Advertisement

ಕೈ ಸಂಸದನಲ್ಲಿ 220 ಕೋ.ರೂ. ನೋಟು ಕಂತೆ!

01:00 AM Dec 09, 2023 | Team Udayavani |

ಹೊಸದಿಲ್ಲಿ: ಒಂದಲ್ಲ ಎರಡಲ್ಲ, ಬರೋಬ್ಬರಿ 220 ಕೋಟಿ ರೂ.! ಇದು ಝಾರ್ಖಂಡ್‌ನಿಂದ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಮತ್ತು ಅಬಕಾರಿ ಉದ್ಯಮಿ ಧೀರಜ್‌ ಪ್ರಸಾದ್‌ ಸಾಹೂ ನಿವಾಸ ಮತ್ತು ಅವರಿಗೆ ಸೇರಿದ ಸ್ಥಳಗಳಲ್ಲಿ ಪತ್ತೆಯಾದ ನೋಟಿನ ಕಂತೆಗಳ ಮೌಲ್ಯ.

Advertisement

ಒಡಿಶಾದಲ್ಲಿ ಅವರಿಗೆ ಸೇರಿದ ಬೋಧ್‌ ಡಿಸ್ಟಿಲರಿ ಪ್ರೈ.ಲಿ. (ಬಿಡಿಪಿಎಲ್‌)ಯ ಕಚೇರಿ ಮತ್ತು ಇತರ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರದಿಂದ ನಿರಂತರವಾಗಿ ದಾಳಿ ನಡೆಸಿ ಶೋಧ ನಡೆಸುತ್ತಿದ್ದ ವೇಳೆ ರಾಶಿ ರಾಶಿ ನೋಟುಗಳು ಪತ್ತೆಯಾಗಿವೆ. ಅವರ ನಿವಾಸದಲ್ಲಿ 500 ರೂ., 200 ರೂ., 100 ರೂ. ನೋಟುಗಳನ್ನು ವಿಶೇಷವಾಗಿ ನಿರ್ಮಿಸಲಾಗಿರುವ ಕಬ್ಬಿಣದ

ರ್ಯಾಕ್‌ನಲ್ಲಿ 156 ಬ್ಯಾಗ್‌ಗಳಲ್ಲಿ ಸಾಲಾಗಿ ಪೇರಿಸಿ ಇರಿಸಲಾಗಿತ್ತು. ರಾಶಿ ನೋಟು ಎಣಿಸುವುದಕ್ಕಾಗಿ ಹಲವು ನೋಟು ಎಣಿಕೆ ಯಂತ್ರಗಳನ್ನು ಅಧಿಕಾರಿಗಳು ಬಳಸಬೇಕಾಯಿತು.

ಗುರುವಾರ ವಂತೂ ನೋಟು ಎಣಿಸಿ ದಣಿದ ಒಂದು ಯಂತ್ರ ಕೆಟ್ಟು ಹೋಗಿ ಬೇರೊಂದನ್ನು ತರಿಸಬೇಕಾಯಿತು. ಪಶ್ಚಿಮ ಬಂಗಾಲ, ಒಡಿಶಾ, ಜಾರ್ಖಂಡ್‌ಗಳಲ್ಲಿ ಸಂಸದ ಸಾಹು ಅವರ ಕುಟುಂಬ ಸದಸ್ಯರಿಗೆ ಸೇರಿದ ಇತರ ಉದ್ಯಮಗಳ ಮೇಲೆ ಕೂಡ ದಾಳಿ ನಡೆಸಿ ಶೋಧಿಸಲಾಗಿದೆ.

ಸಿಬಿಐ ತನಿಖೆಗೆ ಒತ್ತಾಯ
ರಾಶಿ ರಾಶಿ ನೋಟಿನ ಕಂತೆಗಳು ಕಂಡುಬಂದಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒಡಿಶಾದ ಬಿಜೆಪಿ ನಾಯಕ ಮನೋಜ್‌ ಮಹಾಪಾತ್ರ ಒತ್ತಾಯಿಸಿದ್ದಾರೆ. ಒಡಿಶಾದಲ್ಲಿ ಬಿಜೆಡಿ ಸರಕಾರದ ಸಚಿವೆಯೊಬ್ಬರು ಸಂಸದ ಧೀರಜ್‌ ಪ್ರಸಾದ್‌ ಸಾಹೂಗೆ ಸೇರಿದ ಕಂಪೆನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಅವರು ಪ್ರದರ್ಶಿಸಿದ್ದಾರೆ. ಒಡಿಶಾದ ಅಬಕಾರಿ, ವಿಚಕ್ಷಣಾ ದಳ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

Advertisement

ಯಾರಿದು ಧೀರಜ್‌ ಪ್ರಸಾದ್‌ ಸಾಹೂ?
ಸತತ ಮೂರನೇ ಬಾರಿಗೆ ಕಾಂಗ್ರೆಸ್‌ನಿಂದ ರಾಜ್ಯಸಭಾ ಸದಸ್ಯರಾಗಿರುವ ಧೀರಜ್‌ ಪ್ರಸಾದ್‌ ಸಾಹೂ ಜಾರ್ಖಂಡ್‌ನ‌ವರು. ರಾಜಕೀಯವಾಗಿ ಮತ್ತು ಅಬಕಾರಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಕಾಲದಿಂದಲೂ ಅವರ ಕುಟುಂಬ ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿದೆ. 2009ರ ಜೂನ್‌ನಿಂದ ಅವರು ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಅವರ ಸಹೋದರ ಶಿವಪ್ರಸಾದ್‌ ಸಾಹೂ ಕೂಡ ಒಂದು ಬಾರಿ ಸಂಸದರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next