ಬೆಂಗಳೂರು: ನಿವೇಶನ ಕೊಡಿಸುವುದಾಗಿ ಸ್ನೇಹಿತನ ಪೋಷಕರಿಂದ 25 ಲಕ್ಷ ರೂ. ಪಡೆದು ವಂಚಿಸಿದ್ದ ಕನ್ನಡ ಪರ ಸಂಘಟನೆ ಕಾರ್ಯಕರ್ತನ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ರಸ್ತೆಯ ಬಿಸಿಟಿ ಕ್ವಾಟರ್ಸ್ ನಿವಾಸಿ ಶಶಿಕುಮಾರ್ (21) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಂಘಟನೆಯೊಂದರ ಕಾರ್ಯದರ್ಶಿಯಾಗಿದ್ದಾನೆ. ಆರೋಪಿ ತನ್ನ ಸ್ನೇಹಿತನ ಪೋಷಕರಾದ ಚಾಮರಾಜಪೇಟೆಯ ಆರ್.ಸಿ ಅಗ್ರಹಾರ ನಿವಾಸಿ ರಮೇಶ್ ದಂಪತಿಗೆ 25 ಲಕ್ಷ ರೂ. ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದರು.
2012ರಿಂದಲೇ ರಮೇಶ್ ಪುತ್ರನ ಜತೆ ಓಡಾಡುತ್ತಿದ್ದ ಆರೋಪಿ ಆಗಾಗ್ಗೆ ಅವರ ಮನೆಗೆ ಬರುತ್ತಿದ್ದ. ಈ ಮಧ್ಯೆ 2016ರಲ್ಲಿ ರಮೇಶ್ ದಂಪತಿ ನಗರದಲ್ಲಿ ನಿವೇಶನ ಖರೀದಿಸಬೇಕೆಂದು ನಿರ್ಧರಿಸಿದ್ದರು. ಈ ವಿಚಾರವನ್ನು ಶಶಿಕುಮಾರ್ ಬಳಿಯೂ ಹೇಳಿಕೊಂಡಿದ್ದರು. ಆಗ ಆರೋಪಿ ತಾನು ಕನ್ನಡ ಪರ ಸಂಘಟನೆಯೊಂದರ ಸದಸ್ಯನಾಗಿದ್ದು, ನಗರದ ಯಾವ ಭಾಗದಲ್ಲಿ ನಿವೇಶನಗಳು ಮಾರಾಟಕ್ಕಿವೆ ಎಂಬುದು ತಿಳಿಯುತ್ತದೆ.
ಕಡಿಮೆ ಬೆಲೆಗೆ ಕೊಡಿಸುವುದಾಗಿ ಹೇಳಿದ್ದ. ತಾವರೆಕೆರೆ ಮತ್ತು ಗಿರಿನಗರ ಭಾಗದಲ್ಲಿ ನಿವೇಶನ ಕೊಡಿಸುತ್ತೇನೆ ಎಂದು ಕಳೆದ ಎರಡು ವರ್ಷಗಳಿಂದ ಹಂತ-ಹಂತವಾಗಿ 25 ಲಕ್ಷ ರೂ. ಹಣ ಪಡೆದುಕೊಂಡಿದ್ದಾನೆ. ಇದೀಗ ಹಣ ಹಿಂದಿರುಗಿಸದೆ, ನಿವೇಶನವನ್ನು ಕೊಡಿಸದೆ ತಲೆಮರೆಸಿಕೊಂಡಿದ್ದಾನೆ ಎಂದು ಆರೋಪಿಸಿ ರಮೇಶ್ ಅವರ ಪತ್ನಿ ನಾಗಲಕ್ಷಿ ಎಂಬುವರು ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಪಶ್ಚಿಮ ವಲಯ ಡಿಸಿಪಿ ರವಿ ಡಿ. ಚೆನ್ನಣ್ಣನವರ್, ಶಶಿಕುಮಾರ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದರು.