Advertisement

ತಿಂಗಳಲ್ಲಿ 260 ಮಂದಿಗೆ ಎಚ್‌1ಎನ್‌1 ಸೋಂಕು

12:51 PM Oct 07, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಎಚ್‌1ಎನ್‌1 ಸೋಂಕು ದಿನೇದಿನೆ ಉಲ್ಬಣಿಸುತ್ತಿದೆ. ಒಂದು ತಿಂಗಳಲ್ಲಿ 260 ಮಂದಿಗೆ ಸೋಂಕು ತಗುಲಿದ್ದು, ಈ ವರ್ಷದ ಪ್ರಕರಣಗಳ ಸಂಖ್ಯೆ 314ಕ್ಕೆ ಏರಿದೆ. ಸೆಪ್ಟೆಂಬರ್‌ ಆರಂಭದಿಂದ ರಾಜ್ಯದಲ್ಲಿ ಮತ್ತೆ ಎಚ್‌1ಎನ್‌1 ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದ್ದು ಜನವರಿಯಿಂದ ಆಗಸ್ಟ್‌ವರೆಗೂ ಕೇವಲ 38 ಮಂದಿಯಲ್ಲಿ ಕಾಣಿಸಿಕೊಂಡಿದ್ದ ಸೋಂಕು ಸೆಪ್ಟೆಂಬರ್‌ ತಿಂಗಳಲ್ಲಿ ಏಕಾಏಕಿ 260 ಮಂದಿಯಲ್ಲಿ ಕಾಣಿಸಿಕೊಂಡಿದೆ.

Advertisement

2017ರಲ್ಲಿ 3260 ಮಂದಿಗೆ ಸೋಂಕು ಕಾಣಿಸಿಕೊಂಡು 15 ಮಂದಿ ಸಾವಿಗೀಡಾಗಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎಚ್‌1ಎನ್‌1 ಸೋಂಕು ಹರಡುವಿಕೆ ಕಡಿಮೆ ನಿಯಂತ್ರಣದಲ್ಲಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಆದರೆ, ಸೆಪ್ಟೆಂಬರ್‌ ಒಂದೇ ತಿಂಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿರುವುದು ಮತ್ತೆ ಆತಂಕಕ್ಕೆ ಕಾರಣವಾಗಿದೆ.

ಸೋಂಕು ಕಾಣಿಸಿಕೊಂಡವರಲ್ಲಿ ಹೆಚ್ಚು ಮಂದಿ ನಗರವಾಸಿಗಳೇ ಆಗಿದ್ದಾರೆ. ಬೆಂಗಳೂರು ಮಹಾನಗರದಲ್ಲಿ ಈವರೆಗೂ 76 ಮಂದಿ ಸೋಂಕಿತರಾಗಿದ್ದಾರೆ. ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲಿಯೇ ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಇಲಾಖೆಯಿಂದ ಅಗತ್ಯ ಸಿದ್ಧತೆ: ಕಳೆದ ತಿಂಗಳಿನಿಂದ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಶಂಕಿತ ರೋಗಿಗಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗೆ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳುವಂತೆ ಆರೋಗ್ಯ ಇಲಾಖೆಯು ರಾಜ್ಯದ ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದೆ.

ರಾಜ್ಯದಲ್ಲಿ ಈವರೆಗೂ ಒಟ್ಟು 4,458 ಮಂದಿಗೆ ಶಂಕಿತ ಎಚ್‌1ಎನ್‌1 ಪರೀಕ್ಷೆ ಮಾಡಲಾಗಿದೆ. ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ಶಂಕಿತ ರೋಗಿ ಎಂದು ಎಚ್‌1ಎನ್‌1 ಸೋಂಕು ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ದೃಢಪಟ್ಟ ನಂತರ ಅವರನ್ನು ಪ್ರತ್ಯೇಕವಾಗಿರಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ. ಆ ರೋಗಿಯ ನಿವಾಸದ ಸುತ್ತಮುತ್ತಲ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ಶಂಕಿತರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

Advertisement

ಜತೆಗೆ ಆಶಾ ಕಾರ್ಯಕರ್ತೆಯರು ಹಾಗೂ ಶುಶ್ರೂಷಕಿಯರಿಂದ ಸೋಂಕಿನ ಲಕ್ಷಣಗಳು, ಮುಂಜಾಗ್ರತಾ ಕ್ರಮಗಳ ಕುರಿತು ತಿಳಿವಳಿಕೆ ಅಭಿಯಾನ ನಡೆಸಲಾಗುತ್ತಿದೆ. ಇನ್ನು ಎಚ್‌1ಎನ್‌1ಕ್ಕೆ ಟ್ಯಾಮಿ ಫ್ಲೂ ಔಷಧಿಗಳನ್ನು ಆರೋಗ್ಯ ರಕ್ಷಾ ಸಮಿತಿ ನಿಧಿಯಿಂದ ಖರೀದಿಸಲು ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ.ಶಿವರಾಜ್‌ ಸಜ್ಜನ್‌ ಶೆಟ್ಟಿ ತಿಳಿಸಿದರು.

ನೆರೆಹೊರೆ ರಾಜ್ಯಗಳಲ್ಲಿ ಸೋಂಕು ಹೆಚ್ಚಳ ಹಾಗೂ ವಾತಾವರಣ ವೈಪರಿತ್ಯದಿಂದಾಗಿ ಕಳೆದ ಎರಡು ಮೂರು ವಾರಗಳಿಂದ ಎಚ್‌1ನ್‌1 ಸೋಂಕಿನ ಪ್ರಮಾಣ ರಾಜ್ಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆರೋಗ್ಯ ಇಲಾಖೆಯು ಸೋಂಕು ತಡೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದು, ನಾಗರಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು.
– ಡಾ.ಶಿವರಾಜ್‌ ಸಜ್ಜನ್‌ ಶೆಟ್ಟಿ. ಜಂಟಿ ನಿರ್ದೇಶಕರು. ಸಾಂಕ್ರಾಮಿಕ ರೋಗ ವಿಭಾಗ, ಆರೋಗ್ಯ ಇಲಾಖೆ

ಜಿಲ್ಲೆಗಳು – ಎಚ್‌1ಎನ್‌1 ದೃಢಪಟ್ಟಿರುವ ರೋಗಿಗಳ ಸಂಖ್ಯೆ
-ಬೆಂಗಳೂರು – 87
-ಶಿವಮೊಗ್ಗ -31
-ದಕ್ಷಿಣ ಕನ್ನಡ-21
-ಮೈಸೂರು – 15
-ಹಾಸನ -15
-ಚಿಕ್ಕಮಗಳೂರು – 17
-ಧಾರವಾಡ- 14
-ಬೆಳಗಾವಿ – 14
-ದಾವಣಗೆರೆ- 12
-ಉಡುಪಿ – 10
-ಉತ್ತರ ಕನ್ನಡ-10

* ಜಯಪ್ರಕಾಶ್‌ ಬಿರಾದಾರ್‌ 

Advertisement

Udayavani is now on Telegram. Click here to join our channel and stay updated with the latest news.

Next