Advertisement

ಸರ್ಕಾರಿ ಕಾಮಗಾರಿಗೆ ಶೇ. 25 ಮರಳು ಕಡ್ಡಾಯ

08:58 AM Jul 19, 2019 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ ಲಭ್ಯವಿರುವ ಮರಳಿನ ಪೈಕಿ ಶೇ. 25ರಷ್ಟು ಮರಳನ್ನು ಸರ್ಕಾರಿ ಕಾಮಗಾರಿಗಳಿಗೆ ಮೀಸಲಿಡಬೇಕು ಎಂದು ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಸೂಚಿಸಿದರು.

Advertisement

ನವನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಟಾಸ್ಕ್ಪೋರ್ಸ್‌ ಸಮಿತಿ, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸನ್ಸ್‌ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರ ಮತ್ತು ಜಿಲ್ಲಾ ಮರಳು ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಬೀಳಗಿ ತಾಲೂಕಿನ ಕೃಷ್ಣಾ ನದಿ ಪಾತ್ರದ 4 ಬ್ಲಾಕ್‌ಗಳಲ್ಲಿ 90,708 ಮೆಟ್ರಿಕ್‌ ಟನ್‌ ಮರಳನ್ನು ಗುತ್ತಿಗೆದಾರರು ದಾಸ್ತಾನು ಮಾಡಿದ್ದು, ಈ ಪೈಕಿ ಅದರಲ್ಲಿ ಶೇ. 25 ಮರಳನ್ನು ಸರ್ಕಾರಿ ಕಾಮಗಾರಿಗಳಿಗೆ ಕಡ್ಡಾಯವಾಗಿ ಮೀಸಲಿಡಬೇಕು ಎಂದು ಸೂಚಿಸಿದರು.

ಮೀಸಲಿರಿಸಿದ ಮರಳನ್ನು ಬೀಳಗಿ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಸ್ಟಾಕ್‌ ಮಾಡಿಸಬೇಕು. ಸ್ಟಾಕ್‌ ಮಾಡಿದ ಮರಳನ್ನು ಪಿಆರ್‌ಡಿಪಿಎಲ್, ನಿರ್ಮಿತಿ ಕೇಂದ್ರ ಹಾಗೂ ಇತರೆ ಇಲಾಖೆಯವರಿಗೆ ನೀಡಬೇಕು. ಪಡೆದ ಮರಳಿನ ಹಣ ಶೀಘ್ರ ಪಾವತಿಸಬೇಕು. ಅಲ್ಲದೇ ಪಟ್ಟಾ ಜಮೀನುಗಳಲ್ಲಿ ನಡೆದ ಮರಳುಗಾರಿಕೆಯಲ್ಲಿ ಸರ್ಕಾರಿ ಕಾಮಗಾರಿಗಳಿಗಾಗಿ ನೀಡಿದ ಮರಳಿನ ಮಾಹಿತಿ ಪಡೆಯಬೇಕು. ಪ್ರತಿ ತಿಂಗಳು ಸರ್ಕಾರಿ ಕಾಮಗಾರಿಗಳಿಗೆ ನೀಡಿದ ಮರಳಿನ ಮಾಹಿತಿ ಮುಂದಿನ ಸಭೆಯಲ್ಲಿ ನೀಡಬೇಕು ಎಂದು ತಿಳಿಸಿದರು.

