Advertisement

ಮಳೆಹಾನಿ: 27 ಕೋಟಿ ರೂ.ಬೆಳೆ ನಷ್ಟ

02:49 PM Nov 26, 2021 | Team Udayavani |

ರಾಮನಗರ: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಸುಮಾರು 27 ಕೋಟಿ ರೂ. ಕೃಷಿ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ನಷ್ಟವನ್ನು ಅಂದಾಜಿಸುತ್ತಿದ್ದಾರೆ. ಇನ್ನೊಂದೆಡೆ, ಜಿಲ್ಲಾಧಿಕಾರಿಗಳು ಸಹ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.  ಮಾಗಡಿ, ರಾಮನಗರ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

Advertisement

ರಾಗಿ ಇಳುವರಿ ಕುಸಿತ: ಈ ಬಾರಿ ರಾಗಿ ಬಂಪರ್‌ ಬೆಳೆಯನ್ನು ನಿರೀಕ್ಷಿಸಲಾಗಿತ್ತು. ಕಟಾವಿಗೆ ಬಂದಿದ್ದ ರಾಗಿ ಪೈರು ಮಳೆಯಿಂದಾಗಿ ನೆಲಕಚ್ಚಿ ಅಲ್ಲೇ ಮೊಳಕೆಯೊಡೆದಿತ್ತು. ಇನ್ನು ಹೊಲದಲ್ಲೇ ರಾಗಿ ಪೈರು ಕೊಳೆತರೇ, ಕೆಲವೆಡೆ ಫ‌ಂಗಸ್‌ ಕಾಣಿಸಿಕೊಂಡಿದೆ. ಬುಧವಾರ ಮತ್ತು ಗುರುವಾರ ಜಿಲ್ಲೆಯಲ್ಲಿ ಸೂರ್ಯದೇವ ಕಣ್ಣಿಟ್ಟ ಕಾರಣ ಅಳಿದುಳಿದ ರಾಗಿ ಬೆಳೆ ರಕ್ಷಣೆಗೆ ರೈತರು ಮುಂದಾಗಿದ್ದಾರೆ.

ಬೆಳೆಹಾನಿ ವರದಿ: ಈಗಾಗಲೇ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಬೆಳೆ ನಷ್ಟದ ಸರ್ವೆ ಆರಂಭಿಸಿದೆ. ತೋಟಗಾರಿಕೆ ಇಲಾಖೆಯೂ ಸರ್ವೆ ನಡೆಸುತ್ತಿದೆ. ಈ ಬಾರಿ ಒಟ್ಟು 86,473 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿತ್ತು. 63 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿತ್ತು. 454 ಹೆಕ್ಟೇರ್‌ ಪ್ರದೇಶದಲ್ಲಿ ಜೋಳ, 451 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ, 320 ಹೆಕ್ಟೇರ್‌ ಪ್ರದೇಶದಲ್ಲಿ ಹುರುಳಿ ನಷ್ಟವಾಗಿದೆ. 40,419 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬೆಳೆಗೆ ಹಾನಿಯಾಗಿದೆ.

27 ಕೋಟಿ ರೂ.ನಷ್ಟದ ಅಂದಾಜು: ಒಟ್ಟು 41,644 ಹೆಕ್ಟೇರ್‌ ಪ್ರದೇಶ ಮಳೆಯಿಂದಾಗಿ ಹಾನಿಯಾಗಿದೆ, 27 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕೃಷಿ ಇಲಾಖೆ ಈಗಾಗಲೆ ಸರ್ಕಾರಕ್ಕೆ ಒಟ್ಟು 27 ಕೋಟಿ ರೂ.ಗಳ ಪರಿಹಾರ ಬೇಕಾಗಬಹುದು ಎಂದು ಪ್ರಾಥಮಿಕ ಮಾಹಿತಿ ಕೊಟ್ಟಿದೆ.

