ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಹೋಬಳಿ ವ್ಯಾಪ್ತಿಯ ನಾಲತವಾಡ-ಬಂಗಾರಗುಂಡ ರಸ್ತೆ ಮಧ್ಯೆ ಇರುವ ಹೊಲಗಳಿಗೆ ಖಚಿತ ಮಾಹಿತಿ ಮೇರೆಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಮೆಣಸಿನಕಾಯಿ ಸಸಿ ನೆಡಲು ಬಳಸಿಕೊಳ್ಳುತ್ತಿದ್ದ 14 ವರ್ಷದೊಳಗಿನ 25-30 ಮಕ್ಕಳನ್ನು ಪತ್ತೆ ಹಚ್ಚಿದ್ದಾರೆ.
ಈ ಸಂಬಂಧ ಅವರನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದವರಿಗೆ ಹಾಗೂ ಅವರನ್ನು ಕೆಲಸಕ್ಕೆ ಕರೆತಂದವರಿಗೆ ನೋಟಿಸ್ ನೀಡಿ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.
ನಾಲತವಾಡ ಭಾಗದ ದಲಿತ ಮುಖಂಡ, ಅಂಬೇಡ್ಕರ್ ಸೈನ್ಯದ ರಾಜ್ಯ ಸಂಘಟನಾ ಸಂಚಾಲಕ ಮಲ್ಲು ತಳವಾರ ಅವರು ನೀಡಿದ ಖಚಿತ ಮಾಹಿತಿ ಮೇರೆಗೆ ಕಾರ್ಮಿಕ ನಿರೀಕ್ಷಕ ಇನಾಯತ್‍ಉಲ್ಲಾ ಇನಾಮದಾರ ಅವರು ನಾಲತವಾಡದ ನಾಡಕಚೇರಿಯ ಉಪ ತಹಶೀಲ್ದಾರ್, ಆ ಭಾಗದ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಅವರ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ.
ದಾಳಿ ನಡೆಸಿದ್ದನ್ನು ಕಂಡು ಹೊಲದ ಮಾಲಿಕ ಸ್ಥಳದಿಂದ ಕಾಲ್ಕಿತ್ತಿದ್ದರಿಂದ ಮತ್ತು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದರಿಂದ ಅವರಿಗೆ ನೋಟಿಸ್ ನೀಡಲಾಗಿಲ್ಲ. ಆದರೆ, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.
ತಾಲೂಕಿನ ಗಡಿಭಾಗದಲ್ಲಿ ಬರುವ ಯಾದಗಿರಿ ಜಿಲ್ಲೆ ಸುರಪೂರ ತಾಲೂಕು, ಹುಣಚಗಿ ತಾಲೂಕುಗಳಿಂದ ಮತ್ತು ನಾಲತವಾಡ ಭಾಗದ ಸುತ್ತಲಿನ ಹಳ್ಳಿಗಳಿಂದ ಕೂಲಿ ಕಾರ್ಮಿಕರನ್ನು ಕರೆತರಲಾಗುತ್ತಿದೆ. ಇವರ ಜೊತೆ ಅವರ ಮಕ್ಕಳನ್ನೂ ಕರೆತರುತ್ತಾರೆ. ಮಕ್ಕಳಿಗೆ ದಿನಕ್ಕೆ 200 ರೂ ಕೂಲಿ ನಿಗದಿಪಡಿಸಿದ್ದಾರೆ. ಆಂಧ್ರ ಮೂಲದ ಕೆಲವರು ನಾಲತವಾಡದಿಂದ ಬಂಗಾರಗುಂಡ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಜಮೀನು ಲೀಸ್ ಮೇಲೆ ಹಿಡಿದು ಅಲ್ಲಿ ಮೆಣಸಿನಕಾಯಿ ಸಸಿ ನೆಡಲು ಈ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ.
3, 4 ಮತ್ತು 5 ನೇ ತರಗತಿ ಮಕ್ಕಳನ್ನು ಈ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ವಯಸ್ಕ ಪುರುಷರು ಹೊಲದಲ್ಲಿ ತಗ್ಗು ತೋಡುತ್ತಾರೆ. ವಯಸ್ಕ ಮಹಿಳೆಯರು ಮೆಣಸಿನಕಾಯಿ ಸಸಿ ನೆಡುತ್ತಾರೆ. ಮಕ್ಕಳು ಇವರಿಗೆ ಸಸಿ ಪೂರೈಸುವುದು, ನೆಟ್ಟ ಸಸಿಗೆ ಬಕೆಟ್‍ನಿಂದ ನೀರು ಹಾಕುವ ಕೆಲಸ ಮಾಡುತ್ತಾರೆ. ಇವರನ್ನು ಕರೆತರಲು ಬಳಸುವ ವಾಹನ ಮಕ್ಕಳಿಂದ ಗಿಜಿಗುಟ್ಟುತ್ತಿರುತ್ತದೆ. ಟಾಪ್ ಮೇಲೆಯೂ ಮಕ್ಕಳನ್ನೂ ಕೂಡಿಸಿಕೊಂಡು ಬರುತ್ತಾರೆ. ಬಾಲ ಕಾರ್ಮಿಕ ಪದ್ಧತಿ ನಿಷೇಧ ಇದ್ದರೂ ಇಲ್ಲಿ ಅವರನ್ನು ಬಳಸಿಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧ. ಮಕ್ಕಳನ್ನು ಟಾಪ್ ಮೇಲೆ ಕರೆತರುವಾಗ ಯಾರಾದರೂ ಬಿದ್ದು ಸತ್ತರೆ ಯಾರು ಹೊಣೆ ಎನ್ನುವ ಮಾತು ಅಲ್ಲೆಲ್ಲ ಕೇಳಿಬರತೊಡಗಿದೆ.