Advertisement

ತೈವಾನ್‌ಗೆ 27 ಯುದ್ಧ ವಿಮಾನ ಎಂಟ್ರಿ! ಕೆರಳಿದ ಚೀನದಿಂದ ಯುದ್ಧೋನ್ಮಾದ ಪ್ರದರ್ಶನ

09:43 PM Aug 03, 2022 | Team Udayavani |

ಬೀಜಿಂಗ್‌: ಅಮೆರಿಕದ ಹೌಸ್‌ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರ ತೈವಾನ್‌ ಭೇಟಿಯಿಂದ ಕೆಂಡಾಮಂಡಲವಾದ ಚೀನ ಬರೋಬ್ಬರಿ 27 ಯುದ್ಧ ವಿಮಾನಗಳನ್ನು ತೈವಾನ್‌ನ ವಾಯುಗಡಿಯೊಳಕ್ಕೆ ರವಾನಿಸಿದೆ ಎಂಬ ಆಘಾತಕಾರಿ ಮಾಹಿತಿ ಬುಧವಾರ ಹೊರಬಿದ್ದಿದೆ.

Advertisement

ಅಷ್ಟೇ ಅಲ್ಲ, ಆಕ್ರೋಶಭರಿತ ಚೀನವು ತೈವಾನ್‌ ಜಲಸಂಧಿಗೆ ಅತ್ಯಂತ ಸಮೀಪದಲ್ಲೇ ದೀರ್ಘ‌ವ್ಯಾಪ್ತಿಯ ಕ್ಷಿಪಣಿಗಳನ್ನು ಬಳಸಿಕೊಂಡು ಸೇನಾ ಕವಾಯತನ್ನೂ ನಡೆಸುವ ಮೂಲಕ ಅಪಾಯಕಾರಿ ಧೋರಣೆಯನ್ನು ಪ್ರದರ್ಶಿಸಿದೆ. ಚೀನದಲ್ಲಿರುವ ಅಮೆರಿಕ ರಾಯಭಾರಿಯನ್ನು ಕರೆಸಿಕೊಂಡು ತೀವ್ರ ಪ್ರತಿಭಟನೆಯನ್ನೂ ವ್ಯಕ್ತಪಡಿಸಿದೆ. ತೈವಾನ್‌ ವಿರುದ್ಧ ನಿರ್ಬಂಧದ ಅಸ್ತ್ರವನ್ನೂ ಪ್ರಯೋಗಿಸಿದೆ.

ಚೀನದ ಬೆದರಿಕೆಗಳಿಗೆ ಬಗ್ಗದ ತೈವಾನ್‌ ಅಧ್ಯಕ್ಷೆ ಸೈ ಇಂಗ್‌-ವೆನ್‌, 2.3 ಕೋಟಿ ಜನಸಂಖ್ಯೆಯಿರುವ ನಮ್ಮ ದೇಶವು ಯಾರಿಗೂ ಹೆದರುವುದಿಲ್ಲ. ನಮ್ಮ ಪ್ರಜಾಸತ್ತೆಗಾಗಿ, ಅದರ ಉಳಿವಿಗಾಗಿ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ, ನ್ಯಾನ್ಸಿ ಪೆಲೋಸಿ ಅವರ ತೈವಾನ್‌ ಭೇಟಿ ಮುಕ್ತಾಯವಾಗಿದ್ದು, ಅವರು ಸ್ವದೇಶಕ್ಕೆ ಮರಳಿದ್ದಾರೆ. ತೈವಾನ್‌ ಅನ್ನು ಎಂದಿಗೂ ಅಮೆರಿಕ ಕೈಬಿಡುವುದಿಲ್ಲ ಎಂಬ ಆಶ್ವಾಸನೆಯನ್ನೂ ನೀಡಿದ್ದಾರೆ.

ನಿರ್ಬಂಧದ ಅಸ್ತ್ರ
ಪ್ರತೀಕಾರದ ಕ್ರಮವಾಗಿ ತೈವಾನ್‌ ವಿರುದ್ಧ ಚೀನ ನಿರ್ಬಂಧದ ಅಸ್ತ್ರ ಪ್ರಯೋಗಿಸಿದೆ. ತೈವಾನ್‌ಗೆ ನೈಸರ್ಗಿಕ ಮರಳು ರಫ್ತು ಹಾಗೂ ಹಣ್ಣು, ಮೀನು ಮತ್ತಿತರ ಉತ್ಪನ್ನಗಳ ಆಮದನ್ನು ಸ್ಥಗಿತಗೊಳಿಸಿದೆ. ಬಿಸ್ಕಿಟ್‌ ಮತ್ತು ಪೇಸ್ಟ್ರಿ ರಫ್ತು ಮಾಡುವ 35 ತೈವಾನ್‌ನ ರಫ್ತುದಾರರಿಗೂ ನಿರ್ಬಂಧ ಹೇರಲಾಗಿದೆ. ಸ್ವಾತಂತ್ರ್ಯ ಪರ ಹೋರಾಟಗಾರರಿಗೆ ಬೆಂಬಲ ನೀಡುತ್ತಿರುವ 2 ಪ್ರತಿಷ್ಠಾನಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಚೀನಾ ಘೋಷಿಸಿದೆ.

ಇನ್ನು ಮುಂದೆ ಭಾರತದೊಂದಿಗೆ ಚೀನ ಅನುಚಿತ ವರ್ತನೆ ತೋರಿದರೆ, ನಾವು ಕೂಡ “ತೈವಾನ್‌ ಕಾರ್ಡ್‌’ ಪ್ರಯೋಗಿಸಬಹುದು. ತೈವಾನ್‌-ಭಾರತದ ನಂಟು ವೃದ್ಧಿಗೂ ನಾವು ಪ್ರಯತ್ನಿಸಬಹುದು.
– ಶಶಿ ತರೂರ್‌, ಕಾಂಗ್ರೆಸ್‌ ಸಂಸದ

Advertisement

ಮಾಜಿ ಪ್ರಧಾನಿಗಳಾದ ಜವಾಹರಲಾಲ್‌ ನೆಹರೂ ಮತ್ತು ಅಟಲ್‌ ಬಿಹಾರಿ ವಾಜಪೇಯಿಯವರ ಮೂರ್ಖತನದಿಂದಾಗಿ ಟಿಬೆಟ್‌ ಮತ್ತು ತೈವಾನ್‌ ಅನ್ನು ಚೀನದ ಭಾಗವೆಂದೇ ಭಾರತೀಯರು ಪರಿಗಣಿಸುವಂತಾಯಿತು.
– ಸುಬ್ರಮಣಿಯನ್‌ ಸ್ವಾಮಿ, ಬಿಜೆಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next