Advertisement

ಹಿಂದುತ್ವದ ಕಾರ್ಪೋರೇಟ್ ಯಜಮಾನಿಕೆಯಿಂದ ದೇಶ ವಿನಾಶದ ಅಂಚಿಗೆ: ಪ್ರಕಾಶ ಕಾರಟ್

04:03 PM Jan 02, 2022 | Team Udayavani |

ಗಂಗಾವತಿ (ಮಾರುತಿ ಮಾನ್ಪಡೆ ವೇದಿಕೆ): ಹಿಂದುತ್ವ ಮತ್ತು ಕಾರ್ಪೋರೇಟ್ ಯಜಮಾನಿಕೆಯಿಂದಾಗಿ ದೇಶದ ವಿನಾಶದ ಅಂಚಿಗೆ ಹೋಗಿದೆ. ಸರಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣದ ಮೂಲಕ ಕೇಂದ್ರದ ಬಿಜೆಪಿ ಸರಕಾರ ಕಾರ್ಪೋರೇಟ್ ಕಂಪನಿಗಳಿಗೆ ಕಾಣಿಕೆ ನೀಡುತ್ತಿದೆ. ಇದರಿಂದ ರೈತ,ಕೃಷಿಕಾರ್ಮಿಕರು ಜನಸಾಮಾನ್ಯರು ಮತ್ತು  ಅಸಂಘಟಿತ ವಲಯದ ಕಾರ್ಮಿಕರ ಶೋಷಣೆ ನಿರಂತರವಾಗಿ ನಡೆಯುತ್ತಿದೆ ಎಂದು ಸಿಪಿಐಎಂ ಪಕ್ಷದ ಪೊಲಿಟ್ ಬ್ಯೂರೋ ಸದಸ್ಯ ಪ್ರಕಾಶ ಕಾರಟ್ ಹೇಳಿದರು.

Advertisement

ಅವರು ನಗರದ ಅಮರಜ್ಯೋತಿ ಕಲ್ಯಾಣಮಂಟಪದಲ್ಲಿ ಆಯೋಜಿಸಿರುವ ಸಿಪಿಐಎಂ ಪಕ್ಷದ 23 ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ ಮಾತನಾಡಿದರು.

