Advertisement

27 ಕೇಂದ್ರದಲ್ಲಿ 1970 ಸಂತ್ರಸ್ತರಿಗೆ ಆಶ್ರಯ

02:54 PM Aug 13, 2019 | Team Udayavani |

ಚಿಕ್ಕಮಗಳೂರು: ಜಿಲ್ಲಾದ್ಯಂತ 27 ನಿರಾಶ್ರಿತ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರಸ್ತುತ ಈ ಕೇಂದ್ರಗಳಲ್ಲಿ 1970 ಜನ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌ ತಿಳಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಮುರಾರ್ಜಿ ದೇಸಾಯಿ ಶಾಲೆಯಲ್ಲಿ 200, ಬಣಕಲ್ ಬಿಸಿಎಂ ಹಾಸ್ಟೆಲ್ನಲ್ಲಿ 120, ಹಿರೇಬೈಲು ಗಣಪತಿ ಸಮುದಾಯ ಭವನದಲ್ಲಿ 40, ಸರ್ಕಾರಿ ಶಾಲೆಯಲ್ಲಿ 35, ಬಾಳೆಹೊಳೆ ಅಂಗನವಾಡಿ ಕೇಂದ್ರದಲ್ಲಿ 25, ಯಡೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 125, ಮೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78, ದುರ್ಗದಹಳ್ಳಿ ಸಮುದಾಯ ಬವನದಲ್ಲಿ 100, ಕಳಸ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ 65, ಹೆಮ್ಮಕ್ಕಿ ಸರ್ಕಾರಿ ಶಾಲೆಯಲ್ಲಿ 40, ಕೋಟೆಮಕ್ಕಿ ಸರ್ಕಾರಿ ಶಾಲೆಯಲ್ಲಿ 40, ಗೋಣಿಬೀಡು ಮೆಟ್ರಿಕ್‌ ಪೂರ್ವ ವಸತಿ ನಿಲಯದಲ್ಲಿ 31, ಕೆಳಗೂರು ಸರ್ಕಾರಿ ಶಾಲೆಯಲ್ಲಿ 50, ಕೆಳಗೂರು ಟೀ ಎಸ್ಟೇಟ್‌ನಲ್ಲಿ 250, ಜಾವಳಿ ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ 20, ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ 70, ಮತ್ತೂಂದು ಶಾಲೆಯಲ್ಲಿ 110, ಸುಂಕಸಾಲೆ ಸರ್ಕಾರಿ ಶಾಲೆಯಲ್ಲಿ 120, ನಿಡುವಾಳೆ ಸರ್ಕಾರಿ ವೈದ್ಯರ ವಸತಿ ಗೃಹದಲ್ಲಿ 60, ವಾಟೇಖಾನ್‌ ಅಂಗನವಾಡಿ ಕೇಂದ್ರದಲ್ಲಿ 20, ಬಿದರಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ 72, ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರಿನ ಚರ್ಚ್‌ಹಾಲ್ನಲ್ಲಿ 50, ಸರ್ಕಾರಿ ಪ್ರೌಢಶಾಲೆಯಲ್ಲಿ 40, ಮಾಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ 30, ಚಿಕ್ಕಮಗಳೂರು ತಾಲೂಕಿನ ಸಂಗಮೇಶ್ವರ ಪೇಟೆ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 30, ಖಾಂಡ್ಯ ದೇವಾಲಯದಲ್ಲಿ 34, ಶಿರವಾಸೆ ವಸತಿ ನಿಲಯದಲ್ಲಿ 115 ಜನ ಆಶ್ರಯ ಪಡೆದುಕೊಂಡಿದ್ದಾರೆ ಎಂದರು. ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ತುರ್ತಾಗಿ ಬೇಕಾಗುವ ಪದಾರ್ಥಗಳನ್ನು ಖರೀದಿಸಲು ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಇಂದು ಬ್ಯಾಂಕ್‌ಗಳಿಗೆ ರಜೆ ಇದ್ದರೂ ಸಹ ಎಸ್‌ಬಿಐ ವ್ಯವಸ್ಥಾಪಕರೊಂದಿಗೆ ಮಾತನಾಡಿ ಚಿಕ್ಕಮಗಳೂರು ತಾಲೂಕಿನ ಪ್ರತಿಯೊಂದು ಕೇಂದ್ರಕ್ಕೆ ತಲಾ 1 ಲಕ್ಷ ರೂ. ಕೊಡಿಸಲಾಗಿದೆ. ಮೂಡಿಗೆರೆ ತಾಲೂಕಿನ ಎಸ್‌ಬಿಐ ಶಾಖೆಯಲ್ಲಿ ಹಣದ ಕೊರತೆ ಇದ್ದ ಹಿನ್ನೆಲೆಯಲ್ಲಿ ಪ್ರತಿ ಕೇಂದ್ರಕ್ಕೆ ತಲಾ 50 ಸಾವಿರ ರೂ. ಹಣ ಕೊಡಿಸಲಾಗಿದೆ ಎಂದು ಹೇಳಿದರು.