Advertisement

ರೈತ ಮುಖಂಡರ ಪ್ರಕಾರ ಒಂದು ಹೆಕ್ಟೇರ್‌ ಪ್ರದೇಶಕ್ಕೆ 6,800 ರೂ.ಪರಿಹಾರದ ಮೊತ್ತ ವನ್ನು ಸರ್ಕಾರ ನಿಗದಿ ಮಾಡುವ ಮಾಹಿತಿ ಲಭ್ಯವಾಗಿದೆ. ಆದರೆ, ಈ ಮೊತ್ತ ಸಾಕಾಗುವುದಿಲ್ಲ, ದೆಹಲಿ ಸರ್ಕಾರದ ಮಾದರಿಯಂತೆ ಹೆಕ್ಟೇರ್‌ಗೆ ತಲಾ 50 ಸಾವಿರ ರೂ.ಪರಿಹಾರ ನೀಡುವಂತೆ ರೈತ ಮುಖಂಡರು ಜಿಲ್ಲಾಡಳಿತ, ಹಾಗೂ ಸಿಎಂಗೆ ಮನವಿ ಮಾಡಿದ್ದಾರೆ.

ವಾಡಿಕೆಗಿಂತ ಅಧಿಕ ಮಳೆ : ಜಿಲ್ಲೆಯಲ್ಲಿ ನವೆಂಬರ್‌ ತಿಂಗಳಲ್ಲಿ ವಾಡಿಕೆ ಮಳೆ (ನ.25ಕ್ಕೆ ಅನ್ವಯಿಸುವಂತೆ) 50.1 ಮಿಮೀ. ಆದರೆ ಜಿಲ್ಲೆಯಲ್ಲಿ 215.1 ಮಿಮೀ. ಮಳೆಯಾಗಿದೆ ಅಂದರೆ ಶೇ.329ರಷ್ಟು ಅಧಿಕ ಮಳೆ ಯಾಗಿದೆ. ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳುಗಳಲ್ಲಿ ವಾಡಿಕೆ ಮಳೆ 208 ಎಂಎಂ ಆಗಬೇಕಿತ್ತು. ಆದರೆ 447 ಮಿಮಿ ಮಳೆಯಾಗಿದೆ. ಶೇ 115ರಷ್ಟು ಅಧಿಕ ಮಳೆಯಾಗಿದೆ. 2021ರ ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆ ಯಲ್ಲಿ 822 ಎಂ.ಎಂ ವಾಡಿಕೆ ಮಳೆಯಾಗಬೇಕಿತ್ತು. ಆದರೆ 1050 ಮಿಮಿ ಮಳೆಯಾಗಿದೆ. ಅಂದರೆ ಶೇ 28ರಷ್ಟು ಅಧಿಕ ಮಳೆಯಾಗಿದೆ.

ಹಾನಿ ಬಗ್ಗೆ ಮಾಹಿತಿ ನೀಡಿ

ರಾಮನಗರ ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತ ಸ್ಥಾಪಿಸಿರುವ ಕಂಟ್ರೋಲ್‌ ರೂಂ ಸಂಖ್ಯೆ 9113077476 ಮೂಲಕ ಸಂಪರ್ಕಿಸಿ ದೂರು ದಾಖಲಿಸಬಹುದು.

“ಕೃಷಿ ಹಾಗೂ ಕಂದಾಯ ಇಲಾಖೆ ಕಲೆ ಹಾಕಿರುವ ಮಾಹಿತಿಯಲ್ಲಿ ಸದ್ಯ ಒಟ್ಟು 41644 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆನಷ್ಟ ಆಗಿರುವುದು ಕಂಡು ಬಂದಿದೆ. ಬಿತ್ತನೆ ಪ್ರಮಾಣದಲ್ಲಿ ಶೇ.50ರಷ್ಟು ನಷ್ಟಗೊಂಡಿದೆ. 27 ಕೋಟಿ ಪರಿಹಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ರಾಗಿ ಬೆಳೆಗೆ ಹೆಚ್ಚಿನ ನಷ್ಟವಾಗಿದೆ. ಪ್ರತಿ ಗ್ರಾಮಗಳಲ್ಲಿಯು ಉಂಟಾಗಿರುವ ನಷ್ಟದ ಬಗ್ಗೆ ಸರ್ವೆ ನಡೆಯಲಿದೆ.” – ಸೋಮಸುಂದರ್‌, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ರಾಮನಗರ.

Advertisement

Udayavani is now on Telegram. Click here to join our channel and stay updated with the latest news.

Next