ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆ ಮಂಡನೆಯಾಗಿ ಕಳೆದ ರವಿವಾರಕ್ಕೆ 25 ವರ್ಷ. 1996ರಲ್ಲಿ ದೇವೇಗೌಡ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಈ ಮಸೂದೆಯನ್ನು ಪ್ರಥಮ ಬಾರಿಗೆ ರಾಜ್ಯಸಭೆ ಮತ್ತು ಲೋಕಸಭೆಗಳೆರಡರಲ್ಲೂ ಮಂಡಿಸಲಾಗಿತ್ತು. ಇಂದಿಗೂ ಈ ಮಸೂದೆ ಜಾರಿಯಾಗಿಲ್ಲ.
ಇತಿಹಾಸ:
ಮಹಿಳಾ ಮೀಸಲಾತಿಯ ಕಲ್ಪನೆ ಹುಟ್ಟಿಕೊಳ್ಳುವುದು 1993ರಲ್ಲಿ. ಆಗ ಪಿ.ವಿ.ನರಸಿಂಹರಾವ್ ಅವರ ಸರಕಾರ ದೇಶದ ಎಲ್ಲ ಸರಪಂಚರು ಅಥವಾ ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ನೀಡಬೇಕು ಎಂಬ ನಿರ್ಧಾರ ತೆಗೆದುಕೊಂಡಿತ್ತು. ಇದೇ ಐಡಿಯಾವನ್ನು ಇರಿಸಿಕೊಂಡು 1996ರಲ್ಲಿ ಮಹಿಳೆಯರಿಗೆ ಶೇ. 33ರ ಮೀಸಲಾತಿ ನೀಡಬೇಕು ಎಂಬ ಮಸೂದೆ ರೂಪಿಸಲಾಯಿತು.
ಹಲವಾರು ಬಾರಿ ಮಂಡನೆ :
1996ರಲ್ಲಿ ಮಸೂದೆ ಬಿದ್ದು ಹೋದರೂ 1998, 1999 ಮತ್ತು 2008ರಲ್ಲೂ ಈ ಮಸೂದೆಯನ್ನು ಮತ್ತೆ ಸಂಸತ್‌ನಲ್ಲಿ ಮಂಡಿಸಲಾಯಿತು. ಆದರೂ ಇಲ್ಲಿ ಜಾರಿಯಾಗಲೇ ಇಲ್ಲ. ಆದರೆ, 2010ರ ಮಾರ್ಚ್ 9ರಂದು ಈ ಮಸೂದೆಗೆ ಒಪ್ಪಿಗೆ ಸಿಗುತ್ತದೆ ಎಂದೆಣಿಸಲಾಗಿತ್ತು. ಅಂದು ಸಂಸತ್ ಮುಂದೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಮತ್ತು ಎಡಪಕ್ಷದ ಬೃಂದಾ ಕಾರಟ್ ಒಟ್ಟಿಗೇ ಫೋಟೋಗೆ ಪೋಸ್ ಕೊಟ್ಟು ಬಿಲ್ ಪಾಸಾಗುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದರು. ಆದರೂ ಲೋಕಸಭೆಯಲ್ಲಿ ಈ ಬಿಲ್‌ಗೆ ಒಪ್ಪಿಗೆ ಸಿಗಲೇ ಇಲ್ಲ.
ಅನಂತರ ಮಂಡನೆ ಆಗಲೇ ಇಲ್ಲ :
2010ರ ಅನಂತರ ಮಹಿಳಾ ಮಸೂದೆ ಮತ್ತೆ ಮಂಡನೆಯಾಗಿಲ್ಲ. ಈಗ ಬಿಜೆಪಿಗೆ ಪೂರ್ಣ ಬಹುಮತವಿದ್ದು, ಸಂಸತ್‌ನಲ್ಲಿ ಮಂಡಿಸಿ ಒಪ್ಪಿಗೆ ಪಡೆಯಬಹುದು ಎಂಬುದು ವಿಪಕ್ಷಗಳ ಆಗ್ರಹ. ಆದರೆ ನಾವು ಮೀಸಲಾತಿಗೂ ಹೊರತಾಗಿ ಪಕ್ಷದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿದ್ದೇವೆ ಎಂದು ಹೇಳಿದೆ.
ಸಂಸತ್‌ನಲ್ಲಿ ಮಹಿಳಾ ಪ್ರಾತಿನಿಧ್ಯ :
78: ಮಹಿಳಾ ಸಂಸದರ ಸಂಖ್ಯೆ
14%: ಸಂಸತ್‌ನಲ್ಲಿ ಮಹಿಳೆಯರ ಪ್ರಮಾಣ
4,000: ದೇಶದಲ್ಲಿರುವ ಒಟ್ಟಾರೆ ಮಹಿಳಾ ಶಾಸಕಿಯರ ಸಂಖ್ಯೆ
9%: ಪ್ರಮಾಣ