ಕಳೆದ ಸಭೆಯಲ್ಲಿ ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ಬಗ್ಗೆ ಕ್ರಮ ಕೈಗೊಳ್ಳಲು ತಿಳಿಸಲಾಗಿತ್ತು. ಈ ನಿಟ್ಟಿನಲ್ಲಿ ಪರವಾನಗಿಯಲ್ಲಿ ನಮೂದಿಸಿದ್ದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮರಳನ್ನು ಸಾಗಿಸುತ್ತಿದ್ದ 7 ಲಾರಿಗಳ ತಪಾಸಣೆ ಮಾಡಲಾಗಿ ಹೆಚ್ಚಿನ ಪ್ರಮಾಣದಲ್ಲಿ ಮರಳನ್ನು ಸಾಗಿಸುತ್ತಿದ್ದ 2 ಲಾರಿ ಮಾಲೀಕರಿಗೆ ರೂ.5 ಸಾವಿರ, 4 ಲಾರಿಗಳಿಗೆ ತಲಾ ರೂ.10 ಸಾವಿರ ದಂಡ ವಸೂಲಿ ಮಾಡಲಾಗಿದೆ. ಉಳಿದ ಒಂದು ಲಾರಿ ದಂಡ ಪಾವತಿಸದೇ ಇರುವ ಕಾರಣ ಮುಧೋಳ ಪೊಲೀಸ್‌ ಠಾಣಾ ವಶಕ್ಕೆ ನೀಡಿರುವುದನ್ನು ಸಭೆಯಲ್ಲಿ ತಿಳಿಸಲಾಯಿತು.

Advertisement

ಅದೇ ರೀತಿ ಬೀಳಗಿ ತಾಲೂಕು ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ಕಲ್ಲು ಸಾಗಾಣಿಕೆ ಸಂಬಂಧ ಬೀಳಗಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 7 ಪ್ರಕರಣ, ಜಮಖಂಡಿ ವ್ಯಾಪ್ತಿಯಲ್ಲಿ ಜಪ್ತಿ ಮಾಡಿದ ಮರಳಿಗೆ ಜು. 16ರಂದು 142 ಮೆಟ್ರಿಕ್‌ ಟನ್‌ಗೆ ಪರವಾನಗಿ ಜಾರಿ ಮಾಡಲಾಗಿದ್ದು, ಒಟ್ಟು ಜಪ್ತಿ ಮಾಡಿದ ಮರಳಿಗೆ 347 ಮೆ.ಟನ್‌ ಪರವಾನಗಿ ಜಾರಿ ಮಾಡಲಾಗಿರುವುದಾಗಿ ಸಭೆಗೆ ತಿಳಿಸಲಾಯಿತು.

ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆಗೆ ಕೋರಿ ಬಂದ 18 ಅರ್ಜಿಗಳು ಈ ಹಿಂದಿನ ಸಭೆಯಲ್ಲಿ ಸುಧೀರ್ಘ‌ವಾಗಿ ಚರ್ಚಿಸಿ ಮರಳು ನಿಕ್ಷೇಪ ಕಾಪಾಡುವ ಸಲುವಾಗಿ ಆದ್ಯತೆ ಮೇರೆಗೆ ಅರ್ಜಿ ಪರಿಗಣಿಸಲು ಅರ್ಜಿ ಪಟ್ಟಿ ತಯಾರಿಸಿರುವುದಾಗಿ ಸಭೆಗೆ ತಿಳಿಸಲಾಯಿತು.

ಸರ್ಕಾರಿ ಕಾಮಗಾರಿಗಳಿಗೆ ಮರಳು ಬೇಡಿಕೆ ಪಡೆದುಕೊಂಡು ಎಸ್‌.ಆರ್‌ ದರದಲ್ಲಿ ವಿಲೇಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಮಹಮ್ಮದ ನರಸುಲ್ಲಾ ಸಭೆಗೆ ತಿಳಿಸಿದರು. ಉಪವಿಭಾಗಾಧಿಕಾರಿ ಎ.ಜಯಾ, ಪ್ರೊಬೆಷನರಿ ಐಎಎಸ್‌ ಅಧಿಕಾರಿ ಗರಿಮಾ, ಜಿಪಂ ಉಪ ಕಾರ್ಯದರ್ಶಿ ಎ.ಜಿ. ತೋಟದ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜಯ್ಯ, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಮಣಿಯಾರ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಪ್ರಶಾಂತ ಗಿಡದಾನಪ್ಪಗೋಳ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next