ಕುಂದಾಪುರ: ದೂರ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ದಿಂದ 225 ಟವರ್‌ಗಳನ್ನು ಮಂಜೂರು ಮಾಡಿದ್ದು, ಬೈಂದೂರು ತಾಲೂಕಿಗೆ 27 ಟವರ್‌ಗಳು ಬರಲಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಕೆಲವೆಡೆ ಖಾಸಗಿ ದೂರ ಸಂಪರ್ಕ ಕಂಪೆನಿಗಳು ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿದರೂ ಕೆಲವು ಕುಗ್ರಾಮಗಳಲ್ಲಿ ಜನವಸತಿ ಕಡಿಮೆ ಇರುವುದರಿಂದಾಗಿ ಟವರ್ ನಿರ್ಮಾಣಕ್ಕೆ ಆಸಕ್ತಿ ತೋರಲಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ದಿಂದಲೇ ಟವರ್ ನಿರ್ಮಿಸಲು ಮನವಿ ಸಲ್ಲಿಸಿದ್ದು, ಮಂಜೂರಾತಿ ದೊರೆತಿದೆ ಎಂದರು.
ಡಿಸಿಗೆ ಸೂಚನೆ: ಬೈಂದೂರು ಕ್ಷೇತ್ರದ ಕಂದಾಯ ಇಲಾಖೆಯ 23 ಸ್ಥಳಗಳನ್ನು ಕೂಡಲೇ ಹಸ್ತಾಂತರಿಸುವಂತೆ ಜಿಲ್ಲಾಧಿ ಕಾರಿಗಳಿಗೆ ಸೂಚಿಸಲಾಗಿದೆ.ಅರಣ್ಯ ಪ್ರದೇಶದ ವ್ಯಾಪ್ತಿಯ ಸ್ಥಳಗಳಲ್ಲಿ ಟವರ್ ನಿರ್ಮಾಣಕ್ಕೆ ಅನುಮತಿಕೋರಿ ಪರಿವೇಶ್ ಪೋರ್ಟಲ್‌ನಲ್ಲಿ ವಿವರ ಒದಗಿಸಲಾಗಿದ್ದು, ಶೀಘ್ರ ಕೇಂದ್ರ ಸರಕಾರದ ಮೂಲಕ ಅನುಮತಿ ಕೊಡಿಸುವಂತೆ ಕೇಂದ್ರ ಸಚಿವರನ್ನು ಒತ್ತಾಯಿಸಿದ್ದೇನೆ ಎಂದರು.
ಅಧಿಕಾರಿಗಳ ಸಭೆ
ಮೊಬೈಲ್ ಟವರ್‌ಗಳನ್ನು ನಿಗದಿತ ಕಾಲ ಮಿತಿಯಲ್ಲಿ ಕಾರ್ಯ ಗತಗೊಳಿಸಲು ಸಂಸದರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಬಿಸ್ಸೆನ್ನೆಲ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಈ ಯೋಜನೆಗಳನ್ನು ಸಕಾಲದಲ್ಲಿ ಕಾರ್ಯಗತಗೊಳಿಲಾಗುವುದು.
Related Articles
ಜನಸಾಮಾನ್ಯರಿಗೆ ತೊಂದರೆ ಯಾಗ ದಂತೆ ಅನುಷ್ಠಾನಗೊಳಿಸಲಾಗುವುದು. ಈಗಾಗಲೇ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಬಿಸ್ಸೆನ್ನೆಲ್ ಸಂಪರ್ಕ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ನೆಟ್‌ವರ್ಕ್ ಇಲ್ಲದೇ ಜನಸಾಮಾನ್ಯರಿಗೆ ಆನ್‌ಲೈನ್ ಮೂಲಕ ಹಣದ ವ್ಯವ ಹಾರ ಮಾಡಲೂ ಸಹ ತೊಂದರೆ ಆಗಿದೆ. ಈಗಿರುವ ಟವರ್‌ಗಳಲ್ಲಿ ಉತ್ತಮ ರೀತಿಯಲ್ಲಿ ನೆಟ್‌ವರ್ಕ್ ಸಂಪರ್ಕ ದೊರೆಯುವಂತೆ ಗಮನ ಹರಿಸಲು ಸಂಸದರು ಸೂಚಿಸಿದರು.
ಪ್ರತಿ ಟವರ್ ನಿರ್ಮಾಣಕ್ಕೆ 75 ಲಕ್ಷ ರೂ.ನಿಂದ 1 ಕೋ.ರೂ. ವರೆಗೆ ವೆಚ್ಚ ತಗುಲ ಲಿದ್ದು, 225 ಟವರ್ ನಿರ್ಮಾಣಕ್ಕೆ ಅಂದಾಜು 200 ಕೋ.ರೂ.ಗೂ ಮಿಕ್ಕಿ ಅನುದಾನವನ್ನು ಕೇಂದ್ರ ಸರಕಾರವು ಬಿಎಸ್ಸೆನ್ನೆಲ್ ಮೂಲಕ ಯುಎಸ್‌ಒಎಫ್ ಅನುದಾನದಲ್ಲಿ ನೀಡಲಿದೆ. ಡಿಸೆಂಬರ್‌ನೊಳಗೆ ಬಹುತೇಕ ಎಲ್ಲ ಟವರ್‌ಗಳು ನಿರ್ಮಾಣವಾಗಲಿದೆ. ಇದರಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ನೂರಾರು ಕುಗ್ರಾಮಗಳಿಗೆ ದೂರಸಂಪರ್ಕ ವ್ಯವಸ್ಥೆ ಒದಗಲಿದೆ.
– ಬಿ.ವೈ . ರಾಘವೇಂದ್ರ,
ಶಿವಮೊಗ್ಗ ಸಂಸದ