ಸಂವಿಧಾನ ತಿದ್ದುಪಡಿಯಾಗಿ ಸರಿಸುಮಾರು 24 ವರ್ಷಗಳು ಉರುಳಿದ್ದರೂ ಅಧಿಕಾರ ವಿಕೇಂದ್ರಿಕರಣದ ಪರಿಕಲ್ಪನೆಗೆ ಆಡಳಿತಾತ್ಮಕವಾಗಿ ಹೆಚ್ಚು ಶಕ್ತಿ ಬರಲೇ ಇಲ್ಲ. ಸರ್ವ ಪಕ್ಷಗಳ ಸಮರ್ಥರೆಲ್ಲ ಅಧಿಕಾರ ಮತ್ತು ಹಣಕಾಸಿನ ನಿಯಂತ್ರಣದ ಜುಟ್ಟು ವಿಧಾನಸೌಧದಿಂದ ಕೆಳಗಿಳಿಯಲು ಬಿಡುತ್ತಿಲ್ಲ.
ಕರ್ನಾಟಕದಲ್ಲಿ ಮೌಲ್ಯಾಧಾರಿತ ರಾಜಕಾರಣದ ಕನಸು ಬಿತ್ತಿದ್ದ ರಾಮಕೃಷ್ಣ ಹೆಗಡೆಯವರು 1984ರಲ್ಲಿ ರಾಜೀವರ ಹತ್ಯೆಯ ಅನುಕಂಪದ ಅಲೆಯನ್ನು ಮೀರಿ ವಿಧಾನಸಭಾ ಚುನಾವಣೆಯನ್ನು ಗೆದ್ದ ಕಾಲ. ಹೆಗಡೆಯವರ ವಿಜಯವನ್ನು ನಾನೀ ಪಾಲಿVàವಾಲ ರಂಥವರು ಶುದ್ಧ ಚಾರಿತ್ರ್ಯಕ್ಕೆ ಸಿಕ್ಕ ಗೆಲುವು ಎಂದು ಬಣ್ಣಿಸಿದ್ದರು. ವಿಜಯದ ಕಿರುನಗೆ ಬೀರುತ್ತಿದ್ದ ಹೆಗಡೆ ಬಳಿ ಧಾವಿಸಿದ ಮಾಧ್ಯಮಗಳು ಕೇಳಿದ್ದೇನೆಂದರೆ, “”ನೀವು ಪ್ರಚಾರದಲ್ಲಿ ಬಳಸಿದ್ದ ಘೋಷಣೆ “ಆಡಳಿತ ದಿಲ್ಲಿಯಿಂದಲ್ಲ ಹಳ್ಳಿಯಿಂದ’ ಎಂಬುದು ಹೊಸ ಕಲ್ಪನೆ. ಆ ಘೋಷಣೆಯನ್ನು ನಿಮಗೆ ಸೂಚಿಸಿದವರಾರು?” ಹೆಗಡೆಯವರು ಅದಕ್ಕೆ ಏನುತ್ತರ ಕೊಟ್ಟರೆಂಬುದು ಪ್ರಸ್ತುತ ಚರ್ಚೆಯ ವಿಷಯವಲ್ಲ. ಅಂದು ಚುನಾವಣೆಯಲ್ಲಿ ಹೆಗಡೆಯವರು ಅಧಿಕಾರ ವಿಕೇಂದ್ರೀಕರಣದ ಕಲ್ಪನೆಯೊಂದಿಗೆ ಬಿತ್ತಿದ ಕನಸನ್ನು ಗೆಳೆಯ ನಜೀರ್ ಸಾಬ್ ಮೂಲಕ ತಮ್ಮ ಅಧಿಕಾರಾವಧಿಯ ಉದ್ದಕ್ಕೂ ನನಸು ಮಾಡಲು ಹೆಜ್ಜೆ ಇಟ್ಟಿದ್ದರು. ಹೆಗಡೆ ಜಾರಿಗೆ ತಂದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಜಿಲ್ಲಾ ಪರಿಷತ್ತು ಮತ್ತು ಮಂಡಲ ಪಂಚಾಯತ್‌ಗಳು ಆಡಳಿತದ ಒಂದು ಐತಿಹಾಸಿಕ ವ್ಯವಸ್ಥೆಯನ್ನು ನಿರ್ಮಾಣ ಮಾಡಿದವು.
