Advertisement

Russia ದಲ್ಲಿ 216 ಭಾರತೀಯರು ಅತಂತ್ರ 

08:56 PM Jun 07, 2023 | Team Udayavani |

ನವದೆಹಲಿ/ಮಾಸ್ಕೋ: ಎಂಜಿನ್‌ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ನವದೆಹಲಿಯಿಂದ ಸ್ಯಾನ್‌ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್‌ಇಂಡಿಯಾ ವಿಮಾನವು ಮಂಗಳವಾರ ರಾತ್ರಿ ರಷ್ಯಾದ ಮ್ಯಾಗಡನ್‌ನಲ್ಲಿ ಇಳಿದಿದ್ದು, ಅದರಲ್ಲಿದ್ದ 216 ಪ್ರಯಾಣಿಕರು ಹೆಚ್ಚಿನ ಸೌಲಭ್ಯಗಳಿಲ್ಲದೇ ಊರಿನಲ್ಲಿ ರಾತ್ರಿ ಕಳೆದಿದ್ದಾರೆ. ಅವರನ್ನು ಅಲ್ಲಿಂದ ಕರೆದೊಯ್ಯುವ ಸಲುವಾಗಿ ಬುಧವಾರ ಮಧ್ಯಾಹ್ನ ಮುಂಬೈನಿಂದ ವಿಶೇಷ ವಿಮಾನವೊಂದು ಮ್ಯಾಗಡನ್‌ಗೆ ತೆರಳಿದೆ.

Advertisement

ಮ್ಯಾಗಡನ್‌ ನಿಲ್ದಾಣವು ರಷ್ಯಾ ರಾಜಧಾನಿ ಮಾಸ್ಕೋದಿಂದ ಸುಮಾರು 10 ಸಾವಿರ ಕಿ.ಮೀ. ದೂರದಲ್ಲಿದೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರಿಗೂ ವಸತಿ ಕಲ್ಪಿಸಲು ಆ ಪ್ರದೇಶದಲ್ಲಿ ಸಾಕಷ್ಟು ಹೋಟೆಲ್‌ಗಳ ವ್ಯವಸ್ಥೆ ಇಲ್ಲದ ಕಾರಣ, ಕೆಲವರಿಗೆ ಸಮೀಪದ ಶಾಲೆಗಳು, ವಸತಿ ನಿಲಯಗಳಲ್ಲಿ ಆಶ್ರಯ ಕಲ್ಪಿಸಲಾಯಿತು.

ಒಂದು ಕೊಠಡಿಯಲ್ಲಿ 20 ಮಂದಿ

ತುರ್ತು ಭೂಸ್ಪರ್ಶದಿಂದಾಗಿ ಅತಂತ್ರಕ್ಕೆ ಸಿಲುಕಿದ ಪ್ರಯಾಣಿಕರು ರಷ್ಯಾದ ಹಳ್ಳಿಯಲ್ಲಿ ಮಲಗಲು ಸೂಕ್ತ ವ್ಯವಸ್ಥೆಯಿಲ್ಲದೇ, ತಿನ್ನಲು ಸರಿಯಾದ ಆಹಾರವಿಲ್ಲದೇ, ಮಾತನಾಡಲು ಭಾಷೆಯೂ ಬಾರದೆ ಗೊಂದಲಕ್ಕೆ ಸಿಲುಕಿದ್ದಾರೆ. ಉದ್ದಕ್ಕೂ ಒಂದು ಚಾದರ ಹಾಸಿ ಶಾಲೆಗಳ ಒಂದೊಂದು ಕೊಠಡಿಯಲ್ಲಿ 20 ಮಂದಿಯಂತೆ ಮಲಗಿ ರಾತ್ರಿ ಕಳೆದಿದ್ದಾರೆ. ಮಾಂಸಾಹಾರ ಮಾತ್ರ ಲಭ್ಯವಿರುವ ಕಾರಣ, ಕೆಲವರು ಬ್ರೆಡ್‌ ಮತ್ತು ಸೂಪ್‌ ಕುಡಿದು ಹೊಟ್ಟೆ ತುಂಬಿಸಿಕೊಂಡಿದ್ದಾರೆ. ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಹೆಚ್ಚು ಸಮಸ್ಯೆಯಾಗಿದೆ ಎಂದು ಅಲ್ಲಿ ಸಿಲುಕಿರುವ ಭಾರತೀಯರು ಹೇಳಿದ್ದಾರೆ.

ಮತ್ತೂಂದೆಡೆ, ವಿಮಾನವು ಸ್ಯಾನ್‌ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ಕಾರಣ ಅದರಲ್ಲಿ ಹಲವು ಅಮೆರಿಕನ್ನರೂ ಇದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅಮೆರಿಕ ವಿದೇಶಾಂಗ ಇಲಾಖೆ ಉಪ ವಕ್ತಾರ ವೇದಾಂತ್‌ ಪಟೇಲ್‌, “ಅಮೆರಿಕದತ್ತ ಹೊರಟಿದ್ದ ವಿಮಾನವು ರಷ್ಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಸಂಗತಿ ನಮಗೆ ಗೊತ್ತಾಗಿದೆ. ಅದರಲ್ಲಿ ಅಮೆರಿಕದ ನಾಗರಿಕರು ಎಷ್ಟು ಮಂದಿಯಿದ್ದರು ಎಂಬ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಆದರೆ, ನಾವು ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next