Advertisement

ಅವ್ಯವಸ್ಥೆಯ ಆಗರ ಕಡಬ ಸಾರ್ವಜನಿಕ ರುದ್ರಭೂಮಿ

12:18 AM Nov 04, 2019 | Sriram |

ಕಡಬ: ಕಡಬವು ತಾಲೂಕು ಕೇಂದ್ರವಾಗಿ ಮೇಲ್ದರ್ಜೆಗೇರಿದ್ದರೂ ಇಲ್ಲಿನ ಸಾರ್ವಜನಿಕ ರುದ್ರಭೂಮಿ ಮೂಲ ಸೌಕರ್ಯವಿಲ್ಲದೆ ಅವ್ಯವಸ್ಥೆಯ ಆಗರವಾಗಿದೆ.

Advertisement

ಶವಸಂಸ್ಕಾರಕ್ಕಾಗಿ ಆಧುನಿಕ ವ್ಯವಸ್ಥೆಯ ಸುಸಜ್ಜಿತ ರುದ್ರಭೂಮಿ ಬೇಕು ಎನ್ನುವ ಗ್ರಾಮಸ್ಥರ ಬೇಡಿಕೆಗೆ ಯಾವುದೇ ರೀತಿಯ ಮಾನ್ಯತೆ ಸಿಕ್ಕಿಲ್ಲ.

ಕಾದಿರಿಸಿದ ಭೂಮಿ ಇದೆ
ರುದ್ರಭೂಮಿಗಾಗಿ ಗ್ರಾ.ಪಂ. ವ್ಯಾಪ್ತಿಯ ಕಲ್ಲಂತಡ್ಕದಲ್ಲಿ ಕಡಬ-ಪಂಜ ರಸ್ತೆಯ ಪಕ್ಕದಲ್ಲಿ ಸ.ನಂ. 306/1ಎ1 ಯಲ್ಲಿ 1.03 ಎಕರೆ ಭೂಮಿ ಕಾದಿರಿಸಲಾಗಿದೆ. ಸದ್ರಿ ಭೂಮಿಯಲ್ಲಿ ಸಾಧಾರಣ ಚಿತಾಗಾರ ಇದೆಯಾದರೂ ಅಲ್ಲಿ ಸಮರ್ಪಕ ವ್ಯವಸ್ಥೆಗಳಿಲ್ಲ. ಇರುವ ಕಟ್ಟಡ ನಿರ್ವಹಣೆ ಇಲ್ಲದೆ ಪಾಳುಬಿದ್ದಿದೆ. ಚಿತಾಗಾರದ ಛಾವಣಿಯ ತಗಡು ಶೀಟುಗಳು ಗಾಳಿಗೆ ಹಾರಿಹೋಗಿವೆ. ಸರಿಯಾದ ಸಂಪರ್ಕ ರಸ್ತೆ ನಿರ್ಮಾಣವಾಗಿಲ್ಲ. ಜಮೀನಿನ ಸುತ್ತ ಆವರಣಗೋಡೆ ನಿರ್ಮಿಸಿ ಅತಿಕ್ರಮಣ ತಡೆಯಲು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಸರಕಾರವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ರುದ್ರಭೂಮಿ ಹಾಗೂ ಆಧುನಿಕ ವಿದ್ಯುತ್‌ ಚಿತಾಗಾರ ಒದಗಿಸುವ ಬಗ್ಗೆ 2011-12ನೇ ಸಾಲಿನಲ್ಲಿ 60 ಕೋಟಿ ರೂ. ಅನುದಾನವನ್ನು ಮೀಸಲಿರಿಸಿತ್ತು. ಈ ವಿಚಾರದ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಡಬ ವಿಶೇಷ ತಹಶೀಲ್ದಾರರ ಕಚೇರಿಗೆ ಬಂದ ಮಾಹಿತಿಯನ್ನು ಅನುಸರಿಸಿ ಕಡಬ ಗ್ರಾ.ಪಂ. ಆಡಳಿತವು ಜಿ.ಪಂ. ಎಂಜಿನಿಯರಿಂಗ್‌ ಮೂಲಕ 26.08 ಲಕ್ಷ ರೂ. ಗಳ ಅಂದಾಜು ಪಟ್ಟಿ ತಯಾರಿಸಿ ಸರಕಾರಕ್ಕೆ ಕಳುಹಿಸಿದೆ.

