Advertisement

ಅರೆ ಮಲೆನಾಡಲ್ಲಿ ಜಲಕ್ಷಾಮಕ್ಕಿನ್ನು ಮುಕ್ತಿ

04:07 PM Apr 10, 2022 | Team Udayavani |

ಹೊಳಲ್ಕೆರೆ: ಇಂತಹ ಸಂದರ್ಭದಲ್ಲಿ ‘ಅರೆ ಮಲೆನಾಡು’ ಖ್ಯಾತಿಯ ಹೊಳಲ್ಕೆರೆ ತಾಲೂಕಿನಲ್ಲಿ ನೀರಿನ ಸಮಸ್ಯೆ ಬಹಳಷ್ಟಿತ್ತು. ಇದಕ್ಕೆ ಮುಕ್ತಿ ನೀಡಬೇಕೆಂದು ತಾಲೂಕಿನ 223 ಹಳ್ಳಿಗಳ ನಿವಾಸಿಗಳಿಗೆ ವಿವಿಧ ಜಲ ಮೂಲಗಳಿಂದ ಮನೆ ಮನೆಗೆ ನೀರಿನ ಸೌಲಭ್ಯ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ‘ಜಲಜೀವನ ಮಿಷನ್‌’ ಯೋಜನೆಯನ್ನು ಅನುಷ್ಠಾನಗೊಳಿಸಿವೆ.

Advertisement

ತಾಲೂಕಿನಲ್ಲಿ ಸುಮಾರು 2.5 ಲಕ್ಷ ಜನಸಂಖ್ಯೆಯೂ ಸೇರಿದಂತೆ ಕೋಟ್ಯಂತರ ಸಂಖ್ಯೆಯ ಸಸ್ಯ ಹಾಗೂ ಪ್ರಾಣಿ ಸಂಕುಲವಿದೆ. ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯನ್ನು ಸರ್ಕಾರ ಹೊಂದಿದೆ. ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ ಸಿದ್ಧವಾಗಿದ್ದು, ಅಲ್ಲಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.

ನಾಲ್ಕು ಹಂತಗಳ ಯೋಜನೆ

ತಾಲೂಕಿನಲ್ಲಿ ಒಟ್ಟು 223 ಹಳ್ಳಿಗಳು ಜಲಜೀವನ್‌ ಮಿಷನ್‌ ಯೋಜನೆ ಸೌಲಭ್ಯ ಪಡೆಯಲಿವೆ. ಇದಕ್ಕಾಗಿ ಸರ್ಕಾರ ಸುಮಾರು 367.63 ಕೋಟಿ ರೂ. ಅನುದಾನ ವಿನಿಯೋಗಿಸಿ ಮನೆಬಾಗಿಲಿಗೆ ನೀರಿನ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಜಲಜೀವನ್‌ ಮಿಷನ್‌ ಯೋಜನೆಯನ್ನು ನಾಲ್ಕು ಹಂತಗಳಲ್ಲಿ ಕಾಮಗಾರಿ ಕೈಗೊಂಡಿದ್ದು ಯೋಜನೆ ಪೂರ್ಣಗೊಳ್ಳಲು ಸರ್ಕಾರ ಎರಡು ವರ್ಷಗಳ ಕಾಲಮಿತಿ ನಿಗದಿಪಡಿಸಿದೆ.

ಮೊದಲ ಹಂತದಲ್ಲಿ ಶಾಂತಿಸಾಗರದಿಂದ ಸಿರಿಗೆರೆ ಮಾರ್ಗದಲ್ಲಿ 249 ಲಕ್ಷ ರೂ. ಅನುದಾನ ವ್ಯಯಿಸಿ ಮನೆಗಳಿಗೆ ನಲ್ಲಿ ನೀರು ಪೂರೈಕೆಗೆ ಚಾಲನೆ ನೀಡಿದೆ. ಇದರಿಂದ ಅಂದನೂರು, ಮಲ್ಲೇನಹಳ್ಳಿ, ಕೂಟಿಗೆಹಳ್ಳಿ, ಮುತ್ತುಗದೂರು, ಕಾಗಳಗೆರೆ, ತಣಿಗೆಹಳ್ಳಿ, ಸಾಸಲು, ಟಿ.ಬಿ.ಸರ್ಕಲ್‌ ಗ್ರಾಮಗಳ ಜನರಿಗೆ ಇದರಿಂದ ಅನುಕೂಲವಾಗಿದೆ.

