ಹುಬ್ಬಳ್ಳಿ: ಎಲ್ಲ ಸಂತರು, ಶರಣರು ಸಮಾಜದ ಉದ್ಧಾರಕ್ಕಾಗಿ ಜನ್ಮ ತಳಿದವರಾಗಿದ್ದು, ಅವರಲ್ಲಿ ಬಂಜಾರ ಕುಲಗುರು ಸೇವಾಲಾಲರು ಒಬ್ಬರು ಎಂದು ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.
ಗೋಕುಲ ರಸ್ತೆಯ ಬಂಜಾರ ಕಾಲೋನಿಯಲ್ಲಿ ಬುಧವಾರ ನಡೆದ ಬಂಜಾರ ಕುಲಗುರು ಸಂತ ಶ್ರೀ ಸೇವಾಲಾಲ ಮಹಾರಾಜರ 278ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಶ್ರೀ ಸೇವಾಲಾಲರು ಬಂಜಾರ ಕುಲಗುರುವಾಗಿದ್ದು, ಎಲ್ಲ ಬಂಜಾರ ಬಾಂಧವರು ಆ ಮಹಾತ್ಮರ ಸ್ಮರಣೆ ಮಾಡಬೇಕು ಎಂದರು. ಜಾನಪದ ವಿವಿ ಕುಲಸಚಿವ ಡಿ.ಬಿ. ನಾಯ್ಕ ಮಾತನಾಡಿ, ಸರಕಾರದಿಂದ ಸಮಾಜದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳಿವೆ. ಅದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಎಲ್ಲರೂ ಮುಂದೆ ಬರಬೇಕು.
ಉತ್ತಮ ಶಿಕ್ಷಣ, ಸಂಸ್ಕೃತಿ ಪಡೆಯಬೇಕು ಎಂದರು. ಇದಕ್ಕೂ ಮೊದಲು ಬಂಜಾರ ಕುಲಗುರು ಶ್ರೀ ಸೇವಾಲಾಲರ ತೊಟ್ಟಿಲೋತ್ಸವ, ಹೋಮ ನಡೆದವು. ಬೆಳಿಗ್ಗೆ ಜೆ.ಸಿ. ನಗರದ ಬಂಜಾರ ಭವನದಿಂದ ಗೋಕುಲ ರಸ್ತೆ ಬಂಜಾರ ಕಾಲೋನಿವರೆಗೆ ರ್ಯಾಲಿ ನಡೆಯಿತು.
ನಿಗಮ ಮಂಡಳಿ ಅಧ್ಯಕ್ಷ ನಾಗರಾಜ ಛಬ್ಬಿ ಹಾಗೂ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ರ್ಯಾಲಿಗೆ ಚಾಲನೆ ನೀಡಿದರು. ಬಂಜಾರ ಸಮಾಜದ ಅಧ್ಯಕ್ಷ ಪಾಂಡುರಂಗ ಪಮ್ಮಾರ ಅಧ್ಯಕ್ಷತೆ ವಹಿಸಿದ್ದರು. ಡಾ| ರಾಮು ಮೂಲಗಿ ಜಾನಪದ ಹಾಡುಗಳ ಮೂಲಕ ಎಲ್ಲರ ಮನ ಗೆದ್ದರು.
ಬಾಗಲಕೋಟೆ ಮೇಲನಗರದ ಕುಮಾರ ಮಹಾರಾಜರು, ಭೀಮಸಿಂಗ್ ರಾಠೊಡ, ಜೈಸಿಂಗ್ ನಾಯ್ಕ, ರಾಮಸಿಂಗ ಮಹಾರಾಜರು, ರವಿ ಚವ್ಹಾಣ ಸೇರಿದಂತೆ ಮೊದಲಾದವರು ಇದ್ದರು.