Advertisement

ಸುದೀಪ್‌ ಚಿತ್ರರಂಗಕ್ಕೆ ಬಂದು 25 ವರ್ಷ: ಕಿಚ್ಚನ ಅಂತರಾಳದಿಂದ…

08:39 AM Jan 31, 2021 | Team Udayavani |

ಅಭಿಮಾನಿಗಳ ಪಾಲಿನ‌ ಪ್ರೀತಿಯ ಕಿಚ್ಚ ಸುದೀಪ್‌ ಚಿತ್ರರಂಗಕ್ಕೆ ಬಂದು 25 ವರ್ಷ ಆಗಿದೆ. ಈ 25 ವರ್ಷದಲ್ಲಿ ಸುದೀಪ್‌ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಈಗ ಸುದೀಪ್‌ ಬಹುಭಾಷೆಯಲ್ಲಿ ಸ್ಟಾರ್‌ ನಟ. ಕೋಟಿ ಕೋಟಿ ಸಂಭಾವನೆ, ಬಿಗ್‌ ಬಜೆಟ್‌ ಸಿನಿಮಾಗಳು ಅವರ ಸುತ್ತ ಸುತ್ತುತ್ತವೆ. ಆದರೆ, ಆರಂಭದಲ್ಲಿ ಸುದೀಪ್‌ ಕೂಡಾ ಎಲ್ಲಾ ಹೊಸ ನಟರಂತೆ ಒಂದು ಶಿಳ್ಳೆ, ಚಪ್ಪಾಳೆ, ಹೌಸ್‌ಫ‌ುಲ್‌ ಬೋರ್ಡ್‌, ಕಟೌಟ್‌ಗಾಗಿ ಆಸೆ ಪಟ್ಟವರು. ಈಗ ಅವೆಲ್ಲವೂ ಸಾಧ್ಯವಾಗಿದೆ. ಅದಕ್ಕೆ ಕಾರಣ ಸುದೀಪ್‌ ಅವರು ಶ್ರಮ. ಎಷ್ಟೇ ಕಷ್ಟವಾದರೂ, ಏನೇ ಬೇಸರವಾದರೂ ಈ ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂಬ ತುಡಿತ ಇವತ್ತು ಎಲ್ಲವನ್ನು ಸಾಧ್ಯವಾಗಿಸಿದೆ. ವೃತ್ತಿ ಜೀವನಕ್ಕೆ 25 ವರ್ಷವಾದ ಹಿನ್ನೆಲೆಯಲ್ಲಿ ಸುದೀಪ್‌ ದುಬೈನಿಂದ ವರ್ಚುವಲ್‌ ಪ್ರಸ್‌ ಮೀಟ್‌ ಮೂಲಕ ತಮ್ಮ ಸಿನಿ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ. ಅದು ಅವರದೇ ಮಾತುಗಳಲ್ಲಿ…

