ಬಸವಕಲ್ಯಾಣ: 17ನೇ ಕಲ್ಯಾಣ ಪರ್ವ ಕಾರ್ಯಕ್ರಮ ಅಕ್ಟೋಬರ್ 27ರಿಂದ ಮೂರು ದಿನಗಳ ಕಾಲ ನಗರದ ಬಸವ ಮಹಾಮನೆ ಆವರಣದಲ್ಲಿ ಸಂಭ್ರಮದಿಂದ ನಡೆಯಲಿದೆ ಎಂದು ಬಸವ ಮಹಾಮನೆಯ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಬಸವ ಮಹಾಮನೆಯಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು ಅವರು, ಅ.27ರಂದು ಬೆಳಗ್ಗೆ 10:30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು.
ಕೂಡಲ ಸಂಗಮ ಬಸವ ಧರ್ಮ ಪೀಠ ಪೀಠಾಧ್ಯಕ್ಷೆ ಮಹಾಜಗದ್ಗುರು ಡಾ| ಮಾತೆ ಮಹಾದೇವಿ ಸಾನ್ನಿಧ್ಯ, ಧಾರವಾಡದ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಗಂಗಾದೇವಿ, ಸಮುಖ ಬಸವಕಲ್ಯಾಣ ಅಲ್ಲಮಪ್ರಭು ಶೂನ್ಯಪೀಠಾಧ್ಯಕ್ಷ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದರು.
ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಸಚಿವ ರಾಜಶೇಖರ ಪಾಟೀಲ ಧ್ವಜಾರೋಹಣ ನೆರವೇರಿಸುವರು. ಕಲ್ಯಾಣ ಪರ್ವದ ಕಾರ್ಯಾಧ್ಯಕ್ಷ ಹಾಗೂ ಶಾಸಕ ಬಿ.ನಾರಾಯಣರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಎಚ್.ಆಂಜನೇಯ, ಶಾಸಕರಾದ ರಹೀಮ್‌ಖಾನ್, ಎಂ.ವೈ.ಪಾಟೀಲ, ಶರಣಬಸಪ್ಪಾ ದರ್ಶನಾಪೂರ, ಬಸವರಾಜ ಮತ್ತಿಮೂಡ, ಅಲ್ಲಮಪ್ರಭು ಪಾಟೀಲ, ವಿಜಯಸಿಂಗ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶ್ರೀಧರ, ಪೌರಾಯುಕ್ತ ಸುರೇಶ ಬಬಲಾದ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಅ.27ರಂದು ಮಧ್ಯಾಹ್ನ 3 ಗಂಟೆಗೆ ರಾಷ್ಟ್ರೀಯ ಬಸವ ದಳದ ಯುವ ಸಮಾವೇಶ ಹಾಗೂ ಸಂಜೆ 6:30 ಗಂಟೆಗೆ ಶರಣೆಯರ ಸಂಗಮ ಕಾರ್ಯಕ್ರಮ ನಡೆಯಲಿದೆ. ಅ.28ರಂದು ಬೆಳಗ್ಗೆ 7:30ಕ್ಕೆ ಶರಣ ವಂದನೆ ಶರಣರಿಗೆ ಶರಣಾರ್ಥಿ, 10 ಗಂಟೆಗೆ ಧರ್ಮ ಚಿಂತನ ಗೋಷ್ಠಿ, ಮಧ್ಯಾಹ್ನ 3 ಗಂಟೆಗೆ ದೆಹಲಿ ಲಿಂಗಾಯತ ಧರ್ಮ ಸಮಾವೇಶ ಚಿಂತನೆ ಸಿದ್ಧತೆ, ಸಂಜೆ 6:30 ಗಂಟೆಗೆ ಧರ್ಮ ಚಿಂತನ ಗೋಷ್ಠಿ ನಡೆಯಲಿದೆ. ಅ.29ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಪ್ರಥಮ ಶೂನ್ಯ ಪೀಠಾರೋಹಣದ 834ನೇ ಸಂಸ್ಮರಣೆ ಮತ್ತು ದ್ವಿತೀಯ ಶೂನ್ಯಪೀಠಾರೋಹಣದ ಹದಿನಾರನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿವೆ ಎಂದರು.
ನಂತರ ಕಲ್ಯಾಣ ಪರ್ವದ ಕಾರ್ಯಾಧ್ಯಕ್ಷ ಹಾಗೂ ಶಾಸಕ ಬಿ.ನಾರಾಯಣರಾವ್ ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ, ತೆಲಂಗಾಣ, ಆಂಧ್ರದಿಂದ ಬಸವಾಭಿಮಾನಿಗಳು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಅಶೋಕ ಪಾಟೀಲ, ಶಿವರಾಜ ಪಾಟೀಲ ಅತಿವಾಳ, ಯುವರಾಜ ಭೆಂಡೆ, ಮಲ್ಲಣ್ಣಾ ಹಳ್ಳಿಖೇಡ, ಬಸವರಾಜ ಪಾಟೀಲ ಸೇರಿದಂತೆ ಮತ್ತಿತರರು ಇದ್ದರು.