Advertisement
ಸ್ವಂತ ವಾಹನವಿದ್ದವರು ಸುತ್ತು ಬಳಸಿ ನಗರಕ್ಕೆ ತೆರಳುತ್ತಾರಾದರೂ ಬಡವರಿಗೆ ಅದೊಂದು ಸಾಹಸ. ತಡರಾತ್ರಿ ಆರೋಗ್ಯ ಏರುಪೇರಾದರೆ, ಹೆಣ್ಣು ಮಕ್ಕಳಿಗೆ ಪ್ರಸವದ ಸಂದರ್ಭ ಎದುರಾದರೆ ಆಸ್ಪತ್ರೆಗೆ ಹೋಗೋಣವೆಂದರೆ ಮಧ್ಯೆ ಚಾಚಿಕೊಂಡಿರುವ ಬೃಹತ್ ನದಿಯನ್ನು ದಾಟುವುದೂ ಸಾಧ್ಯವಿಲ್ಲ. ಬಾಡಿಗೆ ವಾಹನವನ್ನು ಗೊತ್ತು ಮಾಡಿಕೊಂಡು ಸುಮಾರು 14 ಕಿಲೋ ಮೀಟರ್ ದೂರವಿರುವ ನಗರಕ್ಕೆ ಹೋಗೋಣವೆಂದರೆ, ಹೊತ್ತು ಮೀರಿದ ಬಳಿಕ ಬಾಡಿಗೆಗೆ ವಾಹನಗಳು ಸಿಗುವುದಿಲ್ಲ. ರಾತ್ರಿ ಹೊತ್ತಿನಲ್ಲಿ ಅನಾರೋಗ್ಯಕ್ಕೊಳಗಾಗಿ ಬಾಡಿಗೆಗೆ ವಾಹನ ಸಿಗದೆ, ನೂರಾರು ಮಂದಿ ಪ್ರಾಣ ಬಿಟ್ಟಿದ್ದಾರೆ. ಕಣ್ಣು ಮುಂದೆಯೇ ಇಬ್ಬರು ವ್ಯಕ್ತಿಗಳು ಇಹಲೋಕ ತ್ಯಜಿಸಿದ್ದನ್ನು ನೋಡಿ ಮರುಗಿದ ಸಮಿತಿ ಸದಸ್ಯರು ತಮ್ಮ ದುಡಿಮೆಯ ಹಣವನ್ನು ಒಟ್ಟು ಸೇರಿಸಿ ಊರಿನ ಜನರ ಧನಸಹಾಯದೊಂದಿಗೆ ಆ್ಯಂಬುಲೆನ್ಸ್ ಸೇವೆಯನ್ನು ಆರಂಭಿಸಿ ಯಶಸ್ವಿಯಾಗಿದ್ದಾರೆ. ಇದೀಗ ದಿನದ ಇಪ್ಪತ್ತನಾಲ್ಕು ಗಂಟೆಯೂ ಕಾರ್ಯ ನಿರ್ವಹಿಸುತ್ತಿರುವ ಆ್ಯಂಬುಲೆನ್ಸ್‌ನಲ್ಲಿ ಎರಡು ವರ್ಷಗಳ ಅವಧಿಯಲ್ಲಿ 186ಕ್ಕೂ ಹೆಚ್ಚು ಮಂದಿ ರೋಗಿಗಳನ್ನು ನಗರದ ಆಸ್ಪತ್ರೆಗಳಿಗೆ ಕೊಂಡೊಯ್ದು ಚಿಕಿತ್ಸೆಗೆ ಸಹಕರಿಸಲಾಗಿದೆ ಎನ್ನುತ್ತಾರೆ ಸಮಿತಿ ಸದಸ್ಯ ಲೋಕೇಶ್ ಸುವರ್ಣ.