ಅಂದಾಜು ಪಟ್ಟಿಯಲ್ಲಿ ರುದ್ರಭೂಮಿಯ ಆವರಣದೊಳಗೆ ಕಾವಲುಗಾರನ ಶೆಡ್‌, ಪ್ರಾರ್ಥನ ಮಂದಿರ, ವಿದ್ಯುತ್‌ ಚಿತಾಗಾರ, ಶೌಚಾಲಯ ಇತ್ಯಾದಿಗೆ 20.58 ಲಕ್ಷ ರೂ., ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ 3.5 ಲಕ್ಷ ರೂ. ಹಾಗೂ ಕೊಳವೆ ಬಾವಿಗಾಗಿ 2 ಲಕ್ಷ ರೂ.ಗಳನ್ನು ವಿಂಗಡಿಸಲಾಗಿದೆ. ಆದರೆ ಇವೆಲ್ಲ ಆಗಿ ಹಲವು ವರ್ಷಗಳೇ ಸಂದರೂ ವಿದ್ಯುತ್‌ ಚಿತಾಗಾರದ ಕನಸು ನನಸಾಗಿಲ್ಲ. ಸದ್ಯಕ್ಕೆ ವಿದ್ಯುತ್‌ ಚಿತಾಗಾರ ಇಲ್ಲದೇ ಇದ್ದರೂ ಇರುವ ಸ್ಮಶಾನಕ್ಕೆ ಸೂಕ್ತ ಸೌಲಭ್ಯಗಳನ್ನಾದರೂ ನೀಡುವ ವ್ಯವಸ್ಥೆ ಆಗಬೇಕಿದೆ. ಸುಸಜ್ಜಿತ ರುದ್ರಭೂಮಿ ನಿರ್ಮಾಣಕ್ಕಾಗಿ 26.08 ಲಕ್ಷ ರೂ.ಗಳ ಅಂದಾಜು ಪಟ್ಟಿ ತಯಾರಿಸಿ ಸರಕಾರಕ್ಕೆ ಕಳುಹಿಸಿ ಹಲವು ವರ್ಷಗಳು ಕಳೆದರೂ ಬಿಡುಗಡೆಯಾಗಿರುವುದು 4 ಲಕ್ಷ ರೂ. ಮಾತ್ರ. ಅದೂ ಬಳಕೆಯಾಗದೆ 7 ವರ್ಷಗಳಿಂದ ತಹಶೀಲ್ದಾರರ ಖಾತೆಯಲ್ಲಿಯೇ ಉಳಿದಿದೆ.

Advertisement

ಅನುದಾನ ಸಿಗಲಿದೆ
2 ಲಕ್ಷ ರೂ. ಪಂಚಾಯತ್‌ ಅನುದಾನದಲ್ಲಿ ರಸ್ತೆ ನಿರ್ಮಿಸಿ, ರುದ್ರಭೂಮಿಯ ಜಾಗಕ್ಕೆ ತಂತಿ ಬೇಲಿ ನಿರ್ಮಿಸುವ ಸಿದ್ಧತೆ ನಡೆದಿದೆ. ಕಡಬವನ್ನು ಇದೀಗ ಪಟ್ಟಣ ಪಂಚಾಯತ್‌ ಆಗಿ ಸರಕಾರ ಮೇಲ್ದರ್ಜೆಗೇರಿಸಿ ಅದೇಶಿಸಿದೆ. ಮುಂದಿನ ದಿನಗಳಲ್ಲಿ ಕಡಬದ ಅಭಿವೃದ್ಧಿಗೆ ಹೆಚ್ಚಿನ ಅನುದಾನಗಳು ಲಭಿಸುವ ನಿರೀಕ್ಷೆ ಇದ್ದು, ಆ ಸಂದರ್ಭದಲ್ಲಿ ರುದ್ರಭೂಮಿಯ ಅಭಿವೃದ್ಧಿಗೂ ಅನುದಾನ ಸಿಗಲಿದೆ.
– ಬಾಬು ಮೊಗೇರ
ಕಡಬ ಗ್ರಾ.ಪಂ. ಅಧ್ಯಕ್ಷ

ಬಳಕೆಗೆ ಕ್ರಮ
ಮಂಜೂರುಗೊಂಡಿರುವ 4 ಲಕ್ಷ ರೂ. ಅನುದಾನವನ್ನು ಬಳಸಿ ರುದ್ರಭೂಮಿಗೆ ಹೊಸದಾದ ಚಿತಾಗಾರ ಅಳವಡಿಸಿ ಸೌಲಭ್ಯಗಳನ್ನು ನೀಡಲು ಪ್ರಯತ್ನ ನಡೆಸಲಾಗುತ್ತಿದೆ. ಲಭ್ಯ ಇರುವ ಅನುದಾನ ಬಳಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅಂದಾಜುಪಟ್ಟಿ ತಯಾರಿಸಿ ಜಿಲ್ಲಾಧಿಕಾರಿ ಅನುಮತಿಗಾಗಿ ಕಳುಹಿಸಿದೆ. ಅನುಮತಿ ಲಭಿಸಿದ ಕೂಡಲೇ ಕಾಮಗಾರಿ ನಡೆಯಲಿದೆ.
– ಪಿ.ಪಿ.ವರ್ಗೀಸ್‌
ಜಿ.ಪಂ. ಸದಸ್ಯ, ಕಡಬ

ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next