ದೇಶದ ಜನರಿಗೆ ಈಡೇರಿಸಲಾಗದ ಭರವಸೆಗಳನ್ನು ನೀಡಿ ಆಡಳಿತಕ್ಕೆ ಬಂದಿರುವ ಬಿಜೆಪಿ ಸರಕಾರ ಆರ್‌ಎಸ್‌ಎಸ್ ಅಜೆಂಡಾಗಳನ್ನು ಈಡೇರಿಸುವ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ. ಸಂವಿಧಾನದ ಆಶಯಗಳಿಗೆ ತಿಲಾಂಜಲಿ ಇಟ್ಟು ಪಾರ್ಲಿಮೆಂಟಿನಲ್ಲಿ ವಿಪಕ್ಷಗಳಿಗೆ ಚರ್ಚೆ ನಡೆಸಲು ಅವಕಾಶ ನೀಡಿದೇ ವಿಪಕ್ಷಗಳ ಸದಸ್ಯರನ್ನು ಹೊರಗೆ ಹಾಕಿ ಏಕ ಪಕ್ಷೀಯವಾಗಿ ಕಾರ್ಮಿಕಕಾಯ್ದೆ, ಕೃಷಿ ಕಾಯ್ದೆ, ಕಾಶ್ಮೀರದ 370 ರದ್ದತಿ ಹೀಗೆ ಹಲವು ಕಾಯ್ದೆಗಳನ್ನು ಯಾವುದೇ ಚರ್ಚೆ ಇಲ್ಲದೇ ಸುಗ್ರೀವಾಜ್ಞೆಯ ಮೂಲಕ ದೇಶದ ಜನರ ಮೇಲೆ ಹೇರಿಕೆ ಮಾಡಲಾಗಿದೆ. ಇದನ್ನು ವಿರೋಧಿಸಿ ರೈತ ಸಂಘಟನೆಗಳು ಸತತ ಒಂದು ವರ್ಷಗಳ ಕಾಲ ಹೋರಾಟ ಮಾಡಿದ ನಂತರ ಆಗಿರುವ ತಪ್ಪನ್ನು ಒಪ್ಪಿಕೊಂಡಿ ಕರಾಳ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲಾಗಿದೆ. ಕರ್ನಾಟಕದಲ್ಲಿ ಇದುವರೆಗೂ ಕರಾಳ ಕೃಷಿ ಕಾಯ್ದೆಗೆ ಪೂರಕವಾಗಿರುವ ಎಪಿಎಂಸಿ ಖಾಸಗೀಕರಣ,ಕಾರ್ಮಿಕ ಕಾಯ್ದೆ ಹಾಗೂ ಕೃಷಿಯೇತರ ಹಣವಂತರು ಭೂಮಿ ಖರೀದಿಗೆ ಇದ್ದ  ತಡೆ ತೆಗೆದು ಹಾಕಿದ(79 ಎ,ಬಿ )ಇತರೆ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಕೊರೊನಾ ಸಂದರ್ಭದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಪರಿಹಾರ ನೀಡುವ ನೆಪದಲ್ಲಿ ಕೋಟ್ಯಾಂತರ ರೂ.ಗಳ ಭ್ರಷ್ಠಾಚಾರವಾಗಿದ್ದು ಸೂಕ್ತ ತನಿಖೆ ಮೂಲಕ ಭ್ರಷ್ಠರಿಗೆ ಶಿಕ್ಷೆಯಾಗಬೇಕೆಂದು ಹೇಳಿದರು.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎ, ಬಿ ಹಾಗೂ ಸಿ ದರ್ಜೆಯ ದೇವಾಲಯಗಳನ್ನು ಭಕ್ತರ ನಿರ್ವಾಹಣೆಗೆ ಕೊಡುವ ರಾಜ್ಯ ಸರಕಾರದ ಉದ್ದೇಶದಲ್ಲಿ ನೈಜತೆ ಇಲ್ಲ. ದೇಗುಲಗಳನ್ನು ಖಾಸಗೀಕರಣ ಮಾಡಿ ಧಾರ್ಮಿಕ ಮುಖಂರು ಜಮೀನ್ದಾರರು ಮತ್ತು ಪಟ್ಟಭದ್ರರ ಕೈಗೆ ದೇಗುಲಗಳನ್ನು ಕೊಟ್ಟು ಭಕ್ತರಿಂದ ಬರುವ ಕೋಟ್ಯಾಂತರ ರೂ.ಗಳನ್ನು ಮತ್ತು ದೇವಾಲಯಗಳ ಹೆಸರಿನಲ್ಲಿರುವ ಭೂಮಿ ಆಸ್ತಿಯನ್ನು ದೋಚಲು ಷಡ್ಯಂತ್ರ ನಡೆಸಲಾಗುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿ ಖಂಡಿಸಿ ಸಿಪಿಐಎಂ ಪಕ್ಷ ಇತರೆ ಎಡಪಂಥೀಯ ಸಂಘಟನೆಗಳ ಜತೆ ಐಕ್ಯತೆಯಿಂದ ಹೋರಾಟ ಮಾಡುವ ಅನಿವಾರ್ಯತೆ ಇದೆ. ಮುಂಬರುವ ದಿನಗಳಲ್ಲಿ ಸಂವಿಧಾನ ವಿರೋಧಿ ನೀತಿ ಸಂವಿಧಾನ ದತ್ತ ನ್ಯಾಯಾಂಗ, ಚುನಾವಣಾ ಆಯೋಗ ಸೇರಿ ಪ್ರಮುಖ ಸ್ವಾಯತ್ತ ಸಂಸ್ಥೆಗಳಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪವನ್ನು ಜನರ ಬಳಿಕೆ ತೆಗೆದುಕೊಂಡ ಹೋಗಬೇಕಿದೆ ಎಂದರು.

