ಲೈನ್ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಆದರೆ ಈ ವ್ಯವಸ್ಥೆಯಲ್ಲಿನ ಲೋಷದೋಷಗಳಿಂದಾಗಿ ಫಲಿತಾಂಶ ಪ್ರಕಟನೆಯಲ್ಲಿ ಭಾರೀ ವಿಳಂಬ ವಾಗಿದ್ದು ವಿದ್ಯಾರ್ಥಿಗಳು ಸಂಕಷ್ಟವನ್ನು ಎದುರಿಸುವಂತಾಗಿತ್ತು.ರಾಜ್ಯ ಸರಕಾರ ಮತ್ತು ಹೈಕೋರ್ಟ್‌ನ ಹಲವು ನಿರ್ದೇಶಗಳ ಹೊರತಾಗಿಯೂ ವಿಶ್ವವಿದ್ಯಾನಿಲಯಕ್ಕೆ ಎಲ್ಲಾ ಕೋರ್ಸ್‌ಗಳ ಫಲಿತಾಂಶವನ್ನು ಇನ್ನೂ ಪ್ರಕಟಿಸಲು ಸಾಧ್ಯವಾಗಿಲ್ಲ. ಉತ್ತರಪತ್ರಿಕೆಗಳು ನಾಪತ್ತೆಯಾಗಿರುವ ವಿದ್ಯಾರ್ಥಿಗಳ ಫಲಿ ತಾಂಶ ಮಾತ್ರವಲ್ಲದೆ ಸುಮಾರು 57,000 ವಿದ್ಯಾರ್ಥಿಗಳ ಫಲಿತಾಂಶವನ್ನು ವಿಶ್ವವಿದ್ಯಾನಿಲಯ ಇನ್ನೂ ಪ್ರಕಟಿಸಿಲ್ಲ. ಆದರೆ ಫಲಿತಾಂಶ ಲಭಿಸದಿರುವ ಬಗೆಗೆ 12,000 ವಿದ್ಯಾರ್ಥಿಗಳು ದೂರು ನೀಡಿದ್ದರೆ 22,300 ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆಎಂದು ವಿವಿ ತಿಳಿಸಿದೆ.
ಸದ್ಯ ಫಲಿತಾಂಶವನ್ನು ತಡೆ ಹಿಡಿದಿಡ ಲಾಗಿರುವ ವಿದ್ಯಾರ್ಥಿಗಳ ಉತ್ತರಪತ್ರಿಕೆ ಒಂದೋ ನಾಪತ್ತೆಯಾಗಿದೆ ಅಥವಾ ಬೇರೆಲ್ಲೋ ಇಡಲಾಗಿದೆ.ಈ ಉತ್ತರಪತ್ರಿಕೆಗಳು ನಾಪತ್ತೆಯಾಗಿವೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲವಾಗಿದ್ದು ಬೇರೆಲ್ಲೋ ಇಡಲಾಗಿರುವ ಸಾಧ್ಯತೆ ಇದೆ. ಈ ಉತ್ತರಪತ್ರಿಕೆಗಳ ಹುಡುಕಾಟ ಮುಂದುವರಿದಿದ್ದು ಪತ್ತೆಯಾದ ತತ್‌ಕ್ಷಣ ಅವುಗಳ ಮೌಲ್ಯಮಾಪನ ನಡೆಸಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಮುಂಬಯಿ ವಿಶ್ವವಿದ್ಯಾನಿಲಯದ ಪರೀಕ್ಷಾ ಮತ್ತು ಮೌಲ್ಯಮಾಪನ ವಿಭಾಗದ ಹಂಗಾಮಿ ನಿರ್ದೇಶಕರಾದ ಅರ್ಜುನ ಘಾತುಳೆ ಹೇಳಿದರು.
ಆದರೆ ಮುಂಬಯಿ ವಿಶ್ವವಿದ್ಯಾನಿಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳು ವಾಸ್ತವಕ್ಕೆ ಹತ್ತಿರವಾದವುಗಳಲ್ಲ ಎಂದು ನಗರದ ಕೆಲ ಕಾಲೇಜುಗಳ ಪ್ರಾಂಶುಪಾಲರು ದೂರಿದ್ದಾರೆ. ಪ್ರತೀ ಪರೀಕ್ಷೆಯಲ್ಲಿಯೂ ಗರಿಷ್ಠ ಅಂಕಗಳೊಂದಿಗೆ ಉನ್ನತ ಸ್ಥಾನದಲ್ಲಿ ತೇರ್ಗಡೆಯಾಗುತ್ತಿದ್ದ ವಿದ್ಯಾರ್ಥಿಗಳು ಈ ಬಾರಿ ಬಹುತೇಕ ವಿಷಯಗಳಲ್ಲಿ ಗರಿಷ್ಠ ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದರೆ ಒಂದು ವಿಷಯದಲ್ಲಿ ಅನುತ್ತೀರ್ಣರಾಗಿದ್ದಾರೆ. ಈ ವಿದ್ಯಾರ್ಥಿಗಳು ತಮ್ಮ ಉತ್ತರಪತ್ರಿಕೆಗಳ ಮರು ಮೌಲ್ಯಮಾಪನಕ್ಕಾಗಿ ಅಥವಾ ಅಕ್ಟೋಬರ್- ನವೆಂಬರ್ ತಿಂಗಳಿನಲ್ಲಿ ನಡೆ ಯಲಿ ರುವ ಮರುಪರೀಕ್ಷೆಗೆ ಹಾಜರಾಗುವ ಅನಿವಾರ್ಯ ಇದೀಗ ಸೃಷ್ಟಿಯಾಗಿದೆ. ಉನ್ನತ ಸ್ಥಾನದಲ್ಲಿ ತೇರ್ಗಡೆಯಾಗಿರುವ ಹೊರ ತಾಗಿಯೂ ಹಲವಾರು ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಕಾಲೇಜೊಂದರ ಪ್ರಾಂಶುಪಾಲರು ದೂರಿದರು.