ಕಲಬುರಗಿ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಮತ್ತು ರೈತರಿಗೆ 24 ಗಂಟೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರು ಆಶೀರ್ವಾದ ಮಾಡಿದರೆ ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಬಹುಮತ ಪಡೆದು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಲಿದ್ದಾರೆ ಎನ್ನುವ ಮೂಲಕ ಮುಖ್ಯಮಂತ್ರಿ ಕುರಿತು ಜೆಡಿಎಸ್ ನಲ್ಲಿ ಉಂಟಾಗಿರುವ ವಿಭಿನ್ನ ಗೊಂದಲಗಳಿಗೆ ತೆರೆ ಎಳೆದರು.
ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರ ಸಂಪೂರ್ಣ ಉದ್ರಿಯಾಗಿ ಮಾತನಾಡುತ್ತಿದೆ. ತಾವೇ ಸರಕಾರ ನಡೆಸುತ್ತಿರುವಾಗ, ಘೋಷಣೆ ಮಾಡಿರುವ ಯೋಜನೆಗಳ ಕುರಿತು ಬೆನ್ನು ತಟ್ಟಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಛೇಡಿಸಿದ ಅವರು ಸಹಕಾರ ಸಂಘಗಳಿಗೆ 24,000 ಕೋಟಿ ರೂಪಾಯಿ ಸಾಲ ಕೊಟ್ಟಿದ್ದಾಗಿ ಬೆನ್ನು ತಟ್ಟಿಕೊಳ್ಳುವ ಸರ್ಕಾರ, ಈ ಹಿಂದೆ ಕೂಡ ಇಂತಹ ಕೆಲಸಗಳನ್ನು ಇತರೆ ಸರ್ಕಾರಗಳು ಮತ್ತು ನಮ್ಮ ಸರ್ಕಾರದ ಅವಧಿಯಲ್ಲಿ 14,000 ಕೋಟಿಗಳನ್ನು ವಾರ್ಷಿಕವಾಗಿ ನೀಡಲಾಗಿತ್ತು. ನಾವು ಅಧಿಕಾರಕ್ಕೆ ಬಂದ ತಕ್ಷಣವೇ 25000 ಕೋಟಿ ರೂಪಾಯಿ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ ಎಂದರು.
ರಾಜ್ಯದಲ್ಲಿ ಜನ ಸಂಕಲ್ಪ ಎಂದು ಆಯಾ ಜಾತಿ ಧರ್ಮಗಳ ರ್ಯಾಲಿ ಮಾಡುವ ಮುಖೇನ ಬಿಜೆಪಿ ಏನು ಸಾಬೀತು ಮಾಡಲು ಹೊರಟಿದೆ ಎನ್ನುವುದು ಅರ್ಥವಾಗುತ್ತಿಲ್ಲ. ತಮ್ಮ ಅವಧಿಯಲ್ಲಿ ಜನರಿಗೆ ಒಳ್ಳೆಯದು ಮಾಡಬೇಕಾದದ್ದು ಪಕ್ಷದ ಅಥವಾ ಸರ್ಕಾರದ ಸಂಕಲ್ಪವೆ ಹೊರತು, ಅದು ಜನ ಸಂಕಲ್ಪ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.
Related Articles
ಇನ್ನೊಂದು ಕಡೆ ಕೂಡ ಕಾಂಗ್ರೆಸ್ ಭಾರತ ಜೋಡು ಪಾದಯಾತ್ರೆ ಮಾಡುತ್ತಿರುವುದು ಕೂಡ ಅಚ್ಚರಿ ಮೂಡಿಸಿದೆ ಎಂದ ಅವರು, ಉಭಯ ಪಕ್ಷಗಳಿಂದ ಯಾವುದೇ ಹಂತದಲ್ಲಿ ಜನರಿಗೆ ಕಲ್ಯಾಣ ಸಾಧ್ಯವಾಗಿಲ್ಲ ಎಂದರು.
ಪಂಚರತ್ನ ಯಾತ್ರೆ: ರಾಜ್ಯದ ಜನತೆ ಹಾಗೂ ರೈತರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜೆಡಿಎಸ್ ರಾಜ್ಯಾದ್ಯಂತ ಪಂಚರತ್ನ ಯೋಜನೆಯ ಯಾತ್ರೆಯನ್ನು ಕೈಗೊಂಡಿದೆ ಇದು ಮಹತ್ವಕಾಂಕ್ಷಿ ಯಾತ್ರೆಯಾಗಿದ್ದು, ಹಂತ ಹಂತವಾಗಿ ಇಡೀ ರಾಜ್ಯದ ತುಂಬಾ ಈ ಯಾತ್ರೆ ಸಂಚರಿಸಲಿದೆ ಎಂದರು.
ನಾವು ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಳನ್ನು ಸಂಪೂರ್ಣ ಮಾಡುವುದು, ಶಿಕ್ಷಣವನ್ನು ಜನರಿಗೆ ಅವರ ಬಾಗಿಲ ಬಳಿಯಲ್ಲಿಯೇ ನೀಡುವಂತಹ ವ್ಯವಸ್ಥೆ ಮಾಡುವುದು ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆಯುವ ಮೂಲಕ ಜನರಿಗೆ ಉತ್ತಮ ಆರೋಗ್ಯ ನೀಡಲು ಯೋಜಿಸಲಾಗಿದೆ. ಅದಲ್ಲದೆ ಯುವ ಸಬಲೀಕರಣ, ಮಹಿಳಾ ಸಬಲೀಕರಣವೂ ಕೂಡ ಪಂಚ ರತ್ನಗಳಲ್ಲಿ ಸೇರಿದೆ ಎಂದರು.
ಅಫಜಲಪುರದಲ್ಲಿ ಬೃಹತ್ ಸಮಾವೇಶ: ಡಿಸೆಂಬರ್ 8ರಂದು ಅಫಜಲಪುರದಲ್ಲಿ ಅಭ್ಯರ್ಥಿ ಶಿವಕುಮಾರ್ ನಾಟಿಕರ್ ನೇತೃತ್ವದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಇತರೆ ನಾಯಕರು ಆಗಮಿಸುವರು. ಈ ಸಮಾವೇಶದಲ್ಲಿ 2 ಲಕ್ಷ ಜನ ಸೇರಿಸುವ ನಿರೀಕ್ಷೆ ಇದೆ. ಈ ಮುಖೇನ ಕಲ್ಯಾಣ ಕರ್ನಾಟಕ ಹಾಗೂ ಕಲ್ಬುರ್ಗಿಯಲ್ಲಿ ಮತ್ತೊಮ್ಮೆ ಜೆಡಿಎಸ್ ತನ್ನ ಸಂಪೂರ್ಣ ಶಕ್ತಿಗೆ ಮರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.