ಇಸ್ಲಾಮಾಬಾದ್: ದಕ್ಷಿಣ ಇಟಲಿಯಲ್ಲಿ ಸೋಮವಾರ ನಡೆದ ದೋಣಿ ದುರಂತದಲ್ಲಿ 24 ಕ್ಕೂ ಹೆಚ್ಚು ಮಂದಿ ಪಾಕಿಸ್ತಾನಿಯರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಶೇಹಬಾಝ್ ಶರೀಫ್ ಮಾಹಿತಿ ನೀಡಿದ್ದಾರೆ.
ಸುಮಾರು 150 ಕ್ಕೂ ಹೆಚ್ಚು ಮಂದಿ ವಲಸಿಗರನ್ನು ಯೂರೋಪಿಗೆ ಕೊಂಡೊಯ್ಯುತ್ತಿದ್ದ ದೋಣಿ ದಕ್ಷಿಣ ಇಟಲಿ ಸಮುದ್ರ ದಂಡೆಯಲ್ಲಿ ಬಂಡೆಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಈವರೆಗೆ ಸುಮಾರು 80 ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದ್ದು 20 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಕಿಸ್ತಾನ, ಇರಾನ್, ಅಫ್ಘಾನಿಸ್ತಾನ ಮೊದಲಾದ ದೇಶಗಳ ವಲಸಿಗರನ್ನು ತುಂಬಿದ್ದ ಮರದ ಹಲಗೆಗಳಿಂದ ತಯಾರಿಸಲ್ಪಟ್ಟಿದ್ದ ದೋಣಿ ಟರ್ಕಿಯಿಂದ ಹೊರಟು ಯೂರೋಪ್ ಕಡೆಗೆ ಪ್ರಯಾಣ ಬೆಳೆಸಿತ್ತು. ಈ ವೇಳೆ ಬಂಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ಘಟನೆಯಲ್ಲಿ 51ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ಅದರಲ್ಲಿ ಸುಮಾರು 24 ಮಂದಿ ಪಾಕಿಸ್ತಾನದ ಪ್ರಜೆಗಳು ಎಂದು ತಿಳಿದುಬಂದಿದೆ.
ಇಟಲಿಯಲ್ಲಿ ನಡೆದ ದೋಣಿ ದುರಂತದಲ್ಲಿ 24ಕ್ಕೂ ಹೆಚ್ಚು ಪಾಕಿಸ್ತಾನಿಯರು ಮೃತಪಟ್ಟಿದ್ದಾರೆ. ಇದು ಖಂಡಿತಾ ಭೀತಿಯುಂಟು ಮಾಡಿದೆ ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಶೇಹಬಾಝ್ ಶರೀಫ್ ಹೇಳಿದ್ದಾರೆ. ಅಲ್ಲದೇ, ʻಈ ಬಗ್ಗೆ ವಿದೇಶಾಂಗ ಸಚಿವಾಲಯ ಆದಷ್ಟು ಬೇಗ ತನಿಖೆ ನಡೆಸಿ ದೇಶಕ್ಕೆ ಧೈರ್ಯ ತುಂಬಲಿʼ ಎಂದೂ ಹೇಳಿದ್ದಾರೆ.
ಯೂರೋಪ್‌ಗೆ ಮಾನವ ಕಳ್ಳಸಾಗಣಿಕೆ ಮಾಡಲು ಟರ್ಕಿ ಉತ್ತಮ ಮಾರ್ಗವಾಗಿದ್ದು ಪ್ರತಿ ವರ್ಷ ಈ ದಾರಿಯಲ್ಲಿ ಲಕ್ಷಾಂತರ ಮಂದಿಯನ್ನು ಕಳ್ಳಸಾಗಾಣಿಕೆ ಮಾಡಲಾಗುತ್ತದೆ. ಕಳ್ಳ ಸಾಗಾಣಿಕೆದಾರರಿಗೆ ಯೂರೋಪ್‌ನಲ್ಲಿ ಇಳಿಯಲು ಇಟಲಿ ಸಮುದ್ರ ದಂಡೆಗಳು ಸೂಕ್ತ ಪ್ರದೇಶವಾಗಿದ್ದು ಇದೇ ಪ್ರದೇಶದಲ್ಲಿ ದೋಣಿ ದುರಂತ ಸಂಭವಿಸಿದೆ.
ಇದನ್ನೂ ಓದಿ:
ಪುಟಿನ್ ಆಪ್ತರೇ ಅವರ ಹತ್ಯೆ ಮಾಡಲಿದ್ದಾರೆ..: ಭವಿಷ್ಯ ನುಡಿದ ಉಕ್ರೇನ್ ಅಧ್ಯಕ್ಷ