Advertisement

22 ದಿನಗಳ ಪೊಲೀಸ್ ಕಾರ್ಯಾಚರಣೆ; 1.17 ಕೋಟಿ ರೂ.ಮೌಲ್ಯದ ಕಳವಾದ ಅಡಿಕೆ ವಶ

09:39 PM Nov 23, 2022 | Vishnudas Patil |

ಸಾಗರ: ಗುಜರಾತ್‌ನ ಅಹಮದಾಬಾದ್‌ಗೆ ಕಳುಹಿಸಿದ 1.17 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಅಡಿಕೆ ಲೋಡ್‌ನ್ನು ವಿಳಾಸದಾರರಿಗೆ ತಲುಪಿಸದೆ ಮಾಲೀಕರಿಗೆ ವಂಚಿಸಿ ಬೇರೆಡೆಗೆ ಕದ್ದೊಯ್ದಿದ್ದ ವಂಚಕರ ತಂಡವನ್ನು ಬೇಧಿಸಿದ ಸಾಗರದ ಪೊಲೀಸರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ ಘಟನೆ ನಡೆದಿದೆ.

Advertisement

ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಬಳಸಗೋಡು ಗ್ರಾಮದ ಮಧುಕರ್ ಅವರ ಗೋಡೌನ್‌ನಿಂದ ದೋಲರಾಮ್ ಹರಿಸಿಂಗ್ ಅವರಿಗೆ ಸೇರಿದ 350 ಚೀಲ ಕೆಂಪಡಿಕೆಯನ್ನು ಅಹಮದಾಬಾದ್‌ಗೆ ರವಾನಿಸಲು ಲೋಡ್ ಮಾಡಿ ಕಳುಹಿಸಲಾಗಿತ್ತು.24.5 ಕ್ವಿಂಟಾಲ್ ಕೆಂಪಡಿಕೆಯ ಮೌಲ್ಯ 1,17,60,000 ರೂ. ಎಂದು ಹೇಳಲಾಗಿತ್ತು. ಆರೋಪಿಗಳು ಮಾಲನ್ನು ಅಹಮದಾಬಾದ್‌ಗೆ ತೆಗೆದುಕೊಂಡು ಹೋಗದೆ ಕಳವು ಮಾಡಿರುವುದು ಗೊತ್ತಾಗುತ್ತಿದ್ದಂತೆ ದೂರು ದಾಖಲಾಗಿತ್ತು.

ಪ್ರಕರಣವನ್ನು ಬೆನ್ನು ಹತ್ತಿದ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿ 22 ದಿನಗಳ ಕಾಲ ಕಾರ್ಯಾಚರಣೆ ನಡೆಸಿದರು. ತಾಂತ್ರಿಕತೆ ಹಾಗೂ ಬಾತ್ಮೀದಾರರ ಮಾಹಿತಿಗಳನ್ನು ಬಳಸಿ ನ. 18 ರಂದು ಮಧ್ಯಪ್ರದೇಶದ ಸಾರಂಗಪುರದಲ್ಲಿ ಪ್ರಕರಣದ ಆರೋಪಿಗಳಾದ ಲಾರಿ ಚಾಲಕ ಇಂದೋರ್‌ನ ರಜಾಕ್‌ಖಾನ್, ಅಹಮದಾಬಾದ್‌ನ ಫಾಟಬಿಲೋದ್‌ನ ಲಾರಿ ಚಾಲಕ ಥೇಜು ಸಿಂಗ್, ಮಧ್ಯಪ್ರದೇಶದ ಶಹಜಾಪುರದ ಅನೀಶ್ ಅಬ್ಬಾಸಿ ಅವರನ್ನು 25 ಲಕ್ಷ ರೂ. ಮೌಲ್ಯದ ಅಶೋಕ ಲೈಲ್ಯಾಂಡ್ ಲಾರಿ ಸಮೇತ ವಶಪಡಿಸಿಕೊಂಡಿದ್ದು, ಗುರುವಾರ ಸಾಗರದಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಅಂತರರಾಜ್ಯ ಕಳ್ಳತನದ ಇತಿಹಾಸ ಹೊಂದಿದ್ದು, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಾಸ್ತಾನ ರಾಜ್ಯಗಳಲ್ಲೂ ಅಪರಾಧ ಎಸಗಿದ್ದಾರೆ.

ಕಾರ್ಯಾಚರಣೆಯಲ್ಲಿ ಸಾಗರ ಗ್ರಾಮಾಂತರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ವಿ.ಪ್ರವೀಣ್‌ಕುಮಾರ್, ಕಾರ್ಗಲ್‌ನ ಎಸ್‌ಐ ತಿರುಮಲೇಶ್ ನಾಯ್ಕ, ಠಾಣಾ ಸಿಬ್ಬಂದಿಗಳಾದ ಸನಾವುಲ್ಲಾ, ಶ್ರೀಧರ, ತಾರಾನಾಥ, ರವಿಕುಮಾರ್, ಹನುಮಂತಪ್ಪ ಜಂಬೂರ, ಪ್ರವೀಣಕುಮಾರ್, ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿ ಇಂದ್ರೇಶ್, ವಿಜಯಕುಮಾರ, ಗುರು ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರಿಗೆ ಎಸ್‌ಪಿ ಮಿಥುನ್‌ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ವಿಕ್ರಂ ಅಮಾತೆ, ಎಸ್‌ಎಸ್‌ಪಿ ರೋಹನ್ ಜಗದೀಶ್ ಅಭಿನಂದನೆ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next