Advertisement

ನಗರಗಳಿಗೆ 24 ತಾಸು ಕುಡಿಯುವ ನೀರು

02:31 AM Jul 08, 2020 | Hari Prasad |

ಬೆಂಗಳೂರು: ರಾಜ್ಯದ ಎಲ್ಲ ಮಹಾ ನಗರ ಪಾಲಿಕೆ ಮತ್ತು ನಗರಸಭೆ- ಪುರಸಭೆಗಳ ವ್ಯಾಪ್ತಿಯಲ್ಲಿ ದಿನದ 24 ತಾಸು ಕೂಡ ಕುಡಿಯುವ ನೀರು ಪೂರೈಕೆಗೆ ಸ್ಮಾರ್ಟ್‌ ಸಿಟಿ ಮತ್ತು ಅಮೃತ್‌ ಸಿಟಿ ಮೂಲಕ ಕಾರ್ಯಯೋಜನೆ ರೂಪಿಸಲು ನಗರಾಭಿವೃದ್ಧಿ ಇಲಾಖೆ ಮುಂದಾಗಿದೆ.

Advertisement

ನದಿ, ಜಲಾಶಯ ಮತ್ತು ಇತರ ಲಭ್ಯ ಜಲಮೂಲಗಳನ್ನು ಬಳಸಿ ಮನಪಾ ಮತ್ತು ನಗರಸಭೆ – ಪುರಸಭೆ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡುವುದು ಈ ಯೋಜನೆಯ ಮೂಲ ಉದ್ದೇಶ. ಇದಕ್ಕೆ ವಿಶ್ವ ಬ್ಯಾಂಕ್‌ನಿಂದ ಸುಮಾರು 2,400 ಕೋ.ರೂ. ನೆರವು ದೊರೆಯಲಿದೆ.

ಈಗಾಗಲೇ ಮಂಗಳೂರು, ಶಿವಮೊಗ್ಗ, ಮೈಸೂರಿನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಆದರೆ ಇವನ್ನು ಸ್ಮಾರ್ಟ್‌ ಸಿಟಿ ಮತ್ತು ಅಮೃತ್‌ ಸಿಟಿ ಯೋಜನೆಗಳಡಿ ಉನ್ನತ ಮಟ್ಟಕ್ಕೆ ಏರಿಸಲು ಇಲಾಖೆ ತೀರ್ಮಾನಿಸಿದೆ. ಬೆಳಗಾವಿ, ಕಲಬುರಗಿ ಮತ್ತು ಹುಬ್ಬಳ್ಳಿ – ಧಾರವಾಡ ಮನಪಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ತೀವ್ರಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸಲು ಇತ್ತೀಚೆಗೆ ನಡೆದ ಇಲಾಖೆಯ ಉನ್ನತ ಮಟ್ಟದ ಸಭೆಯಲ್ಲಿ ಸೂಚನೆ ನೀಡಲಾಗಿದೆ.

ಬಳ್ಳಾರಿಯ 12 ವಾರ್ಡ್‌ಗಳಲ್ಲಿ ಈಗಾಗಲೇ ಯೋಜನೆಯಡಿ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಉಳಿದ 15 ವಾರ್ಡ್‌ಗಳಲ್ಲಿ ಆ.15ರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಅಮೃತ್‌ ಸಿಟಿ ಯೋಜನೆಯಡಿ ಚಿತ್ರದುರ್ಗ ನಗರದಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಯ ಕಾಮಗಾರಿ ಡಿಸೆಂಬರ್‌ ಒಳಗೆ ಪೂರ್ಣಗೊಳಿಸಲು ತಿಳಿಸಲಾಗಿದೆ.

ಮನಪಾಗಳ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಸಿಟಿ, ನಗರಸಭೆ, ಪುರಸಭೆ ವ್ಯಾಪ್ತಿಗಳಲ್ಲಿ ಅಮೃತ್‌ ಸಿಟಿ ಯೋಜನೆಗಳಡಿ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ವತಿಯಿಂದ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗಿದೆ.

Advertisement

50:50 ಅನುಪಾತದಲ್ಲಿ ಜಮೀನು ಖರೀದಿ
ಒಳಚರಂಡಿ ಮತ್ತು ಕುಡಿಯುವ ನೀರು ವ್ಯವಸ್ಥೆ ಸಹಿತ ಮೂಲಸೌಕರ್ಯ ಕಲ್ಪಿಸಿದ ಅನಂತರ ನಗರಸಭೆ-ಪುರಸಭೆಗಳ ವ್ಯಾಪ್ತಿಯಲ್ಲಿ ಇನ್ನು ಮುಂದೆ ಖಾಸಗಿ ಬಡಾವಣೆಗಳಿಗೆ ಅನುಮೋದನೆ ನೀಡಬಾರದು. ನಗರಾಭಿವೃದ್ಧಿ ಪ್ರಾಧಿಕಾರಗಳ ಮೂಲಕವೇ ಬಡಾವಣೆ ಅಭಿವೃದ್ಧಿಪಡಿಸಿ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ರೈತರಿಂದ 50:50 ಅನುಪಾತದಲ್ಲಿ ಜಮೀನು ಖರೀದಿಸಿ ಬಡಾವಣೆ ಅಭಿವೃದ್ಧಿಪಡಿಸಬೇಕು. ಅಭಿವೃದ್ಧಿಪಡಿಸಿದ ಭೂಮಿಯಲ್ಲಿ ಶೇ.50ರಷ್ಟು ನಿವೇಶನವನ್ನು ಜಮೀನು ಮಾಲಕರಿಗೆ ಬಿಟ್ಟುಕೊಟ್ಟು ಉಳಿದ ನಿವೇಶನ ಸಾರ್ವಜನಿಕರಿಗೆ ಹಂಚಿಕೆ ಮೂಲಕ ಮಾರಾಟ ಮಾಡಬೇಕು. ಇದರಿಂದ ಸಂಪನ್ಮೂಲ ಕ್ರೋಡೀಕರಣಕ್ಕೂ ದಾರಿಯಾಗುತ್ತದೆ.

ನದಿ, ಜಲಾಶಯ ಮತ್ತಿತರ ಮೂಲಗಳ ನೀರಿನ ಲಭ್ಯತೆ ಆಧರಿಸಿ ರಾಜ್ಯದ ಎಲ್ಲ ಮನಪಾ, ನಗರಸಭೆ- ಪುರಸಭೆ ವ್ಯಾಪ್ತಿಯಲ್ಲಿ ದಿನದ 24 ತಾಸು ಕುಡಿಯುವ ನೀರು ಪೂರೈಕೆಗೆ ಕಾರ್ಯಕ್ರಮ ರೂಪಿಸಲಾಗಿದೆ. ವಿಶ್ವಬ್ಯಾಂಕ್‌ ನೆರವಿನೊಂದಿಗೆ ಸ್ಮಾರ್ಟ್‌ ಸಿಟಿ ಮತ್ತು ಅಮೃತ್‌ ಸಿಟಿ ಯೋಜನೆಗಳಡಿ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ನಗರಾಭಿವೃದ್ಧಿ ಪ್ರಾಧಿಕಾರಗಳ ಮೂಲಕ ಬಡಾವಣೆಗಳ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗಿದೆ.
-ಬೈರತಿ ಬಸವರಾಜ್‌, ನಗರಾಭಿವೃದ್ಧಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next