ಬೆಂಗಳೂರು: ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯಡಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ವಿವಿಧ ಕಾರ್ಯಕ್ರಮಗಳಿಗೆ ಪ್ರಸಕ್ತ ಸಾಲಿನಲ್ಲಿ 28,000 ಕೋಟಿ ರೂ.ಗಳನ್ನು ನೀಡಲು ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ತಮ್ಮ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರಗಿದ ಅನುಸೂಚಿತ ಜಾತಿ- ಅನುಸೂಚಿತ ಬುಡಕಟ್ಟುಗಳ ರಾಜ್ಯ ಅಭಿವೃದ್ಧಿ ಪರಿಷತ್ತಿನ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಕಳೆದ ವರ್ಷದ ಅನುದಾನದಲ್ಲಿ ಎಷ್ಟು ಬಳಕೆಯಾಗಿದೆ ಹಾಗೂ ಎಷ್ಟು ಬಾಕಿ ಇದೆ ಎನುವುದನ್ನು ಸಭೆಯಲ್ಲಿ ಪರಿಶೀಲಿಸಲಾಗಿದೆ. ಕೆಲವು ಯೋಜನೆಗಳಿಗೆ ಮಾತ್ರ ಬದಲಾವಣೆ ಮಾಡಿ ಉಳಿದುದಕ್ಕೆ ಅನುಮೋದನೆ ನೀಡಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಗೆ 500 ಕೋಟಿ ರೂ.ಗಳನ್ನು ಹೆಚ್ಚಿಸಲಾಗಿದೆ. ಕೃಷಿ ಇಲಾಖೆಗಿದ್ದ 851 ಕೋಟಿ ರೂ. ಅನುದಾನವನ್ನು 1,061 ಕೋಟಿ ರೂ.ಗೆ, ತೋಟಗಾರಿಕೆ ಇಲಾಖೆಯ 142 ಕೋ. ರೂ. ಅನುದಾನವನ್ನು 187 ಕೋಟಿ ರೂ.ಗಳಿಗೆ, ಆರೋಗ್ಯ ಇಲಾಖೆಗಿದ್ದ 899 ಕೋಟಿ ರೂ.ಗಳನ್ನು 1,300 ಕೋಟಿ ರೂ.ಗಳಿಗೆ ಏರಿಸಲಾಗಿದೆ ಎಂದರು.
ಸಹಕಾರ ಇಲಾಖೆಯಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ಸದಸ್ಯತ್ವ ನೀಡಲು 203 ಕೋಟಿ ರೂ. ಒದಗಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಪಿಂಚಣಿಗಳ ಮೊತ್ತ ಹೆಚ್ಚಳ ಮಾಡಿದ್ದು, ಕಳೆದ ವರ್ಷ 2,900 ಕೋಟಿ ರೂ.ಗಳಿದ್ದ ಅನುದಾನವನ್ನು ಈ ಬಾರಿ 3,748 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಕೌಶಲಾಭಿವೃದ್ಧಿಗೆ 180 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ 9,000 ಕೋಟಿ ರೂ.ಗಳ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
Related Articles
ಮಲೆನಾಡು ಅಭಿವೃದ್ಧಿ ಮಂಡಳಿ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಮತ್ತು ಕರಾವಳಿ ಅಭಿವೃದ್ಧಿ ಮಂಡಳಿ ಶಾಸಕರಿಗೆ ಒಂದು ಕೋಟಿ ರೂ.ಗಳನ್ನು ನೀಡಲಾಗುವುದು ಎಂದರು.
2022- 23 ನೇ ಸಾಲಿನ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕ್ರಿಯಾ ಯೋಜ ನೆಗೆ ಅನುಮೋದನೆ ನೀಡಲಾಯಿತು. ಸಚಿವರಾದ ಮಾಧುಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ ಉಪಸ್ಥಿತರಿದ್ದರು.
ಮೂರು ತಿಂಗಳಲ್ಲಿ ಅನುದಾನ ಬಳಕೆಗೆ ಸೂಚನೆ
ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಅಗಸ್ಟ್ ತಿಂಗಳ ಒಳಗೆ ಕಡ್ಡಾಯವಾಗಿ ಅನುಷ್ಠಾನಗೊಳಿಸಿ. ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಶಾಸನಬದ್ಧ ಅನುದಾನ ಆ ಸಮುದಾಯಗಳಿಗೆ ಮಾತ್ರ ಬಳಕೆಯಾಗ ಬೇಕು ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಪ್ರಮುಖ ಸೂಚನೆಗಳು
– ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯಡಿ ವೈಯಕ್ತಿಕ ಸೌಲಭ್ಯಗಳನ್ನು ನೀಡಲು ಹೆಚ್ಚಿನ ಆದ್ಯತೆ ನೀಡುವುದು.
– ಫೆಲೋಶಿಪ್ / ಲಾಪ್ ಟಾಪ್ ವಿತರಣೆಗೆ ಆದ್ಯತೆ.
– ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಗಳಡಿ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ಮುಟ್ಟಿಸಲು ಅತಿ ಹೆಚ್ಚಿನ ಆದ್ಯತೆ ನೀಡುವುದು.
ಇಂದಿನ ಸಭೆಯಲ್ಲಿ ಕೈಗೊಳ್ಳಲಾಗಿರುವ ನಿರ್ಣಯಗಳಿಗೆ ಆದೇಶ ಹೊರಡಿಸಿ ಆಗಸ್ಟ್ 15ರೊಳಗೆ ಎಲ್ಲ ವೈಯಕ್ತಿಕ ಯೋಜನೆಗಳಿಗೆ ಚಾಲನೆ ನೀಡುವುದು.