Advertisement

ಎರಡನೇ ಹಂತದಲ್ಲಿ 14 ಕೋಟಿ ರೂ. ಅನುದಾನದಲ್ಲಿ ಶಾಂತಿಸಾಗರದಿಂದ ಹಿರೆಕಂದವಾಡಿ ಮಾರ್ಗದಲ್ಲಿ ಚಿತ್ರದುರ್ಗ ಯೋಜನೆ ಟೆಂಡರ್‌ ಹಂತದಲ್ಲಿದೆ. ಈ ಯೋಜನೆ ವ್ಯಾಪ್ತಿಯಲ್ಲಿ ಬಿ.ದುರ್ಗ, ಹಿರೆಕಂದವಾಡಿ, ಕಲ್ಲನಾಗತಿಹಳ್ಳಿ, ರಂಗವ್ವನಹಳ್ಳಿ, ಚಿಕ್ಕಜಾಜೂರು, ಚಿಕ್ಕಜಾಜೂರು ಕಾವಲ್‌, ಅಡನೂರು, ಪಾಡಿಗಟ್ಟೆ, ಬಾಣಗೆರೆ, ಹಾಗೂ ಶಾಂತಿಸಾಗರ ಚನ್ನಗಿರಿಯಿಂದ ಮಲ್ಲಾಡಿಹಳ್ಳಿ ಮಾರ್ಗದಲ್ಲಿ ಮಲ್ಲಾಡಿಹಳ್ಳಿ, ಅಬ್ರದಾಸಿಕಟ್ಟೆ, ದೊಗ್ಗನಾಳ್‌, ಕೆಂಗುಂಟೆ, ದುಮ್ಮಿ, ದೊಗ್ಗನಾಳ್‌, ಚನ್ನಪ್ಪನಹಟ್ಟಿ ಮತ್ತಿತರ ಹಳ್ಳಿಗಳು ಸೇರಿವೆ. ಇಷ್ಟರಲ್ಲೇ ಕಾಮಗಾರಿಗೆ ಚಾಲನೆ ದೊರೆಯಲಿದೆ.

ಮೂರನೇ ಹಂತದಲ್ಲಿ ಅಮೃತ ಗ್ರಾಮ ಯೋಜನೆಯಲ್ಲಿ 24 ಹಳ್ಳಿಗಳು ಸೇರಿವೆ. ಗೌಡಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳು ನಲ್ಲಿ ನೀರಿನ ಸೌಲಭ್ಯ ಪಡೆದುಕೊಳ್ಳಲಿವೆ. ನಾಲ್ಕನೇ ಹಂತದಲ್ಲಿ ವಾಣಿವಿಲಾಸ ಸಾಗರದಿಂದ ಹೊಳಲ್ಕೆರೆ, ರಾಮಗಿರಿ, ತಾಳ್ಯ, ಭಾಗದಲ್ಲಿರುವ 173 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ಒತ್ತು ನೀಡಲಾಗಿದೆ.

ವಾಣಿವಿಲಾಸ ಸಾಗರದಲ್ಲಿ ಜಾಕ್‌ ವೆಲ್‌ ನಿರ್ಮಾಣವಾಗಲಿದ್ದು, ಅಲ್ಲಿಂದ ಹೊಳಲ್ಕೆರೆ ತಾಲೂಕಿನ ಹಾಲೇನಹಳ್ಳಿ ಕೆರೆಯಲ್ಲಿ ನೀರನ್ನು ಶುದ್ಧೀಕರಿಸುವ ಘಟಕ ಅಳವಡಿಸಿ ಅಲ್ಲಿಂದ ಘಟ್ಟಿಹೊಸಹಳ್ಳಿ ಹತ್ತಿರ ಸಂಪಿಟ್‌ ನಿರ್ಮಾಣ ಮಾಡಲಾಗುತ್ತದೆ. 173 ಹಳ್ಳಿಗಳಿಗೆ ನೀರು ಪೂರೈಕೆ ಮಾಡುವ ನೀಲನಕ್ಷೆ ಸಿದ್ಧಗೊಳ್ಳುವ ಹಂತದಲ್ಲಿದೆ. ತಾಲೂಕಿನ ಪ್ರತಿಯೊಂದು ಕುಟುಂಬಕ್ಕೂ ನೀರು ಪೂರೈಕೆಗೆ ಒತ್ತು ನೀಡಲಾಗಿದ್ದು, ಇಷ್ಟು ವರ್ಷಗಳ ಕಾಲ ಅನುಭವಿಸಿದ ನೀರಿನ ಬವಣೆ ನೀಗಬಹುದು ಎಂಬ ನಿರೀಕ್ಷೆ ಗರಿಗೆದರಿದೆ.

ಜಲಜೀವನ್‌ ಮಿಷನ್‌ ಕಾಮಗಾರಿ ಈಗಾಗಲೇ ಚಾಲನೆಯಲ್ಲಿದೆ. ಮೊದಲ ಹಂತದಲ್ಲಿ 249 ಲಕ್ಷ ರೂ. ವೆಚ್ಚದಲ್ಲಿ ಶಾಂತಿಸಾಗರ ದಿಂದ ಸಿರಿಗೆರೆ ಮಾರ್ಗದಲ್ಲಿ ಬರುವ ಎಲ್ಲಾ ಹಳ್ಳಿಗಳ ಮನೆ ಮನೆಗೆ ನಲ್ಲಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ತಾಲೂಕಿನ ಕೆಲವೆಡೆ ಎರಡು ಮತ್ತು ಮೂರನೇ ಹಂತದ ಕಾಮಗಾರಿ ಪ್ರಾರಂಭಿಸಬೇಕಿದೆ. ನಾಲ್ಕನೇ ಹಂತದ ಕಾಮಗಾರಿ ನೀಲನಕ್ಷೆ ಹಂತದಲ್ಲಿದೆ. ಪ್ರತಿಯೊಬ್ಬರಿಗೂ ನೀರಿನ ಸೌಲಭ್ಯ ಕಲ್ಪಿಸಲು ಸರ್ಕಾರ ಒತ್ತು ನೀಡಿದೆ. ನೀಲಕಂಠಪ್ಪ,ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್‌

-ಎಸ್‌. ವೇದಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next