ಸಮ್ಮೇಳನದಲ್ಲಿ ಸಿಪಿಐಎಂ ಪಕ್ಷ ಕೇರಳ ರಾಜ್ಯದ ಮುಖಂಡ ಎಂ.ಎ.ಬೇಬಿ, ಪೊಲೀಟ್ ಬ್ಯೂರೋ ಸದಸ್ಯ ಬಿ.ವಿ.ರಾಘವಲು, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ, ಕೇಂದ್ರ ಸಮಿತಿ ಸದಸ್ಯ ನಿತ್ಯಾನಂದಸ್ವಾಮಿ, ಸಿಪಿಐಎಂಎಲ್ ಮುಖಂಡ ಜೆ.ಭಾರದ್ವಾಜ್, ಸಿಪಿಐಎಂ ಮುಖಂಡರಾದ ಕೆ.ಶಂಕರ್, ವಸಂತ ಆಚಾರಿ, ಎಸ್.ವರಲಕ್ಷ್ಮಿ, ಜೆ.ಬಾಲಕೃಷ್ಣಶೆಟ್ಟಿ, ಮೀನಾಕ್ಷಿ ಸುಂದರ, ಕೆ.ಎನ್.ಉಮೇಶ, ಜಿ.ನಾಗರಾಜ, ನಿರುಪಾದಿ ಬೆಣಕಲ್, ಕೆ.ಹುಸೇನಪ್ಪ , ಕೆ.ನೀಲಾ, ಭಯ್ಯಾರೆಡ್ಡಿ ಸೇರಿ ಹಲವು ಮುಖಂಡರಿದ್ದರು.

Advertisement

ಕೊರೊನಾ ಸಂದರ್ಭದಲ್ಲಿ ದೇಶದಲ್ಲಿ ಬಡವರ ಸಂಖ್ಯೆಯ ಮಾಹಿತಿಯನ್ನು ಕೇಂದ್ರ ಸರಕಾರ ಕೊಡುತ್ತಿಲ್ಲ. ಖಾಸಗಿ ಸಂಸ್ಥೆಯ ಸರ್ವೇ ಪ್ರಕಾರ ಬಡತನ ರೇಖೆಗಿಂತ ಕೆಳಗಿನವರ ಸಂಖ್ಯೆ 10 ಕೋಟಿಯಾಗಿದೆ. ದೇಶದ ಸೈನೆಯಲ್ಲಿ ಸುಪ್ರೀಂಕೋರ್ಟಿನ ಕಾರ್ಯಕಲಾಪ ನ್ಯಾಯಾಧೀಶರ ನೇಮಕ ಭಡ್ತಿಯಲ್ಲಿ ಕೇಂದ್ರ ಸರಕಾರ ಆರ್‌ಎಸ್‌ಎಸ್ ಅಜೆಂಡಾವನ್ನು ಪಾಲನೆ ಮಾಡುತ್ತಿದೆ. ಸಂವಿಧಾನದಲ್ಲಿ ವ್ಯಕ್ತಿ ತನಿಗಿಷ್ಟವಾದ ಧರ್ಮಗೆ ಸೇರುವ ಆಯ್ಕೆ ಇದ್ದರೂ ಕರ್ನಾಟಕ ಸೇರಿ ದೇಶದ ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಕ್ರೈಸ್ತರು ಮತ್ತು ಮುಸ್ಲಿಂ ಜನರನ್ನು ಗುರಿಯಾಗಿಸಿಕೊಂಡು ಮತಾಂತರನಿಷೇಧ ಕಾಯ್ದೆಯನ್ನು ನೂತನವಾಗಿ ಅಸೆಂಬ್ಲಿ ಅಧಿವೇಶನದಲ್ಲಿ ಪಾಸ್ ಮಾಡಲಾಗಿದೆ. ಇದರಿಂದ ವ್ಯಕ್ತಿ ಧಾರ್ಮಿಕ ಸ್ವಾತಂತ್ರ್ಯದ  ಹರಣವಾಗಿದೆ. ಕರ್ನಾಟಕದಲ್ಲಿ ಶೇ.೪೦ ಕಮೀಷನ್ ಭ್ರಷ್ಠಾಚಾರ ನಡೆಯುತ್ತಿರುವ ಕುರಿತು ಪ್ರಧಾನಿ ಕಚೇರಿಗೆ ದೂರು ನೀಡಿದರೂ ಮೋದಿಯವರು ಚಕಾರವೆತ್ತುತ್ತಿಲ್ಲ, ಸಿದ್ದರಾಮಯ್ಯ ಸರಕಾರ ಶೇ.10 ಕಮೀಷನ್ ಸರಕಾರ ಎಂದಿದ್ದ ಮೋದಿ ಇದೀಗ ಜಾಗ ಕಿವುಡು ಪ್ರದರ್ಶನ ಮಾಡುತ್ತಿದ್ದಾರೆ.-ಪ್ರಕಾಶ ಕಾರಟ್ ಸಿಪಿಐಎಂ ಪಕ್ಷದ ರಾಷ್ಟ್ರ ಮುಖಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next