ಗುವಾಹಟಿ: ತಾಯ್ತನಕ್ಕೆ ಸೂಕ್ತವಾಯ ವಯಸ್ಸು 22ರಿಂದ 30 ವರ್ಷಗಳು. ಇಲ್ಲದಿದ್ದರೆ ಅದು ವೈದ್ಯಕೀಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಾಲ್ಯವಿವಾಹ ಹಾಗೂ ಚಿಕ್ಕ ವಯಸ್ಸಿನಲ್ಲೇ ತಾಯಿಯಾಗುವುದನ್ನು ತಡೆಯಲು ಅಸ್ಸಾಂ ಸರ್ಕಾರ ಬದ್ಧವಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಹೇಳಿದರು.
ಬಾಲ್ಯವಿವಾಹ ಮತ್ತು ಅಪ್ರಾಪ್ತ ಮಾತೃತ್ವವನ್ನು ತಡೆಯಲು ಕಠಿಣ ಕಾನೂನು ತರಲು ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿ ತರಲು ಅಸ್ಸಾಂ ಸರ್ಕಾರ ನಿರ್ಧರಿಸುವ ಬೆನ್ನಲ್ಲೇ ಹಿಮಂತ ಅವರಿಂದ ಈ ಹೇಳಿಕೆ ಬಂದಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಮದುವೆಯಾಗಿದ್ದರೂ ಕೂಡ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಅಪರಾಧವಾಗಿದೆ. ಮುಂದಿನ ದಿನಗಳಲ್ಲಿ ಸಾವಿರಾರು ಮಂದಿಯನ್ನು ಬಂಧಿಸುವ ಸಾಧ್ಯತೆಗಳೂ ಇದೆ. ಅಂಥವರಿಗೆ ಜೀವಾವಧಿ ಶಿಕ್ಷೆ ಕೂಡ ಆಗಬಹುದು,’ ಎಂದರು.
“ಕಾನೂನಿನ ಪ್ರಕಾರ, 18 ವರ್ಷಗಳ ಮೇಲ್ಪಟ್ಟ ಯುವತಿಯರು ಮದುವೆಗೆ ಅರ್ಹರು. ಇದಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳನ್ನು ಮದುವೆಯಾಗಿದ್ದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು,’ ಎಂದು ಎಚ್ಚರಿಸಿದರು.