Advertisement

26ರಿಂದ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ

05:53 PM Nov 24, 2022 | Team Udayavani |

ಬೀದರ: ಬಸವಕಲ್ಯಾಣದ ಅನುಭವ ಮಂಟಪ ಪರಿಸರದಲ್ಲಿ ನ.26 ಮತ್ತು 27ರಂದು ವಿಶ್ವ ಬಸವಧರ್ಮ ಟ್ರಸ್ಟ್‌ ವತಿಯಿಂದ 43ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ-2022 ಆಯೋಜಿಸಲಾಗಿದೆ. ಉತ್ಸವ ಹಿನ್ನೆಲೆ ಎರಡು ದಿನಗಳ ಕಾಲ ಗೋಷ್ಠಿ ಮತ್ತು ಚಿಂತನ-ಮಂಥನ ನಡೆಯಲಿದೆ.

Advertisement

ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಅನುಭವ ಮಂಟಪದ ಅಧ್ಯಕ್ಷರಾದ ಡಾ| ಬಸವಲಿಂಗ ಪಟ್ಟದ್ದೇವರು ಮಾಹಿತಿ ನೀಡಿದರು. ಶರಣ ಕಮ್ಮಟ, ಅನುಭವ ಮಂಟಪ ಉತ್ಸವವು ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಉತ್ಸವ ಆಗಬೇಕೆಂಬ ಆಶಯ ಹಿನ್ನೆಲೆ ಪ್ರತಿ  ವರ್ಷ ಅದ್ಧೂರಿ, ಅರ್ಥಪೂರ್ಣ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. 26ರಂದು ಬೆಳಗ್ಗೆ 9:30ಕ್ಕೆ ಡಿಸಿ ಗೋವಿಂದರೆಡ್ಡಿ ಧ್ವಜಾರೋಹಣ ನೆರವೇರಿಸುವರು ಎಂದರು.

ಬೆಳಗ್ಗೆ 11ಕ್ಕೆ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನರೆಡ್ಡಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ, ವಿಧಾನ ಪರಿಷತ್‌ ಸಭಾಪತಿ ರಘುನಾಥರಾವ್‌ ಮಲ್ಕಾಪುರೆ, ಸಚಿವರಾದ ಶಂಕರ ಪಾಟೀಲ್‌ ಮುನೇನಕೊಪ್ಪ, ಪ್ರಭು ಚವ್ಹಾಣ, ಕ.ಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್‌ ಸೇಡಂ ಪಾಲ್ಗೊಳ್ಳುವರು. ಡಾ| ಬಸವಲಿಂಗ ಪಟ್ಟದ್ದೇವರು, ಇಳಕಲ್‌ನ ಗುರುಮಹಾಂತ ಸ್ವಾಮಿಗಳು, ಡಾ| ಚನ್ನವೀರ ಶಿವಾಚಾರ್ಯರು, ಡಾ| ಶಿವಾನಂದ
ಸ್ವಾಮಿಗಳು ಸಾನ್ನಿಧ್ಯ ವಹಿಸುವರು ಎಂದರು.

ನ.26ರಂದು ಮಧ್ಯಾಹ್ನ 3ಕ್ಕೆ “ಅನುಭವ ಮಂಟಪ ಪ್ರಜಾಪ್ರಭುತ್ವದ ಜನನಿ’ ಕುರಿತು ಮೊದಲ ಗೋಷ್ಠಿ ನಡೆಯಲಿದೆ. ಇದೇ ವೇಳೆ ಡಾ| ಸೋಮನಾಥ ಯಾಳವಾರ ಅವರಿಗೆ ಡಾ| ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪುರಸ್ಕಾರ-2022 ಮತ್ತು ಡಾ| ಕಲ್ಯಾಣರಾವ್‌ ಪಾಟೀಲ್‌ ಅವರಿಗೆ ಡಾ| ಎಂ.ಎಂ. ಕಲಬುರಗಿ ರಾಷ್ಟ್ರೀಯ ಸಾಹಿತ್ಯ ಸಂಶೋಧನಾ ಪುರಸ್ಕಾರ-2022 ಪುರಸ್ಕಾರ ಪ್ರದಾನ ಮತ್ತು ಕನ್ನಡದ 3, ಮರಾಠಿಯ 8 ಹಾಗೂ ತೆಲುಗಿನ 4 ಗ್ರಂಥ ಲೋಕಾರ್ಪಣೆ ನಡೆಯಲಿದೆ ಎಂದರು.

ನ.27ರಂದು ಬೆಳಗ್ಗೆ 7.30ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಲಿದೆ. ಡಾ| ಬಸವಲಿಂಗ ಪಟ್ಟದ್ದೇವರು ಪ್ರಾತ್ಯಕ್ಷಿಕೆ ನಡೆಸಿಕೊಡುವರು. ಪೂಜ್ಯರು, ಗಣ್ಯರು ಪಾಲ್ಗೊಳ್ಳುವರು. ಬೆಳಗ್ಗೆ 10.30ಕ್ಕೆ ಗೋಷ್ಠಿ-2 ಲಿಂಗಾಯತ ಧರ್ಮ-ಜಾಗತಿಕ ಪ್ರಸಾರದ ರೀತಿ ಕುರಿತು ಚರ್ಚೆ ನಡೆಯಲಿದೆ.