ಅಂದಿನ ದಿನಗಳಲ್ಲಿ ಗ್ರಾಮೀಣಾಭಿವೃದ್ಧಿ ಮಂತ್ರಿ ನಜೀರ್‌ಸಾಬ್ ತಮ್ಮ ಜೀವನದಲ್ಲಿ ಒಂದೇ ಒಂದು ಬಾರಿ ಕೋಪಗೊಂಡಿದ್ದಾರೆಂಬಸುದ್ದಿ ಪ್ರಕಟವಾಗಿತ್ತು. ಅದಕ್ಕೆ ಕಾರಣವಾದ ಘಟನೆ ಹೀಗಿದೆ. ಒಂದು ಹಳ್ಳಿಗೆ ನಜೀರ್ ಸಾಬ್ ಭೇಟಿ ನೀಡಿದಾಗ ಆ ಊರಿನ ಮಂ. ಪಂ. ಅಧ್ಯಕ್ಷ ಮನವಿ ಪತ್ರ ನೀಡಿ ಅದರಲ್ಲಿ ತನ್ನ ಪಂಚಾಯತ್‌ಗೆ ಕುಡಿ ಯುವ ನೀರಿಗಾಗಿ ಹೊಸ ಬಾವಿ ಮತ್ತು ಟ್ಯಾಂಕ್ ಮಂಜೂರು ಮಾಡಿ ಎಂದು ಪ್ರಾರ್ಥಿಸಿದ್ದ. ಅದಕ್ಕೆ ತುಸು ಕಟುವಾಗಿ ಉತ್ತರಿಸಿದ ನಜೀರ್ ಸಾಬ್, “”ಅಧಿಕಾರವನ್ನೇ ಪಣವಾಗಿಟ್ಟು, ಮಂಡಲ ಪಂಚಾಯತ್ ವ್ಯವಸ್ಥೆ ಜಾರಿಗೆ ತಂದು ಪಂಚಾಯತ್‌ಗೆ ಅಧಿಕಾರ ನೀಡಿದ್ದಕ್ಕಾಗಿ ಎಲ್ಲ ಪಕ್ಷಗಳ ಎಂತೆಂಥ ರಾಜಕಾರಣಿಗಳನ್ನು ಎದುರು ಹಾಕಿಕೊಂಡೆ. ನಿಮ್ಮೂರಿನ ಗ್ರಾಮಸಭೆಯಲ್ಲಿ ಊರಿನ ಜನರು ಒಟ್ಟು ಕುಳಿತು ಅನುಮೋದಿಸಿದ ಬೇಡಿಕೆಯನ್ನು ಮಾತ್ರ ಕೈಗೆತ್ತಿಕೊಳ್ಳಿ ಎಂದು ಆದೇಶ ಕೊಟ್ಟೆ. ಮಂತ್ರಿಯಾಗಿ ನನಗೆ ನಿಮ್ಮೂರಿನ ಓವರ್ ಟ್ಯಾಂಕ್ ನಿರ್ಮಾಣ ಮಾಡಲು ಬರುವುದಿಲ್ಲ; ನೀವೇ ನಿರ್ಣಯ ಮಾಡಿದರೆ ಮಾತ್ರ ಕಾಮಗಾರಿ ಮಂಜೂರಾಗುತ್ತದೆ ಎಂಬ ಶಾಸನ ತಂದೆ. ಮಂತ್ರಿಯಾಗಿ ನಾನು ಬದಲಾದೆ, ಸರಕಾರದ ಆಡಳಿತ ವ್ಯವಸ್ಥೆ ಬದಲಾಯಿತು, ಕಾನೂನು, ನಿಯಮಗಳು ಬದಲಾದವು. ಆದರೆ ಅಧಿಕಾರ ಚಲಾಯಿಸುವ ನೀವು ಮಾತ್ರ ಬದಲಾಗಿಲ್ಲ. ನನಗೆ ಮನವಿ ಬೇಡ, ನೀವು ಮಾಡಿದ ಗ್ರಾಮಸಭಾ ನಿರ್ಣಯವೇ ಸರಕಾರಕ್ಕೆ ಅಂತಿಮ ಆದೇಶ” ಎಂದು ಆ ಪತ್ರವನ್ನು ವಾಪಾಸು ಕೊಟ್ಟರು.