ಸುಮಾರು 4.5 ಲಕ್ಷ ರೂ. ವೆಚ್ಚದ ಆ್ಯಂಬುಲೆನ್ಸ್ ಖರೀದಿ ಮಾಡಲಾಗಿದೆ. 2 ಲಕ್ಷ ರೂ. ವೆಚ್ಚದಲ್ಲಿ ಬೆಂಗ್ರೆಯಲ್ಲಿ ಆ್ಯಂಬುಲೆನ್ಸ್ ನಿಲುಗಡೆ ಶೆಡ್‌ನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ ಹತ್ತು ಮಂದಿ ಚಾಲಕರನ್ನು ನಿಯೋಜಿಸಿ ಒಂದೊಂದು ಕೀ ನೀಡ ಲಾಗಿದ್ದು, ದಿನದ 24 ಗಂಟೆಯೂ ಜನರಿಗೆ ತುರ್ತು ಸೇವೆ ನೀಡುತ್ತಿದೆ. ತುರ್ತು ಸಂದರ್ಭಕ್ಕೆಂದು ಎರಡು ಹೆಚ್ಚುವರಿ ಕೀಗಳನ್ನೂ ಶೆಡ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕ್ಷಣದಲ್ಲಿ ಕರೆ ಮಾಡಿದರೂ ರೋಗಿಯ ಮನೆ ಬಾಗಿಲಿಗೇ ತೆರಳಿ ತತ್‌ಕ್ಷಣ ಆಸ್ಪತ್ರೆಗೆ ಸಾಗಿಸುವುದರೊಂದಿಗೆ ರಕ್ತ ಅವಶ್ಯವುಳ್ಳವರಿಗೆ ವ್ಯವಸ್ಥೆ ಮಾಡಲಾಗುತ್ತದೆ. ಆಸ್ಪತ್ರೆಯಲ್ಲಿನ ವ್ಯವಹಾರ ತಿಳಿಯದವರಿಗೆ ಖುದ್ದು ಈ ಯುವಕರೇ ಸಹಾಯ ಮಾಡುತ್ತಾರೆ. ಎಲ್ಲವೂ ಉಚಿತ ಸೇವೆ. ತೋಟ ಬೆಂಗ್ರೆ, ಕಸಬ ಬೆಂಗ್ರೆ, ಕುದ್ರೋಳಿ ಬೆಂಗ್ರೆ, ಬೊಕ್ಕಪಟ್ಣ ಪ್ರದೇಶದ ಮಂದಿ ಈ ಸೇವೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈ ಪರಿಸರದಲ್ಲಿ ಸುಮಾರು 1,000ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಶೇ. 90ಕ್ಕೂ ಹೆಚ್ಚು ಮಂದಿ ಬಡ ವರ್ಗದವರು.
Related Articles
ಆ್ಯಂಬುಲೆನ್ಸ್ ಆರಂಭಕ್ಕೆ ಮುನ್ನ ರಾತ್ರಿ ಹತ್ತರ ಬಳಿಕ ಅನಾರೋಗ್ಯದ ಸಂದರ್ಭ ಎದುರಾದರೆ ದೋಣಿಯ ಚಾಲಕನನ್ನು ಎಬ್ಬಿಸಿ, ದೋಣಿ ಚಾಲನೆಗೆ ಹೇಳಬೇಕಿತ್ತು. ಆತ ಬಂದರಾಯಿತು; ಇಲ್ಲವಾದರೆ ಇಲ್ಲ. ಬಂದರೂ ಬಿಚ್ಚಿಟ್ಟ ಹಗ್ಗಗಳನ್ನು ಕಟ್ಟಿ ದೋಣಿಯನ್ನು ಚಾಲೂ ಮಾಡಿ ಬಂದರಿಗೆ ತಲುಪಿಸಲು ಅರ್ಧ ಗಂಟೆ ಬೇಕಾಗುತ್ತಿತ್ತು. ಬಂದರಿಗೆ ತಲುಪಿದ ಅನಂತರ ಬಾಡಿಗೆಗೆ ವಾಹನಗಳು ಸಿಗುವುದೂ ಅಪರೂಪ. ಹೀಗಾಗಿ ತೀವ್ರ ಅನಾರೋಗ್ಯಕ್ಕೊಳಗಾದವರು ಜೀವನ್ಮರಣ ಹೋರಾಟದಲ್ಲಿರುತ್ತಿದ್ದರು. ಇದೀಗ ಈ ಪರಿಸರದ ಜನರ ಯಾತನೆ ತಪ್ಪಿದೆ.
Advertisement
ಜನರ ಸಹಕಾರದಿಂದ ಸೇವೆಅನಾರೋಗ್ಯಕ್ಕೊಳಗಾದವರನ್ನು ನಗರದ ಆಸ್ಪತ್ರೆಗೆ ಕೊಂಡೊಯ್ಯುವುದೇ ಸವಾಲಾಗಿತ್ತು. ಊರ ಜನರ ಸಹಕಾರದೊಂದಿಗೆ ಆ್ಯಂಬುಲೆನ್ಸ್ ಸೇವೆ ಆರಂಭಿಸಲಾಗಿದೆ. ಈವರೆಗೆ 186ಕ್ಕೂ ಹೆಚ್ಚು ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
– ಯತೀಶ್ ಬೆಂಗ್ರೆ,
ಕಾರ್ಯದರ್ಶಿ, ಬೆಂಗ್ರೆ ನಾಗರಿಕ ಸೇವಾ ಸಮಿತಿ ಧನ್ಯಾ ಬಾಳೆಕಜೆ