Advertisement

ಅದು “ಹುಚ್ಚ’ ಚಿತ್ರದ ಮೊದಲ ದಿನದ ಪ್ರದರ್ಶನ. ನಾನು ಹಾಗೂ ಸ್ನೇಹಿತ ಮೇನಕಾ ಚಿತ್ರಮಂದಿರಕ್ಕೆ ಹೋದೆವು. ನೋಡಿದಾಗ ಕೇವಲ ಎಂಟೇ ಎಂಟು ಮಂದಿ ಇದ್ದಾರೆ. ನನಗೆ ಮತ್ತೆ ಟೆನ್ಶನ್‌. ಸಹಜವಾಗಿಯೇ ಟೆನ್ಶನ್ ‌ನಲ್ಲಿದ್ದಾಗ ಅಲ್ಲಿನ ಮ್ಯಾನೇಜರ್‌ ಬಂದು ಕಾಫಿ ಬೇಕಾ ಎಂದು ಕೇಳಿದರು. ನನಗೆ ಯಾಕೆ ಇವರು ಹೀಗೆ ಕೇಳುತ್ತಾರೆ ಎಂಬ ಲೆಕ್ಕಾಚಾರ. ಕೊನೆಗೆ ಅವರು “ಯಾಕ್‌ ಸಾರ್‌ ಟೆನ್ಶನ್ ‌ನಲ್ಲಿದ್ದೀರಾ. ಜನ ಫ‌ುಲ್‌ ಆಗಿದ್ದಾರೆ. ಟಿಕೆಟ್‌ ಸೋಲ್ಡ್‌ಔಟ್‌ ಆಗಿದೆ. ಇನ್ನೇನು ಜನ ಬಂದ್‌ ಬಿಡ್ತಾರೆ ನೋಡಿ’ ಎಂದರು. ಹಾಗೆಯೇ ಗೇಟ್‌ ಓಪನ್‌ ಆಯ್ತು. ಜನ ನುಗ್ಗಿ ಬಂದರು. ಸಿನಿಮಾ ಮುಗಿದರೂ ಜನ ಏನು ಮಾತನಾಡುತ್ತಿಲ್ಲ. ನನಗೆ ಟೆನ್ಶನ್, ಜನ ಸಿನಿಮಾನಾ ಹೇಗೆ ತಗೊಂಡರೋ ಏನೋ ಎಂದು. ಆಗ ನಾನು ಸಿನಿಮಾ ಮುಗಿದ ಮೇಲೆ ಎಲ್ಲರ ಜೊತೆ ಇಳಿದು ಬರುತ್ತಿದ್ದೆ. ಹಾಗೆ ಬರುವ ವೇಳೆ ಒಬ್ಬ ನೋಡಿ “ಕಿಚ್ಚ’ ಅಂದ. ಅಲ್ಲಿಂದ ಮತ್ತೂಬ್ಬ… ಹೀಗೆ ಕಿಚ್ಚ ಎನ್ನುವುದು ಒಬ್ಬರಿಂದ ಒಬ್ಬರಿಗೆ ಪಾಸಾಗುತ್ತಾ ಹೋಯಿತು. ಒಂದಷ್ಟು ಮಂದಿ ಬಂದು ನನ್ನ ಎತ್ತಿಕೊಂಡು ಬಂದು ಹೊರಗಿದ್ದ ಕಾರು ಮೇಲೆ ಕೂರಿಸಿ “ಕಿಚ್ಚ ಕಿಚ್ಚ…’ ಎಂದು ಕೂಗಲಾರಂಭಿಸಿದರು. ಅಂದಿನಿಂದ ಆ ಕೂಗು ನಿಂತಿಲ್ಲ.

ನಿರ್ದೇಶನವೇ ನನ್ನ ಆಯ್ಕೆಯಾಗಿತ್ತು

ಅನೇಕರು ನೀವು ನಿರ್ದೇಶಕರಾಗಿದ್ದು ಯಾಕೆ, ಹೇಗೆ ಎಂದು ಕೇಳುತ್ತಾರೆ. ಹಾಗೆ ನೋಡಿದರೆ ನಾನು ನಿರ್ದೇಶಕನಾಗಬೇಕೆಂದೆ ಬಂದವ. ಆದರೆ, ಕಾರಣಾಂತರಗಳಿಂದ ನಟನಾದೆ. ಇನ್ನು ನಾನು ನಿರ್ದೇಶನ ಮಾಡಲು ಮತ್ತೂಂದು ಕಾರಣವೆಂದರೆ ಆರಂಭದ ದಿನಗಳ ನನ್ನ ಕೆರಿಯರ್‌. “ಮೈ ಆಟೋಗ್ರಾಫ್’ಗಿಂತ ಎರಡು ವರ್ಷಗಳ ಹಿಂದಿನ ನನ್ನ ಕೆರಿಯರ್‌ ಎಲ್ಲೂ ಹೋಗುತ್ತಿರಲಿಲ್ಲ. ಒಂದಾ ಆ್ಯವರೇಜ್‌ ಅಥವಾ ಫ್ಲಾಪ್‌. ಆಗ ನಾನು ನಿರ್ಧರಿಸಿದೆ. ಫ್ಲಾಪ್‌ ಸಿನಿಮಾ ಮಾಡುವುದಾದರೆ ನನ್ನ ದುಡ್ಡಲ್ಲಿ ನಾನೇ ಮಾಡುತ್ತೇನೆ ಎಂದು. ನನ್ನ ಆರಂಭದ ಕೆರಿಯರ್‌ ಅನ್ನೇ ನಾನು ಸ್ಫೂರ್ತಿಯಾಗಿ ತಗೊಂಡು “ಮೈ ಆಟೋಗ್ರಾಫ್’ ಸಿನಿಮಾ ಮಾಡಲು ನಿರ್ಧರಿಸಿದೆ.

