ಹ್ಯೂಸ್ಟನ್: ಅಮೆರಿಕದಲ್ಲಿ “ಗನ್ ಭಯೋತ್ಪಾದನೆ’ಯ ಅಟ್ಟಹಾಸ ಮುಂದುವರಿದಿದ್ದು, ಟೆಕ್ಸಾಸ್‌ನಲ್ಲಿ ಬಂದೂಕುಧಾರಿಯ “ಹುಚ್ಚು’ ದಾಳಿಗೆ 26 ಮಂದಿ ಸಾವಿಗೀಡಾಗಿದ್ದಾರೆ.
ಟೆಕ್ಸಾಸ್‌ನ ಸದರ್‌ಲ್ಯಾಂಡ್ ಸ್ಪ್ರಿಂಗ್ಸ್‌ನ ಫಸ್ಟ್ ಬಾಪ್ಟಿಸ್ಟ್ ಚರ್ಚ್‌ನಲ್ಲಿ ರವಿವಾರದ ಪ್ರಾರ್ಥನೆ ವೇಳೆ ಈ ಘಟನೆ ಸಂಭವಿಸಿದೆ. ಅಮೆರಿಕ ವಾಯುಪಡೆಯ ಮಾಜಿ ಸಿಬಂದಿ ಡೆವಿನ್ ಪ್ಯಾಟ್ರಿಕ್ ಕೆರ್ರಿ ಶಸ್ತ್ರಧಾರಿಯಾಗಿ ಬಂದು ಚರ್ಚ್ ಆವರಣದಲ್ಲಿ ಹಠಾತ್ತಾಗಿ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯ ಗೊಂಡಿದ್ದಾರೆ.
ಇದು ಟೆಕ್ಸಾಸ್‌ನ ಇತಿಹಾಸದಲ್ಲೇ ನಡೆದ ಅತ್ಯಂತ ಭೀಕರ ಸಾಮೂಹಿಕ ಹತ್ಯೆ ಎಂದು ಬಣ್ಣಿಸಲಾಗಿದೆ. ಪದೇ ಪದೇ ಇಂಥ ಘಟನೆ ನಡೆಯುತ್ತಿರುವುದು ಅಮೆರಿಕನ್ನರ ನಿದ್ದೆ ಗೆಡಿಸುವಂತೆ ಮಾಡಿದೆ. ಅಲ್ಲದೆ ಈತನೊಬ್ಬ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ.
ಬಂದೂಕುಧಾರಿಯು ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದ. ಆತನ ಎಲ್ಲ ಉಡುಪುಗಳೂ ಕಪ್ಪು ಬಣ್ಣದಿಂದ ಕೂಡಿದ್ದವು. ಪ್ರಾರ್ಥನೆಯಲ್ಲಿ ತೊಡಗಿದ್ದವರ ಮೇಲೆ ರಗರ್ ಮಿಲಿಟರಿ ಶೈಲಿಯ ರೈಫಲ್‌ನಿಂದ ಗುಂಡಿನ ಮಳೆಗರೆದಿದ್ದಾನೆ. ಪ್ರಾಣ ಕಳೆದುಕೊಂಡವರಲ್ಲಿ 5ರ ಹರೆಯದ ಮಕ್ಕಳಿಂದ ಹಿಡಿದು ಮಹಿಳೆಯರು, ಗರ್ಭಿಣಿಯರೂ ಸೇರಿದ್ದಾರೆ.
ದುರದೃಷ್ಟವಶಾತ್ ಅಸುನೀಗಿದವರ ಪೈಕಿ 8 ಮಂದಿ ಒಂದೇ ಕುಟುಂಬದವರು. ಈ ಮಧ್ಯೆ ದಾಳಿಕೋರ ನಿಗೂಢವಾಗಿ ಸತ್ತಿದ್ದು, ಆತನ ಕಾರಿನಲ್ಲೇ ಶವ ಪತ್ತೆಯಾಗಿದೆ. ಜತೆಗೆ ಭಾರೀ ಶಸ್ತ್ರಾಸ್ತ್ರಗಳೂ ಪತ್ತೆಯಾಗಿವೆ.