ಇಂದಿಗೂ ಅದೇ ದುಗುಡ: ಪಂಚಾಯತ್ ರಾಜ್ ವ್ಯವಸ್ಥೆಯ ದುರಂತವೆಂದರೆ ನಜೀರ್ ಸಾಬ್ ಅಂದು ವ್ಯಕ್ತಪಡಿಸಿದ ದುಗುಡ ಇಂದಿಗೂ ಪೂರ್ಣ ಮಾಸಿ ಹೋಗಿಲ್ಲ. ಹೆಗಡೆ – ಸಾಬ್ ಜೋಡಿ ನೀಡಿದ ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಯನ್ನು ಗಮನಿಸಿದ ರಾಜೀವ್ ಗಾಂಧಿಯವರು ದೇಶದ ಸಂವಿಧಾನದ 73ನೇ ಕಲಂಗೆ ತಿದ್ದುಪಡಿ ತಂದು ಭಾರತದಾದ್ಯಂತ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್‌ಗಳೆಂಬ ತ್ರಿಸ್ಥರದ ಆಡಳಿತ ವ್ಯವಸ್ಥೆಗೆ ಚಾಲನೆ ಕೊಟ್ಟಿದ್ದಾರೆ. ಸಂವಿಧಾನ ತಿದ್ದುಪಡಿಯಾಗಿ ಸರಿಸುಮಾರು 24 ವರ್ಷಗಳು ಉರುಳಿದ್ದರೂ ಅಧಿಕಾರ ವಿಕೇಂದ್ರಿಕರಣದ ಪರಿಕಲ್ಪನೆಗೆ ಆಡಳಿತಾತ್ಮಕವಾಗಿ ಹೆಚ್ಚು ಶಕ್ತಿ ಬಂದೇ ಇಲ್ಲ. ಅಲ್ಲೋ ಇಲ್ಲೋ ಅಧಿಕಾರ ಮತ್ತು ಆರ್ಥಿಕ ಶಕ್ತಿಯನ್ನು ಪಂಚಾಯತಿಗೆ ಇಳಿಸಿದ್ದೇವೆ ಎಂಬ ವಾತಾವರಣ ನಿರ್ಮಾಣ ಮಾಡಿದ್ದರೂ ಸರ್ವ ಪಕ್ಷಗಳ ಸಮರ್ಥರೆಲ್ಲ ಅಧಿಕಾರ ಮತ್ತು ಹಣಕಾಸಿನ ನಿಯಂತ್ರಣದ ಜುಟ್ಟು ವಿಧಾನಸೌಧದಿಂದ ಕೆಳಗಿಳಿಯಲು ಬಿಡುತ್ತಿಲ್ಲ. ಈ ಮಟ್ಟಿಗೆ ಬಹುತೇಕರದ್ದು ಒಂದೇ ಪಕ್ಷ- ಒಂದೇ ಮನಃಸ್ಥಿತಿ! ಜನತಂತ್ರ ವ್ಯವಸ್ಥೆಯಲ್ಲಿ ನಮ್ಮ ಯೋಗ್ಯತೆಗೆ ಸರಿಯಾಗಿರುವ ಸರಕಾರವನ್ನೇ ನಾವು ಪಡೆಯುತ್ತೇವೆ ಎಂಬ ಮಾತಿದೆ. ಅದೇ ರೀತಿ ಇಂದು ಕರ್ನಾಟಕ ರಾಜ್ಯದ ಪ್ರಗತಿಯ ಗತಿಯನ್ನು ಬದಲಿಸುವ ಶಕ್ತಿ ಇರುವುದು ಕೇವಲ ರಾಜ್ಯದ ಮುನ್ನೂರು ಜನ ಶಾಸಕರ ಬಳಿ ಮಾತ್ರ ಎಂಬ ಭ್ರಮೆಯನ್ನು ಬಿಟ್ಟು ಬಿಡಬೇಕು. ನಿಜವಾದ ಆಡಳಿತ ಮತ್ತು ಅನುಷ್ಠಾನದ ಶಕ್ತಿ ಇರುವುದು, ಜನರಿಂದ ಆಯ್ಕೆಯಾದ ಒಂದು ಲಕ್ಷದಷ್ಟು ಮಂದಿ ಪಂಚಾಯತ್ ಸದಸ್ಯರಿಗೆ. ಪಂಚಾಯತ್ ಮತ್ತು ಗ್ರಾಮಸಭೆಗಳನ್ನು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಯಶಸ್ವಿಗೊಳಿಸಿ ಈ ರಾಜ್ಯದ ಭವಿಷ್ಯ ಹಾಗೂ ಅಭಿವೃದ್ಧಿಯನ್ನು ವ್ಯವಸ್ಥಿತವಾಗಿ ರೂಪಿಸಲು ಕೆಳಸ್ಥರದ ಜನಪ್ರತಿನಿಧಿಗಳು ಮಾತ್ರ ಶಕ್ತರು.
