Advertisement

ಶಿಕ್ಷಣ ಸುಧಾರಣೆಗಾಗಿ 26 ಅಂಶಗಳ ಮನವಿ

12:38 PM Aug 09, 2018 | Team Udayavani |

ಬೆಂಗಳೂರು: ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಮತ್ತು ವಿವಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಅತಿ ಶೀಘ್ರವೇ ಭರ್ತಿ ಮಾಡುವುದು ಸೇರಿದಂತೆ ಉನ್ನತ ಶಿಕ್ಷಣದ ಸುಧಾರಣೆಗೆ 26 ಅಂಶಗಳ
ಮನವಿಯನ್ನು ರಾಜ್ಯದ ವಿಶ್ರಾಂತ ಕುಲಪತಿಗಳು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರಿಗೆ ಸಲ್ಲಿಸಿದ್ದಾರೆ.

Advertisement

ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿರುವ ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆಯ ಕಚೇರಿಗೆ ಬುಧವಾರ ಭೇಟಿ ನೀಡಿದ ಸಚಿವರು, ಉನ್ನತ ಶಿಕ್ಷಣದ ಸಮಗ್ರ ಅಭಿವೃದ್ಧಿ ಹಾಗೂ ಉನ್ನತೀಕರಣಕ್ಕಾಗಿ ವಿಶ್ರಾಂತ ಕುಲಪತಿಗಳಿಂದ
ಸಲಹೆ ಪಡೆದರು. 

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನೂತನ ನೀತಿ ನಿಯಮ ರಚಿಸುವಾಗ ಹಾಗೂ ಅನುಷ್ಠಾನಗೊಳಿಸುವಾಗ ವಿಶ್ರಾಂತ ಕುಲಪತಿಗಳ ವೇದಿಕೆಯೊಂದಿಗೆ ಸಮಾಲೋಚಿಸಬೇಕು. ಸೆನೇಟ್‌, ಸಿಂಡಿಕೇಟ್‌ ಹಾಗೂ ಆಡಳಿತ ಮಂಡಳಿಗಳಲ್ಲಿ ಸದಸ್ಯರನ್ನು ನೇಮಕ ಮಾಡುವಾಗ ಶಿಕ್ಷಣ, ಆರ್ಥಿಕ, ಔದ್ಯೋಗಿಕ, ಕಲೆ, ವಿಜ್ಞಾನ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ಅದ್ಯತೆ ನೀಡಬೇಕು. ವಿವಿ ಶಿಕ್ಷಣದಲ್ಲಿ ಕೌಶಲಾಭಿವೃದ್ಧಿಗೆ ಒತ್ತು ನೀಡಬೇಕು. ರಾಜ್ಯದ ಒಂದು ವಿವಿಯನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಅಗತ್ಯ ಕ್ರಮ ರೂಪಿಸಿ ಅನುಷ್ಠಾನ ಮಾಡಬೇಕು. ರಾಜ್ಯ
ಉನ್ನತ ಶಿಕ್ಷಣ ಮತ್ತು ಸಂಶೋಧನಾ ಪರಿಷತ್‌ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದ ವಿಶ್ವವಿದ್ಯಾಲಯ ಕಾಯ್ದೆ 2000 ಅನ್ನು ಪರಿಶೋಧಿಸಿ ಪುನರ್‌ ರಚನೆ ಮಾಡಬೇಕು. ವಿವಿಗಳಲ್ಲಿ ಸಂಶೋಧನೆಗೆ ಉತ್ತೇಜನ ನೀಡಲು ಅನುದಾನ ಮೀಸಲಿಡಬೇಕು. ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆ ವತಿಯಿಂದ ಉನ್ನತ ಶಿಕ್ಷಣ ಸಂಬಂಧ ಸಮಕಾಲೀನ ಸಮಾನತೆಗಳು ಹಾಗೂ ಪರಿಹಾರೋಪಾಯ ಕುರಿತು ರಾಷ್ಟ್ರಮಟ್ಟದ ಸಮ್ಮೇಳನ ಹಮ್ಮಿಕೊಳ್ಳಬೇಕು ಎಂಬುದು ಸೇರಿದಂತೆ 26 ಮನವಿ ನೀಡಲಾಗಿದೆ ಎಂದು ವೇದಿಕೆಯ ಕಾರ್ಯದರ್ಶಿ ಡಾ.ಎನ್‌.ಆರ್‌.ಶ್ರೀನಿವಾಸ್‌ಗೌಡ ತಿಳಿಸಿದರು.

ವಿಶ್ರಾಂತ ಕುಲಪತಿಗಳಾಡ ಡಾ.ಎನ್‌.ಆರ್‌. ಶೆಟ್ಟಿ, ಡಾ.ಎನ್‌. ಪ್ರಭುದೇವ್‌, ಪ್ರೊ.ಕೆ.ಎಸ್‌. ರಂಗಪ್ಪ ಉಪಸ್ಥಿತರಿದ್ದರು. 
 ಶೈಕ್ಷಣಿಕ ಮೂಲಸೌಕರ್ಯಕ್ಕೆ ಒತ್ತು ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಸ್ವಾಯತ್ತತೆ ಮತ್ತು ಹೊಣೆಗಾರಿಕೆ ಇರುವಂತೆ ಆಡಳಿತ ನಡೆಯಬೇಕು. ಸಂಶೋಧನೆಗೆ ಒತ್ತು ಕೊಡುವ ಮೂಲ ಸೌಕರ್ಯ, ಆರ್ಥಿಕ ಸಂಪನ್ಮೂಲ ಒದಗಿಸಬೇಕು. ವಿಶಿಷ್ಟ ಅಧ್ಯಯನ ವಿಷಯಗಳ ಸಂಬಂಧ ನೂತನ ವಿವಿ ಸ್ಥಾಪಿಸುವ ಬದಲು ಅಂತಹ ಅಧ್ಯಯನದ ವಿಷಯಗಳಿಗೆ ಸಂಬಂಧಿಸಿದಂತೆ ಉನ್ನತ ಪ್ರಾದೇಶಿಕ ಕೇಂದ್ರ ರಚನೆ ಮಾಡಬೇಕು ಎಂದು ವಿಶ್ರಾಂತ ಕುಲಪತಿಗಳು ಮನವಿ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next