Advertisement

ಪಂಡಿತಾರಾಧ್ಯ ಶಿವಾಚರ್ಯರು ಸಾನ್ನಿಧ್ಯ, ವಿನಯ ಗುರೂಜಿ ಅಧ್ಯಕ್ಷತೆ ವಹಿಸುವರು. ಈ ವೇಳೆ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಮಕ್ಕಳು ರೂಪಕ ಪ್ರದರ್ಶಿಸುವರು. ಮಧ್ಯಾಹ್ನ 2ಕ್ಕೆ ಉತ್ಸವದ ಸಮಾರೋಪ ಸಮಾರಂಭ ಜರುಗಲಿದೆ.

ಶರಣರ ಗ್ರಾಮಗಳಿಂದ ಜ್ಯೋತಿಗಳು: ಬೀದರ ಜಿಲ್ಲೆಯ ವಿವಿಧ ಗ್ರಾಮಗಳಿಂದ ಮೊಳಗೆ ಮಾರಯ್ಯ, ಕಿನ್ನರಿ ಬೊಮ್ಮಯ್ಯ, ಲದ್ದಿ ಸೋಮಯ್ಯ, ಕುಂಬಾರ ಗುಂಡಯ್ಯ, ಡೋಹರ ಕಕ್ಕಯ್ಯ, ಮುಗಸಂಗಯ್ಯ, ಬಾಲ ಸಂಗಯ್ಯ, ಮೇದಾರ ಕೇತಯ್ಯ ಸೇರಿದಂತೆ ಅನೇಕ ಶರಣರ ಜ್ಯೋತಿಗಳು ಕಲ್ಯಾಣಕ್ಕೆ ನ.25ರಂದು ಬರಲಿವೆ. ಎಲ್ಲರೂ ಸೇರಿ ಬಸವೇಶ್ವರ ಮಂದಿರದಿಂದ ಅನುಭವ ಮಂಟಪಕ್ಕೆ ಮೆರವಣಿಗೆ ಮೂಲಕ ಬರುವರು ಎಂದು ಹೇಳಿದರು.

12ನೇ ಶತಮಾನದಲ್ಲಿ ಮುಚ್ಚಳದಿಂದಾಗಿಯೇ ಮುಚಳಂಬ ಎಂಬ ಹೆಸರು ಪಡೆದಿರುವ ಈ ಗ್ರಾಮದ ಮುಖಂಡರಾದ ಆನಂದ ದೇವಪ್ಪ ಅವರು ಉತ್ಸವ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದಾರೆ. ಉತ್ಸವದಲ್ಲಿ ಇವರು ತಮ್ಮ ಗ್ರಾಮದಿಂದ ಮಣ್ಣಿನಿಂದ ಮಾಡಲಾಗುವ 1100 ಮುಚ್ಚಳಗಳನ್ನು ತಂದು ಪ್ರಸಾದ ಸೇವನೆಗೆ ನೀಡಲಿದ್ದಾರೆ. ಅಂಬಲಿ ಹಾಗೂ ಜೋಳದ ಬಾನಾ ಸವಿಯಲು ಈ ಮುಚ್ಚಳವನ್ನು ಉಪಯೋಗಿಸಲಾಗುತ್ತದೆ ಎಂದು ತಿಳಿಸಿದರು. ಮಹಾಲಿಂಗ ದೇವರು, ಬಿಡಿಎ ಅಧ್ಯಕ್ಷ ಬಾಬು ವಾಲಿ, ಬಸವರಾಜ ಧನ್ನೂರು, ಆನಂದ ದೇವಪ್ಪ, ಜಯರಾಜ ಖಂಡ್ರೆ, ಶ್ರೀಕಾಂತ ಸ್ವಾಮಿ ಇದ್ದರು.

ಲಕ್ಷ ದೇಣಿಗೆ ನೀಡಿದ ವಾಲಿ
ಅನುಭವ ಮಂಟಪ ಉತ್ಸವದ ಪ್ರಸಾದಕ್ಕಾಗಿ ಬಿಡಿಎ ಅಧ್ಯಕ್ಷ ಬಾಬು ವಾಲಿ ಅವರು, ಸುದ್ದಿಗೋಷ್ಠಿಯಲ್ಲೇ ಶ್ರೀಗಳಿಗೆ ಒಂದು ಲಕ್ಷ ರೂ.ಗಳ ಚೆಕ್‌ಅನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ವಾಲಿ, ಉತ್ಸವದಲ್ಲಿ ಯುವಕರು ಸೇರಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ನಾಡಿನ ಮಾನವ ಕುಲದ ದೊಡ್ಡ ಉತ್ಸವ ಇದಾಗಿದ್ದು, ಎಲ್ಲರೂ ಸೇರಿ ಉತ್ಸವದ ಯಶಸ್ಸಿಗೆ ಶ್ರಮಿಸೋಣ ಎಂದರು.

ಕಳೆದ ಕೆಲ ವರ್ಷಗಳಿಂದ ಸ್ಥಗಿತಗೊಂಡಿರುವ ಬಸವ ಉತ್ಸವವನ್ನು ಜಿಲ್ಲಾಡಳಿತ ಈ ಬಾರಿ ಆಚರಿಸಬೇಕು. ಅನುಭವ ಮಂಟಪದ ಕಾಮಗಾರಿ ನಡೆಯುತ್ತಿದೆ. ನಿಗದಿತ ಕಾಲಾವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಬೇಕು. ಅನುಭವ ಮಂಟಪ ಉತ್ಸವದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ಸಿಗೆ ಕಾರಣಿಭೂತರಾಗಬೇಕು.
ಬಸವರಾಜ ಧನ್ನೂರು, ರಾಷ್ಟ್ರೀಯ ಅಧ್ಯಕ್ಷರು, ಬಸವ ದಳ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next