ಮನೆ ಪತ್ರ ಅಡವಿಟ್ಟು ಸಿನಿಮಾ ಮಾಡಿದ್ದೆ

Advertisement

‘ಮೈ ಆಟೋಗ್ರಾಫ್’ ಸಿನಿಮಾಕ್ಕಾಗಿ ನಾನು ಮನೆ ಪತ್ರ ಅಡವಿಟ್ಟಿದ್ದೆ. ಅದು ನನ್ನ ತಂದೆಯ ಮನೆ ಬೇರೆ. ಒಂದು ವೇಳೆ ಸಿನಿಮಾ ಏನಾದರೂ ಸೋಲುತ್ತಿದ್ದರೆ ನನ್ನ ಮುಂದಿನ ಕೆರಿಯರ್‌ ಬಗ್ಗೆ ಕಲ್ಪನೆಯೂ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಮುಂದಿನ ಸಿನಿಮಾದ ನಿರ್ದೇಶಕರ ಬಳಿ ನಾನು ಯಾವ ವಿಚಾರವನ್ನು ಚರ್ಚಿಸಲು ಅವಕಾಶವಿರುತ್ತಿರಲಿಲ್ಲ. “ನೀನು ಮಾಡಿದ ಸಿನಿಮಾನಾ ನೋಡಿದ್ದೀವಿ ಬಿಡಪ್ಪಾ..’ ಎನ್ನುತ್ತಿದ್ದರು. ಆದರೆ, ಪ್ರಿಯಾ ನನಗೆ ಧೈರ್ಯ ಕೊಟ್ಟಳು. “ನೀನು ಒಳ್ಳೆಯ ಸಿನಿಮಾ ಮಾಡಿದ್ದೀಯ, ಧೈರ್ಯವಾಗಿರು’ ಎಂದು. ಅದರಂತೆ ಎಲ್ಲವೂ ಚೆನ್ನಾಗಿ ಆಯ್ತು. ಆ ಸಿನಿಮಾ ಅಷ್ಟು ವಾರಗಳ ಕಾಲ ಓಡುತ್ತೆ ಎಂದು ನಾನು ಅಂದುಕೊಂಡಿರಲಿಲ್ಲ. ಫ‌ಸ್ಟ್‌ ಡೇ ಶೋ ರಿಪೋರ್ಟ್‌ ನೋಡಿ ನಾನು ಅತ್ತಿದ್ದೆ. ಆದರೆ ಆ ಸಿನಿಮಾ ನಂತರ ನನ್ನ ಬದುಕು ಬದಲಾಯಿತು. ಆ ಸಿನಿಮಾದ ಗೆಲುವಿಗೆ ನಾನೊಬ್ಬ ಕಾರಣನಲ್ಲ. ನನ್ನ ಕುಟುಂಬವೂ ಕಾರಣ. ನನ್ನ ತಂದೆ ಆ ಚಿತ್ರಕ್ಕಾಗಿ ಮನೆ ಪತ್ರವನ್ನು ಅಡವಿಡಲು ಕೊಟ್ಟಿದ್ದರು.

ಬುರ್ಜ್‌ ಖಲೀಫಾದಲ್ಲಿ ಕಟೌಟ್‌

ಇಂದು ನಮ್ಮ ವಿಕ್ರಾಂತ್‌ ರೋಣ ಚಿತ್ರದ ಟೈಟಲ್‌ ಲೋಗೋ ವಿಶ್ವದ ಅತ್ಯಂತ ದೊಡ್ಡ ಕಟ್ಟಡದಲ್ಲಿ ಲಾಂಚ್‌ ಆಗುತ್ತಿದೆ. ಲಕ್ಷಾಂತರ ಜನ ಅದನ್ನು ನೋಡುತ್ತಾರೆ. ಆ ಕಟ್ಟಡ ವಿನ್ಯಾಸಕ್ಕೆ ತಕ್ಕಂತೆ ಆ ಲೋಗೋ ಮಾಡೋದು ಕೂಡಾ ಕಷ್ಟದ ಕೆಲಸ. ಆದರೆ ಅದನ್ನು ನಮ್ಮ ತಂಡ ಮಾಡಿದೆ. ಏನೇ ವಿಷಯವಾದರೂ ದೊಡ್ಡದಾಗಿ ಸಂಭ್ರಮಿಸೋಣ.