ಆದರೇನು? ಒಂದು ಒಳ್ಳೆಯ ಉದ್ದೇಶವನ್ನು ಇಟ್ಟುಕೊಂಡು, ಸಂವಿಧಾನದ ತಿದ್ದುಪಡಿಯಾಗಿ ಅಂತಹ ಅವಕಾಶ ವಂಚಿತರ, ನಿರ್ಲಕ್ಷಿತರ ಕೈಗೆ ಅಧಿಕಾರ ಸಿಗುವ ಅವಕಾಶವಾಯಿತು ಎಂಬುದು ಬಿಟ್ಟರೆ ಅದರ ಅಕ್ಷರಶಃ ಅನುಷ್ಠಾನಕ್ಕೆ ಆಗ್ರಹಿಸುವ ದನಿಗಳು ಗಟ್ಟಿಗೊಳ್ಳಲೇ ಇಲ್ಲ. ನಿತ್ಯ ಜಗಳವಾಡುವುದರ ನಡುವೆಯೂ ಇಂದಿನ ಗ್ರಾಮೀಣ ಅಭಿವೃದ್ಧಿ ಸಚಿವರಾದ ಎಚ್. ಕೆ. ಪಾಟೀಲರು, ರಮೇಶ್ ಕುಮಾರ್ ವರದಿಯನ್ನು ಜಾರಿಗೆ ತಂದದ್ದನ್ನು ಮರೆಯಲಾಗದು. ಹಾಗೆಂದು, ಕಾಯಿದೆ ಜಾರಿಗೆ ಆಗಿರುವುದನ್ನು ಬಿಟ್ಟರೆ ಅದರ ಆಶಯ ಅನುಷ್ಠಾನವಾಗಿಲ್ಲ ಎಂಬ ಸತ್ಯವನ್ನು ಮುಚ್ಚಿಡುವುದಕ್ಕೂ ಆಗದು. ಹಾಗೊಂದು ವೇಳೆ ಗ್ರಾ. ಪಂ. ಚುನಾವಣೆಗೆ ಮೊದಲು ರಮೇಶ್ ಕುಮಾರ್ ವರದಿ ಜಾರಿಗೆ ತಂದು, ವರದಿಯಲ್ಲಿ ಪ್ರಸ್ತಾವಿಸಿ ಶಿಫಾರಸು ಮಾಡಿದ್ದ ಚುನಾವಣಾ ಸುಧಾರಣಾ ವ್ಯವಸ್ಥೆಯನ್ನು ಅದಾಗಲೇ ಜಾರಿಗೊಳಿಸಿದ್ದಿದ್ದರೆ, ಕನಿಷ್ಠ ಪಂ.ಚುನಾವಣೆಯಲ್ಲಿ ಆದರೂ ಆಮಿಷ, ಭ್ರಷ್ಟಾಚಾರವನ್ನು ತಡೆದರೆಂಬ ಕೀರ್ತಿ ಕರ್ನಾಟಕಕ್ಕೂ ಬರುತ್ತಿತ್ತು. ಅದರ ಗೌರವ ಇಂದಿನ ಸರಕಾರಕ್ಕೂ ಸಿಗುತ್ತಿತ್ತು. ಹೆಗಡೆಯವರ ಪಂಚಾಯತ್ ರಾಜ್ ವ್ಯವಸ್ಥೆ ದೇಶಕ್ಕೆ ಮಾದರಿಯಾದಂತೆ ರಮೇಶ್ ಕುಮಾರ್ ವರದಿಗೂ ತನ್ನದೇ ಆದ ಗೌರವ ಸಿಗುತ್ತಿತ್ತು. ಅದೊಂದು ಕೈತಪ್ಪಿ ಹೋದ ಅವಕಾಶ ಅನ್ನುವುದು ವಾಸ್ತವ. ಪಂಚಾಯತ್ ರಾಜ್ ದಿನ ನೆನಪಿಸಿಕೊಳ್ಳಬೇಕಾದ ಮತ್ತೋರ್ವ ವ್ಯಕ್ತಿಯೆಂದರೆ ಎಂ. ವೈ. ಘೋರ್ಪಡೆ. ಅಧಿಕಾರ -ಹಣಕಾಸಿನ ಅಧಿಕಾರವನ್ನು ಪಂಚಾಯತ್‌ಗಳಿಗೆ ನೀಡದೆ ಕೇವಲ ರಾಜಕೀಯ ವಿಕೇಂದ್ರೀಕರಣ ಮಾಡಿದರೆ ಪಂಚಾಯತ್ ವ್ಯವಸ್ಥೆ ತನ್ನ ಮೂಲ ಅರ್ಥ ಕಳೆದುಕೊಳ್ಳುತ್ತದೆ. ರಾಜ್ಯ ಸರಕಾರಗಳು ಅನುದಾನವನ್ನು ಪಂಚಾಯತಿಗಳಿಗೆ ಹರಿಯಬಿಟ್ಟು ಅನುಷ್ಠಾನದ ಮೇಲ್ವಿಚಾರಣೆ ಮಾತ್ರ ಮಾಡಬೇಕು ಎಂಬುದು ಘೋರ್ಪಡೆಯವರ ನಿಲುವಾಗಿತ್ತು.
ಮರೆತು ಹೋದ ತ್ರಿ-ಎಫ್ಗಳು: ಪ್ರತಿ ಬಾರಿಯೂ ಪಂಚಾಯತ್ ಪ್ರತಿನಿಧಿಗಳು “ನಮಗೆ ಹೆಚ್ಚು ಅಧಿಕಾರ ಕೊಡಿ, ಹಣಕಾಸು ಕೊಡಿ’ ಎನ್ನುತ್ತಿದ್ದರೂ ಕಾಯಿದೆಯು ಪಂಚಾಯತ್‌ಗಳಿಗೆ ಹಣಕಾಸು, ಸಿಬಂದಿ, ಅಧಿಕಾರ ನೀಡಲು ಒಪ್ಪಿಗೆ ಸೂಚಿಸಿದ್ದರೂ “ತ್ರಿ-ಎಫ್’ಗಳಾದ “ಫೈನಾನ್ಸ್, ಫಂಕ್ಷನ್, ಫಂಕ್ಷನರಿ’ಗಳು ಗ್ರಾ. ಪಂ.ಗಳಿಗೆ ಇಳಿಯುತ್ತಿಲ್ಲ. ಬದಲಾಗಿ ಪಂಚಾಯತ್‌ಗಳಿಗೆ ಇರುವ ಅಧಿಕಾರವೇ ಮೊಟಕುಗೊಳ್ಳುವ ಭೀತಿ ಕಾಡುತ್ತಿದೆ. ಕಳೆದ ಸದನದಲ್ಲಿ ಗ್ರಾಮಸಭೆಗಳ ಅಧಿಕಾರದ ಬಗ್ಗೆ ಚರ್ಚೆ ನಡೆದು ಬಡವರ ಮನೆ ಆಯ್ಕೆ ಪ್ರಕ್ರಿಯೆ ಗ್ರಾಮಸಭೆಗಳಲ್ಲಿ ಆಗಬೇಕಿತ್ತಾದರೂ ರಾಜ್ಯ ಸರಕಾರ ಸುತ್ತೋಲೆಯ ಮೂಲಕ ಗ್ರಾಮಸಭೆಯ ಆ ಅಧಿಕಾರವನ್ನು ಕಿತ್ತುಕೊಂಡಿದೆ. ಸುತ್ತೋಲೆ ವಾಪಸ್ ಪಡೆಯಿರಿ ಎಂಬ ಒತ್ತಾಯ ನಡೆದು ಸದನವೇ ಗೊಂದಲಗೊಂಡರೂ ಸರಕಾರವು ಮನೆ ಕೊಡುವ ಅಧಿಕಾರ ಗ್ರಾಮ ಸಭೆಗಿದ್ದು, ಅದನ್ನು ಮೊಟಕು ಮಾಡಿಲ್ಲವೆಂದು ಸಮಾಧಾನ ಮಾಡಿದರೂ ಅನುಷ್ಠಾನದಲ್ಲಿ ಗ್ರಾಮಸಭೆಯ ಆಯ್ಕೆಯ ಅಧಿಕಾರವನ್ನು ಎತ್ತಿ ಹಿಡಿಯದೇ ನುಣುಚಿಕೊಂಡಿದೆ.
