Advertisement

25 ಕೋ.ರೂ. ವೆಚ್ಚದಲ್ಲಿ ಹೈಟೆಕ್‌ ಕ್ರೀಡಾ ಸಂಕೀರ್ಣ

12:39 AM Oct 06, 2019 | Sriram |

ಮಹಾನಗರ: ಕರಾವಳಿಯ ಅನೇಕ ಕ್ರೀಡಾಪಟುಗಳು ಈಗಾಗಲೇ ದೇಶ-ವಿದೇಶಗಳ‌ಲ್ಲಿ ಮಿಂಚುತ್ತಿದ್ದು, ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟು ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಗರದಲ್ಲಿ ಅತ್ಯಾ ಧುನಿಕ ಸೌಲಭ್ಯಗಳನ್ನು ಹೊಂದಿರುವ ಹೊಸ ಕ್ರೀಡಾ ಸಂಕೀರ್ಣ ತಲೆಯೆತ್ತಲಿದೆ.

Advertisement

ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಗರದ ಉರ್ವ ಹಳೆ ಪೊಲೀಸ್‌ ನಿಲ್ದಾಣ ಬಳಿ ಶೀಘ್ರದಲ್ಲೇ ಈ ಮಲ್ಟಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ತಲೆ ಎತ್ತಲಿದೆ. ಮಲ್ಟಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ಕಾಮಗಾರಿಗೆಂದು ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ 5 ಕೋಟಿ ರೂ. ಬಿಡುಗಡೆಯಾಗಿದ್ದು, ಹೆಚ್ಚುವರಿ 5 ಕೋ. ರೂ.ಗೆ ಬೇಡಿಕೆ ಸಲ್ಲಿಸಲಾಗಿದೆ. ಉಳಿದ 15 ಕೋಟಿ ರೂಗೆ ಪ್ರತಿಷ್ಠಿತ ಸಂಸ್ಥೆಗಳ ಸಿಎಸ್‌ಆರ್‌ ಫಂಡ್‌ನಿಂದ ವಿನಿಯೋಗಿಸಲು ಮಾತುಕತೆ ನಡೆಯುತ್ತಿದೆ. ಅಂದುಕೊಂಡಂತೆ ಆದರೆ ಇನ್ನು ಕೆಲವೇ ತಿಂಗಳುಗಳಲ್ಲಿ ಮಲ್ಟಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ಕಾಮಗಾರಿ ಉರ್ವದಲ್ಲಿ ಆರಂಭಗೊಳ್ಳಲಿದೆ.

ಸುಮಾರು 1.23 ಎಕ್ರೆ ಪ್ರದೇಶದಲ್ಲಿ ಎರಡು ಅಂತಸ್ತಿನ ಕಟ್ಟಡದಲ್ಲಿ ಈ ಕಾಂಪ್ಲೆಕ್ಸ್‌ ತಲೆಯೆತ್ತಲಿದ್ದು, ಕಬಡ್ಡಿ, ಶಟಲ್‌ ಬ್ಯಾಡ್ಮಿಂಟನ್‌, ಸಣ್ಣದಾದ ಈಜುಕೊಳ, ವಾಲಿಬಾಲ್‌ ಕ್ರೀಡಾಂಗಣ ಇರಲಿವೆ. ಕೆಳ ಅಂತಸ್ತಿನಲ್ಲಿ ವಿಶಾಲವಾದ ಪಾರ್ಕಿಂಗ್‌ ವ್ಯವಸ್ಥೆ, ಎದುರುಗಡೆ ಕೆಲವು ವಾಣಿಜ್ಯ ಮಳಿಗೆಗಳು ಇರಲಿವೆ.

ಮಂಗಳಾ ಕ್ರೀಡಾಂಗಣ ಬಳಿಯ ಶ್ರೀನಿವಾಸ್‌ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಸದ್ಯ ಕೇವಲ 4 ಬ್ಯಾಡ್ಮಿಂಟನ್‌ ಕೋರ್ಟ್‌ ಇದೆ. ಆದರೆ ಆಸಕ್ತ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಿದೆ. ಒಂದೊಂದು ಬ್ಯಾಚ್‌ಗೆ 1 ಗಂಟೆ ಸಮಯ ನಿಗದಿ ಪಡಿಸಿದರೂ ಕ್ರೀಡಾಸಕ್ತರಿಗೆ ತರಬೇತಿ ನೀಡಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಕ್ರೀಡಾಪಟುಗಳು ಖಾಸಗಿ ಸಂಸ್ಥೆಯ ಕೋರ್ಟ್‌ ಕಡೆ ಮುಖ ಮಾಡುತ್ತಿದ್ದಾರೆ. ಮಂಗಳಾ ಸ್ವಿಮ್ಮಿಂಗ್‌ ಪೂಲ್‌ಗೆ ಈಜು ಕಲಿಯಲು ಬರುವ ಮಂದಿಯೂ ಹೆಚ್ಚಾಗಿದ್ದಾರೆ. ಕರಾವಳಿಯಲ್ಲಿ ಹೆಚ್ಚಿನ ತರಬೇತಿಗೆ ಕೋರ್ಟ್‌ನ ಕೊರತೆ ಇದೆ. ಈ ನಿಟ್ಟಿ ನಲ್ಲಿ ಮಲ್ಟಿಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ನಿರ್ಮಾಣವಾದರೆ ಕಬಡ್ಡಿಗೂ ಮತ್ತಷ್ಟು ಉತ್ತೇಜನ ನೀಡಿದಂತಾಗಬಹುದು.

ಪ್ರೋತ್ಸಾಹ ಅಗತ್ಯ
ಮಂಗಳೂರಿನಲ್ಲಿ ಸ್ವಿಮ್ಮಿಂಗ್‌, ಶಟಲ್‌ ಬ್ಯಾಡ್ಮಿಂಟನ್‌, ಫುಟ್‌ಬಾಲ್‌ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ಬೇಕಿದೆ. ಶಟಲ್‌ ಬ್ಯಾಡ್ಮಿಂಟನ್‌ಗೆ ಸರಕಾರದ ವತಿಯಿಂದ ಸದ್ಯ ಇರುವಂತಹ 4 ಕೋರ್ಟ್‌ಗಳು ಸಾಕಾಗುತ್ತಿಲ್ಲ. ಹೆಚ್ಚಿನ ಮಂದಿ ಖಾಸಗಿ ಕೋರ್ಟ್‌ಗಳಿಗೆ ತೆರಳಿ ಆಡುತ್ತಿದ್ದಾರೆ. ಉರ್ವದಲ್ಲಿ ಮಲ್ಟಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ಆದರೆ ಕ್ರೀಡಾಸಕ್ತರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.
 - ಪ್ರದೀಪ್‌ ಡಿ’ಸೋಜಾ, ಯುವಜನ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ

Advertisement

ಕ್ರೀಡಾ ಪಟುಗಳಿಗೆ ಉತ್ತೇಜನ
ಕರಾವಳಿ ಭಾಗದ ಅನೇಕ ಕ್ರೀಡಾಪಟುಗಳು ಈಗಾಗಲೇ ದೇಶ-ವಿದೇಶಗಳಲ್ಲಿ ಮಿಂಚುತ್ತಿದ್ದಾರೆ. ಅವರ ತರಬೇತಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ನಿರ್ಮಾಣವಾಗಲಿದೆ. ಕೊನೆಯ ಹಂತದ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ.
 - ವೇದವ್ಯಾಸ ಕಾಮತ್‌, ಶಾಸಕ

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next