ಪರಿಹಾರ ಕೇಂದ್ರಗಳಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕಿರುವ ಹಿನ್ನೆಲೆಯಲ್ಲಿ ಪ್ರತಿ ಕೇಂದ್ರಕ್ಕೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿ, ಪಿಡಿಒಗಳನ್ನು ನೇಮಿಸಲಾಗಿದೆ. ಯಾವುದೇ ಪದಾರ್ಥಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಮನೆಯಲಿದ್ದ ಪದಾರ್ಥಗಳನ್ನು, ಬಟ್ಟೆಬರೆಗಳನ್ನು ಕಳೆದುಕೊಂಡಿರುವವರಿಗೆ ಎನ್‌ಡಿಆರ್‌ಎಫ್‌ ಕಾನೂನು ರೀತಿ ಒಂದು ಮನೆಗೆ 3,800 ರೂ. ಚೆಕ್‌ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೂ ಅತಿವೃಷ್ಟಿಯಿಂದಾಗಿ 7 ಜನ ಸಾವನ್ನಪ್ಪಿದ್ದಾರೆ. ಈ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಮೂಡಿಗೆರೆ ತಾಲೂಕಿನ ಸಂತೋಷ್‌ ಮತ್ತು ನಾಗಪ್ಪಗೌಡ ಅವರು ಈವರೆಗೂ ಪತ್ತೆಯಾಗಿಲ್ಲ ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆಯ 31, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ 66 ಸೇತುವೆಗಳು ಹಾಳಾಗಿದ್ದು, 30 ಕೋಟಿ ರೂ., ಕೆರೆಗಳು ಹಾಳಾಗಿ 3 ಕೋಟಿ ರೂ., ಮೆಸ್ಕಾಂನ 1181 ವಿದ್ಯುತ್‌ ಕಂಬಗಳು ಬಿದ್ದು ಹೋಗಿದ್ದು, 1.13 ಕೋಟಿ, ಬಿ.ಎಸ್‌.ಎನ್‌.ಎಲ್.ಗೆ 39 ಲಕ್ಷ ರೂ. ನಷ್ಟವಾಗಿದೆ ಎಂದು ತಿಳಿಸಿದರು. ತಾತ್ಕಾಲಿಕವಾಗಿ ಬೆಳೆ ಹಾನಿ ಅಂದಾಜಿಸಲಾಗಿದ್ದು, ಅದರಂತೆ ಕೃಷಿ ಇಲಾಖೆಯ 1,451 ಹೆಕ್ಟೇರ್‌ ಹಾಗೂ ತೋಟಗಾರಿಕೆ ಇಲಾಖೆಯ 118 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾಳಾಗಿದೆ ಎಂದರು.

