Advertisement

ಜನರಿಗೆ ಕಚ್ಚಿದ 25 ಮಂಗ ಸೆರೆ

12:26 PM Feb 21, 2018 | |

ಬಸವಕಲ್ಯಾಣ: ಬೆಟಬಾಲಕುಂದಾ ಗ್ರಾಮದಲ್ಲಿ ಕೆಲ ದಿನಗಳಿಂದ ಮಂಗಗಳು ಗ್ರಾಮಸ್ಥರ ನಿದ್ದೆಗೆಡಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮಂಗಗಳ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದು, ಸುಮಾರು 25 ಮಂಗಗಳನ್ನು
ಹಿಡಿಯುವಲ್ಲಿ ಯಶಸ್ವಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಕರೆಯ ಮೇರೆಗೆ ಮಹಾರಾಷ್ಟ್ರದ ಮಿರಜ್‌ನಿಂದ ಆಗಮಿಸಿದ ಶಬ್ಬೀರ ಹನೀಫ್‌ ಶೇಖ್‌ ನೇತೃತ್ವದ ಇಬ್ಬರು ಪರಿಣಿತರ ತಂಡ ಮಂಗಳವಾರ ಗ್ರಾಮಕ್ಕೆ ಆಗಮಿಸಿ, ಕೆಲವೆ ಗಂಟೆಗಳಲ್ಲಿ 25 ಮಂಗಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.

Advertisement

ಗ್ರಾಮದ ವ್ಯಾಪ್ತಿಯ ಗುಡ್ಡದ ಪ್ರದೇಶದಲ್ಲಿ ವಾಸವಾಗಿರುವ ಮಂಗಳನ್ನು ಹಿಡಿಯಲು ಬಲೆ ಬೀಸಲಾಗಿತ್ತು. ಪಂಜರದಲ್ಲಿ
ಮಂಗಗಳಿಗೆ ಇಷ್ಟವಾದ ತಿಂಡಿ ಇಡಲಾಗಿತ್ತು. ಒಂದೊಂದಾಗಿ ಮಂಗಗಳು ಪಂಜರದಲ್ಲಿ ಸೆರೆಯಾದವು. ದಾಳಿ ನಡೆಸುತ್ತಿದ್ದ ಒಂದು ಮಂಗ ಹಾಗೂ ಇದರ ಟೋಲಿಯಲ್ಲಿ ಇದ್ದ 25 ಮಂಗಗಳು ಬಲೆಗೆ ಬಿದ್ದಿದ್ದು, ಉಳಿದ ಮಂಗಗಳ ಸೆರೆಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ.

ಗ್ರಾಮದಲ್ಲಿ ಎರಡು ವಾರಗಳ ಹಿಂದೆ ಮಂಗವೊಂದು ದಾಳಿ ನಡೆಸಿ ಸುಮಾರು 20ಕ್ಕೂ ಹೆಚ್ಚು ಜನರಿಗೆ ಕಡಿದು ಗಾಯಗೊಳಿಸಿತ್ತು. ಅಂದು ಕಾರ್ಯಾಚರಣೆ ನಡೆಸಿದ ಇಲಾಖೆಯ ತಂಡ ದಾಳಿ ನಡೆಸುತ್ತಿದ್ದ ಮಂಗವನ್ನು
ಹಿಡಿದು ಜನರು ನಿಟ್ಟುಸಿರು ಬಿಡುವಂತೆ ಮಾಡಿದರು. ಆದರೆ ಗ್ರಾಮದಲ್ಲಿ ಇದ್ದ ಮಂಗಗಳು ಒಂದು ವಾರದಿಂದ ಇದಕ್ಕಿದ್ದಂತೆ ಮತ್ತೆ ಜನರ ಮೇಲೆ ದಾಳಿ ನಡೆಸಿ ಸುಮಾರು 20ಕ್ಕೂ ಅಧಿಕ ಜನರಿಗೆ ಕಚ್ಚಿದ್ದು, ಜನರಲ್ಲಿ ಮತ್ತೆ ಆತಂಕ ಮೂಡಿಸಿತ್ತು.

ಗ್ರಾಮದಲ್ಲಿ ಮತ್ತೆ ಮಂಗಗಳು ದಾಳಿ ಮಾಡುತ್ತಿದೆ ಎನ್ನುವ ಮಾಹಿತಿ ಸಿಕ್ಕ ನಂತರ ಅರಣ್ಯ ಇಲಾಖೆಯ ಇಲ್ಲಿಯ ಆರ್‌ಎಫ್‌ಒ ಅಲಿಯೋದ್ದಿನ್‌ ನೇತೃತ್ವದಲ್ಲಿ ಇಲಾಖೆಯ ಸಿಬ್ಬಂದಿ ಕಾರ್ಯಚರಣೆ ನಡೆಸಿ, ದಾಳಿ ನಡೆಸುತಿದ್ದ ಮಂಗವನ್ನು ಗುರುತಿಸಿ ಹಿಡಿಯುವಲ್ಲಿ ಯಶಸ್ವಿಯಾದರು. ಎಲ್ಲಾ ಮಂಗಗಳನ್ನು ಹಿಡಿಯುವ ವರೆಗೆ ತಂಡದವರು ಗ್ರಾಮದಲ್ಲಿಯೇ ಉಳಿದುಕೊಳ್ಳಲಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

60ಜನರಿಗೆ ಗಾಯ: ಬೆಟಬಾಲಕುಂದಾ ಗ್ರಾಮದಲ್ಲಿ ಮಂಗಗಳ ದಾಳಿಯಿಂದ ಗಾಯಗೊಂಡವರ ಸಂಖ್ಯೆ 60ಕ್ಕೆ
ತಲುಪಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಕಳೆದ ಗುರುವಾರದಿಂದ ಇದುವರೆಗೆ ಸುಮಾರು 20 ಜನರಿಗೆ
ಮಂಗಗಳು ಕಚ್ಚಿವೆ. ಒಟ್ಟು ಸುಮಾರು 60 ಜನ ಗಾಯಗೊಂಡಿದ್ದು, ಇವರಲ್ಲಿ ಬಹುತೇಕ ಜನ ಬಸವಕಲ್ಯಾಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.