ಉಡುಪಿ ಜಿಲ್ಲೆಯ ಕೆಲವು ಗ್ರಾ. ಪಂ¬ಗಳಲ್ಲಂತೂ ಗ್ರಾಮಸಭೆ ಶಿಫಾರಸು ಮಾಡಿದ ಮನೆಗಳೇ ಬೇರೆ, ಮಂಜೂರಾಗಿ ಬಂದ ಪಟ್ಟಿಯಲ್ಲಿರುವವುಗಳೇ ಬೇರೇ. ಜಾಗೃತ ಸಮಿತಿಯ ಹೆಸರಿನಲ್ಲಿ ಗ್ರಾಮಸಭೆಯ ಪಾರದರ್ಶಕ ನಿರ್ಣಯಕ್ಕೆ ಸರಕಾರ ಮತ್ತು ಬರಿಸುವ ಮದ್ದು ನೀಡಿದ್ದು, ಆಡಳಿತ ವ್ಯವಸ್ಥೆಯಲ್ಲಿ ಪಂಚಾಯತ್ ರಾಜ್ ಜಡ್ಡುಕಟ್ಟಿದ್ದಕ್ಕೆ ನಿದರ್ಶನ. ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಗೆ ಗಟ್ಟಿತನ ಬರಬೇಕಾದರೆ ಸ್ಥಳೀಯಾಡಳಿತ ಜನಪ್ರತಿನಿಧಿಗಳು ತಮ್ಮ ಹಕ್ಕುಗಳಿಗಾಗಿ ಬಡಿದಾಟಕ್ಕಿಳಿಧಿಯಬೇಕು. ಅಲ್ಲೋ ಇಲ್ಲೋ ಮತ್ತೆಲ್ಲೋ ಬಿಡಿಬಿಡಿಯಾಗಿ ಪಂಚಾಯತ್‌ಗೆ ಅಧಿಕಾರ, ಆರ್ಥಿಕ ಶಕ್ತಿ ಕೊಡಿ ಎಂಬ ಹೇಳಿಕೆ ನೀಡಿಧಿದರೆ ಮಾಧ್ಯಮದಲ್ಲಿ ಸುದ್ದಿಯಾಗಬಹುದೇ ವಿನಾ ಫಲಿತಾಂಶ ಸಿಗಲಾರದು. ಎಲ್ಲಿಯವರೆಗೆ ಹಳ್ಳಿಯ ಗ್ರಾಮಸೌಧದ ಮೂಲಕ ಮಾಡಿದ ಯೋಜನೆಯ ಶಿಫಾರಸುಗಳನ್ನು ರಾಜ್ಯ-ರಾಷ್ಟ್ರದ ವಿಧಾಧಿನಸಭೆ ಮತ್ತು ಲೋಕಸಭೆಗಳು ಅನುಷ್ಠಾನ ಮಾಡಲು ತುದಿಗಾಲಲ್ಲಿ ನಿಲ್ಲಲಾರವೋ ಅಲ್ಲಿಯವರೆಗೆ ಸಂವಿಧಾನದ 73ನೇ ಕಾಲಂ ತಿದ್ದುಪಡಿಧಿಯೆಂಬುದು ಬರೀ ಘೋಷಣೆಯಾಗುತ್ತದೆ ಬಿಟ್ಟರೆ ವಾಸ್ತವವಾಗಲಾರದು.
ಕೋಟ ಶ್ರೀನಿವಾಸ ಪೂಜಾರಿ