Advertisement

ಮೀನುಗಾರರಿಗೆ 2,200 ಮನೆ

09:58 AM Nov 10, 2019 | Team Udayavani |

ಮಂಗಳೂರು: ಮೀನುಗಾರರಿಗೆ ಈ ಬಾರಿ ರಾಜೀವ್‌ ಗಾಂಧಿ ವಸತಿ ನಿಗಮದ ಬದಲು ಮೀನುಗಾರಿಕಾ ಇಲಾಖೆಯಿಂದಲೇ ನೇರವಾಗಿ ಮನೆಗಳನ್ನು ವಿತರಿಸಲಾಗುವುದು ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಈ ಬಾರಿ 2,200 ಮನೆಗಳನ್ನು ವಿತರಿಸಲಾಗುವುದು. ಈ ಹಿಂದೆ ರಾಜೀವ್‌ ಗಾಂಧಿ ವಸತಿ ನಿಗಮದಡಿ ನೀಡಲಾಗುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಪ್ರಗತಿ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಇಲಾಖೆಯಿಂದಲೇ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ಮನೆಗಳನ್ನು ನೀಡುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಮೀನುಗಾರ ಮಹಿಳೆಯರ 50,000 ರೂ. ವರೆಗಿನ ಸಾಲವನ್ನು ಮರುಪಾವತಿಗೆ ಒತ್ತಡ ಹೇರದಿರಲು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ ಎಂದರು.

ದೇವರ ಹೆಸರು: ಗೊಂದಲ ಬೇಡ
ಕೆಲವು ಬಾರ್‌ ಹಾಗೂ ವೈನ್‌ ಶಾಪ್‌ಗ್ಳಿಗೆ ದೇವರ ಹೆಸರನ್ನಿಟ್ಟಿರುವ ಬಗ್ಗೆ ಧಾರ್ಮಿಕ ಇಲಾಖೆಯ ಸಭೆಗಳಲ್ಲಿ ಆಕ್ಷೇಪಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕಾನೂನು, ಅಬಕಾರಿ ಹಾಗೂ ಮುಜರಾಯಿ ಇಲಾಖೆಗಳ ಅಧಿಕಾರಿ ಜತೆ ಚರ್ಚಿಸಿ ಟಿಪ್ಪಣಿ ನೀಡುವಂತೆ ಸೂಚಿಸಲಾಗಿದೆ. ಯಾವುದೇ ಆದೇಶ ಆಗಿಲ್ಲ. ಈ ಬಗ್ಗೆ ಗೊಂದಲ ಬೇಡ ಎಂದರು.

ಭಕ್ತರ ಕಾಣಿಕ ಹಣ ದೇಗುಲ ಅಭಿವೃದ್ಧಿಗೆ
ಇ- ಹುಂಡಿ ವ್ಯವಸ್ಥೆಯನ್ನು ಎ ದರ್ಜೆಯ ದೇವಾಲಯಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಇ-ಹುಂಡಿ ಜಾರಿಗೆ ಬಂದ ಬಳಿಕ ದಿನದಲ್ಲಿ ಸಂಗ್ರಹವಾಗುವ ಕಾಣಿಕೆ ಹಣದ ನಿಖರ ಲೆಕ್ಕ ಪ್ರತಿದಿನ ಸಂಜೆಯ ವೇಳೆ ಇಲಾಖೆಗೆ ಲಭ್ಯವಾಗಲಿದೆ. ಭಕ್ತರು ನೀಡುವ ಕಾಣಿಕೆ ಹಣ ದೇವಸ್ಥಾನಗಳ ಅಭಿವೃದ್ಧಿಗೆ ಬಳಕೆಯಾಗಲಿದೆ. ಈ ಕುರಿತು ಭಕ್ತರಲ್ಲಿ ತಪ್ಪು ತಿಳಿವಳಿಕೆ ಬೇಡ. ಕಾಣಿಕೆ ಮೊತ್ತ ಹಿಂದೂಗಳ ಅನಾಥಾಲಯ ಹಾಗೂ ಸಂತ್ರಸ್ತರಿಗೂ ಬಳಕೆಯಾಗಲಿದೆ ಎಂದು ಸಚಿವ ಕೋಟ ಹೇಳಿದರು.

ಧಾರ್ಮಿಕ ಪರಿಷತ್‌ಗೆ ನೇಮಕ ಪ್ರಕ್ರಿಯೆ ನಾಲ್ಕು ದಿನಗಳಲ್ಲಿ ಆರಂಭವಾಗಲಿದೆ. ರಾಜ್ಯ ಧಾರ್ಮಿಕ ಪರಿಷತ್‌ ರಚನೆ, ಬಳಿಕ ಜಿಲ್ಲಾ ಧಾರ್ಮಿಕ ಪರಿಷತ್ತು ಹಾಗೂ ಅನಂತರ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿ ರಚಿಸಲಾಗುವುದು ಎಂದರು.

Advertisement

ದೇವಾಲಯಗಳಲ್ಲಿ ಸಾಮೂಹಿಕ ವಿವಾಹ
ರಾಜ್ಯದಲ್ಲಿ 191 ಎ ದರ್ಜೆಯ ದೇವಾಲಯಗಳಿದ್ದು ಇದರಲ್ಲಿ ಆಯ್ದ 100 ದೇವಾಲಯಗಳಲ್ಲಿ ಈ ವರ್ಷ 1,000 ಸಾಮೂಹಿಕ ವಿವಾಹಗಳನ್ನು ನಡೆಸಲು ನಿರ್ಧರಿಸಲಾಗಿದೆ. ವಧುವಿಗೆ 1 ಪವನ್‌ ಚಿನ್ನ, 10,000 ರೂ. ಬೆಲೆಯ ಧಾರೆ ಸೀರೆ, ವರನಿಗೆ 5,000 ರೂ. ಮೊತ್ತದ ವಸ್ತ್ರಗಳನ್ನು ನೀಡಲಾಗುವುದು. ಇದರಲ್ಲಿ ಚಿನ್ನವನ್ನು ಸರಕಾರವೇ ನೀಡಲಿದೆ. ಸೀರೆ ಹಾಗೂ ವಸ್ತ್ರಗಳ ಮೊತ್ತವನ್ನು ಆರ್‌ಟಿಜಿಎಸ್‌ ಮೂಲಕ ವಧುವರರ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next