ನವದೆಹಲಿ: ಕೊರೊನೋತ್ತರ ಆರ್ಥಿಕ ಚೇತರಿಕೆಗೆ ಮತ್ತೊಂದು ಉದಾಹರಣೆಯೆಂಬಂತೆ, ಭಾರತದ ನೇರ ತೆರಿಗೆ ಸಂಗ್ರಹವು ಪ್ರಸಕ್ತ ಹಣಕಾಸು ವರ್ಷದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ 2022-23ರ ವಿತ್ತ ವರ್ಷದಲ್ಲಿ ನೇರ ತೆರಿಗೆ ಸಂಗ್ರಹವು ಶೇ.23ರಷ್ಟು ಅಂದರೆ 7 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿದೆ.
ಇದು ಆರ್ಥಿಕ ಚಟುವಟಿಕೆಗಳಲ್ಲಿ ಆದ ಪುನಶ್ಚೇತನ, ತಂತ್ರಜ್ಞಾನಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ತೆರಿಗೆ ಸೋರಿಕೆಯನ್ನು ತಡೆಯಲು ಸರ್ಕಾರ ಕೈಗೊಂಡ ಕ್ರಮಗಳು ಹಾಗೂ ಸರ್ಕಾರದ ಸ್ಥಿರ ನೀತಿಗಳ ಫಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಸೆ.17ರವರೆಗೆ ಒಟ್ಟು 7,00,669 ಕೋಟಿ ರೂ. ನಿವ್ವಳ ನೇರ ತೆರಿಗೆ ಸಂಗ್ರಹವಾಗಿದೆ. ಈ ಪೈಕಿ 3,68,484 ಕೋಟಿ ರೂ. ಕಾರ್ಪೊರೇಷನ್ ತೆರಿಗೆಯಾಗಿದ್ದರೆ, ವೈಯಕ್ತಿಕ ಆದಾಯ ತೆರಿಗೆಯ ರೂಪದಲ್ಲಿ 3,30,490 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 5,68,147 ಕೋಟಿ ರೂ. ನಿವ್ವಳ ನೇರ ತೆರಿಗೆ ಸಂಗ್ರಹವಾಗಿತ್ತು ಎಂದು ಸಚಿವಾಲಯ ಮಾಹಿತಿ ನೀಡಿದೆ.
ಇದೇ ವೇಳೆ, ಈ ವರ್ಷ ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆಯೂ ಗಣನೀಯ ವೇಗ ಪಡೆದಿದ್ದು, ಸೆ.17ರ ವೇಳೆಗೆ ಶೇ.93ರಷ್ಟು ಐಟಿಆರ್‌ಗಳನ್ನು ಪ್ರೊಸೆಸ್ ಮಾಡಲಾಗಿದೆ. 1.35 ಲಕ್ಷ ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ಮರುಪಾವತಿ ಮಾಡಲಾಗಿದೆ.