ಅವರ ಸಿನಿಮಾವನ್ನು ಕಾಪಾಡಿಕೊಳ್ಳುವ ತಾಕತ್ತು ಅವರಿಗೆ ದೇವರು ಕೊಟ್ಟಿದ್ದಾನೆ…

ದರ್ಶನ್‌ ಅಭಿನಯದ “ರಾಬರ್ಟ್‌’ ಚಿತ್ರಕ್ಕೆ ತೆಲುಗಿನಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ನಟ ಸುದೀಪ್‌, “ನಾನು ಇನ್ನೊಬ್ಬರ ಸಿನಿಮಾನಾ ಹ್ಯಾಂಡಲ್‌ ಮಾಡುವಷ್ಟು ದೊಡ್ಡ ಕಲಾವಿದನೇ ಅಲ್ಲ, ಸಲಹೆ ಕೊಡುವಷ್ಟು ದೊಡ್ಡ ವ್ಯಕ್ತಿಯೂ ಅಲ್ಲ. ಒಂದು ಸಿನಿಮಾ ಮಾಡಿದ ಮೇಲೆ ಅದು ನಮ್ಮ ಜವಾಬ್ದಾರಿ. ನನ್ನ ಸಿನಿಮಾನಾ ನಾನು ಕಾಪಾಡಿಕೊಂಡು ಬಂದಿದ್ದೇನೆ. ಅವರ ಸಿನಿಮಾವನ್ನು ಕಾಪಾಡುವಷ್ಟು ತಾಕತ್ತು ದೇವರು ಅವರಿಗೂ ಕೊಟ್ಟಿದ್ದಾನೆ’ ಎಂದಿದ್ದಾರೆ.

ಕಬ್ಜವನ್ನು ಸುಂದರವಾಗಿ ಕೆತ್ತಿದ್ದಾರೆ..

ಅನೇಕರು ನೀವು “ಕಬ್ಜ’ ಚಿತ್ರದಲ್ಲಿ ಯಾಕೆ ನಟಿಸುತ್ತಿದ್ದೀರಿ ಎಂದು ಕೇಳುತ್ತಾರೆ. ನಿಜ ಹೇಳಬೇಕೆಂದರೆ ನನಗೆ ಆ ಚಿತ್ರದಲ್ಲಿ ನಟಿಸಬಾರದು, ಈ ಚಿತ್ರದಲ್ಲಿ ನಟಿಸಬಾರದು ಎಂದೇನಿಲ್ಲ. ನಾನು ಆ ಪಾತ್ರಕ್ಕೆ ಯಾಕೆಬೇಕು ಎಂದು ಮೊದಲು ನಿರ್ದೇಶಕರಲ್ಲಿ ಕೇಳುತ್ತೇನೆ. ಅವರ ಉತ್ತರ ನನಗೆ ಸಮಾಧಾನ ತಂದರೆ ಮುಂದುವರೆಯುತ್ತೇನೆ. “ಕಬ್ಜ’ ಚಿತ್ರದ ಕೆಲವು ಕ್ಲಿಪಿಂಗ್‌ ನೋಡಿದೆ. ಬಹಳ ಅದ್ಭುತವಾಗಿ ಕೆತ್ತಿದ್ದಾರೆ. ಉಪ್ಪಿ ಅವರು ಕೂಡಾ ತುಂಬಾ ಸುಂದರವಾಗಿ ಕಾಣುತ್ತಾರೆ. ಅದಕ್ಕಿಂತ ಹೆಚ್ಚಾಗಿ ನಿರ್ದೇಶಕ ಚಂದ್ರು ಒಂದು ಮಗುವಿನ ತರಹ ಬಂದು ಕುಳಿತುಬಿಡುತ್ತಾರೆ. ಹೀಗಿರುವಾಗ ಮಾಡದೇ ಇರಲು ಕಾರಣವಿರಲ್ಲ.

Advertisement

Udayavani is now on Telegram. Click here to join our channel and stay updated with the latest news.

Next