Advertisement

ಅತಿವೃಷ್ಟಿ ಪರಿಹಾರಕ್ಕೆ ಸಹಾಯ ಮಾಡಲು ಹೆಚ್ಚಿನ ಜನರು ಮುಂದೆ ಬರುತ್ತಿದ್ದಾರೆ. ಅದರೊಂದಿಗೆ ಕೆಲವರು ಸಂಘಟನೆಗಳ ಹೆಸರಿನಲ್ಲಿ ಅತಿವೃಷ್ಟಿ ಪರಿಹಾರಕ್ಕೆಂದು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬರುತ್ತಿವೆ. ಈ ರೀತಿ ಹಣ ಸಂಗ್ರಹಿಸಲು ಯಾವುದೇ ಸಂಘಟನೆಗೂ ಅನುಮತಿ ನೀಡಿಲ್ಲ. ಸಾರ್ವಜನಿಕರು ಪರಿಹಾರಕ್ಕೆ ಹಣ, ವಸ್ತುಗಳನ್ನು ಕೊಡುವ ಸಂದರ್ಭದಲ್ಲಿ ಎಚ್ಚರವಹಿಸಬೇಕೆಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಆಗಿರುವ ಹಾನಿ ಎಷ್ಟು ಎಂಬ ಬಗ್ಗೆ ಪೂರ್ಣವಾಗಿ ತಿಳಿಯಲಾಗಿಲ್ಲ. ತಾತ್ಕಾಲಿಕ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಅದರಂತೆ ಜಿಲ್ಲೆಯಲ್ಲಿ ಬಾರೀ ಮಳೆಯಿಂದಾಗಿ 652 ಮನೆಗಳಿಗೆ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಯ 133 ಕಿ.ಮೀ., ಪಂಚಾಯತ್‌ ರಾಜ್‌ ಇಲಾಖೆಯ 343 ಕಿ.ಮೀ., ನಗರ ಸ್ಥಳೀಯ ಸಂಸ್ಥೆಗಳ 17 ಕಿ.ಮೀ. ಹಾಗೂ ರಾಷ್ಟ್ರೀಯ ಹೆದ್ದಾರಿಯ 4 ಕಿ.ಮೀ. ರಸ್ತೆ ಸೇರಿ ಒಟ್ಟಾರೆ 84 ಕೋಟಿ ರೂ. ನಷ್ಟವಾಗಿದೆ. •ಡಾ| ಕುಮಾರ್‌, ಅಪರ ಜಿಲ್ಲಾಧಿಕಾರಿ

ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿರುವವರಿಗೆ ನಗದು ಸಹಾಯ ನೀಡಬಯಸುವವರು ಚೆಕ್‌ ಅಥವಾ ಡಿಡಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಹೆಸರಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಸಬಹುದಾಗಿದೆ. ನೇರವಾಗಿ ಹಣ ವರ್ಗಾವಣೆ ಮಾಡಬಯಸುವವರು ಮುಖ್ಯಮಂತ್ರಿಗಳ ಪರಿಹಾರ ನಿಧಿ, ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ, ವಿಧಾನಸೌಧ ಶಾಖೆ, ಖಾತೆ ಸಂಖ್ಯೆ: 37887098605, ಐ.ಎಫ್‌.ಎಸ್‌.ಸಿ. ಕೋಡ್‌ ಎಸ್‌ಬಿಐಎನ್‌ 0040277, ಎಂ.ಐ.ಸಿ.ಆರ್‌.ಸಂಖ್ಯೆ: 560002419ಗೆ ಕಳುಹಿಸಬಹುದಾಗಿದೆ. ವಸ್ತು ರೂಪದಲ್ಲಿ ಸಾಮಗ್ರಿಗಳನ್ನು ಸಲ್ಲಿಸಲು ಇಚ್ಚಿಸುವವರು, ಭಾಸ್ಕರ್‌, ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಚೇರಿ, ಮೊಬೈಲ್ ಸಂಖ್ಯೆ 9448656976 ಅನ್ನು ಸಂಪರ್ಕಿಸಬಹುದಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next