ಮೈಸೂರು:ದೇಶದ ಪರಮೋಚ್ಛ ನ್ಯಾಯಾಲಯ ಸುಪ್ರೀಂಕೋರ್ಟ್ ನಲ್ಲಿರುವ ಮೂಲಸೌಕರ್ಯ, ಪ್ರಾಯೋಗಿಕ ಪ್ರಕ್ರಿಯೆ ಹಾಗೂ ಕಾನೂನು ಚಟುವಟಿಕೆಯ ನಿಯಮಗಳು ಹೀಗೆ ಹಲವಾರು ಅಪರೂಪದ ಮಾಹಿತಿಯನ್ನೊಳಗೊಂಡಿರುವ ಪುಸ್ತಕವನ್ನು ಬೆಂಗಳೂರಿನ ಅಲೈಯನ್ಸ್ ಸ್ಕೂಲ್ ಆಫ್ ಲಾ 4ನೇ ಸೆಮಿಸ್ಟರ್ ನಲ್ಲಿ
ಓದುತ್ತಿರುವ ಬಿಬಿಎ.ಎಲ್ ಎಲ್ ಬಿ ಅಧ್ಯಯನ ಮಾಡುತ್ತಿರುವ ಮೈಸೂರು ಮೂಲದ ಗಾಲವ್ ಗೌಡ (21) ಬರೆದಿರುವುದಾಗಿ ವರದಿ ತಿಳಿಸಿದೆ.
ಗಾಲವ್ ಗೌಡ ಕಳೆದ ಇಂಟರ್ನ್ ಶಿಫ್ ಮುಕ್ತಾಯಗೊಳಿಸಿದ ನಂತರ 112 ಪುಟಗಳ ‘Crawl towards Supreme Court of India’ ಎಂಬ ಪುಸ್ತಕ ಬರೆಯಲು ನಿರ್ಧರಿಸಿದ್ದು, ಇದಕ್ಕೆ ಮೂರು ತಿಂಗಳ ಲಾಕ್ ಡೌನ್ ಅವಧಿಯನ್ನು ಬಳಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಈ 112 ಪುಟಗಳ ಪುಸ್ತಕದಲ್ಲಿ ಸುಪ್ರೀಂಕೋರ್ಟ್ ಬಗ್ಗೆ ಗೊತ್ತಿಲ್ಲದ ಹಲವಾರು ನೈಜ ಸಂಗತಿ, ಅಂಕಿ ಅಂಶಗಳು ಇದೆಯಂತೆ. ಸಾರ್ವಜನಿಕರು ಹಾಗೂ ಕಾನೂನು ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಮುಖ್ಯವಾದ ಶಿಲ್ಪ ಕಲೆ ಹಾಗೂ ಫೋಟೋಗಳು ಪುಸ್ತಕದಲ್ಲಿದೆ.
ಸುಪ್ರೀಂಕೋರ್ಟ್ ನ ಸೆಕ್ಷನ್, ಕಲಂಗಳ ಬಗ್ಗೆ, ಅದರ ಅಧಿಕಾರ ವ್ಯಾಪ್ತಿ, ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ಹಲವಾರು ಪುಸ್ತಕಗಳು ಹೊರಬಂದಿವೆ. ಆದರೆ ಸುಪ್ರೀಂಕೋರ್ಟ್ ನ ಮೂಲಭೂತ ಸೌಕರ್ಯ, ದಿನಂಪ್ರತಿ ಪ್ರಕ್ರಿಯೆ ಇತಿಹಾಸ ತಿಳಿಸುವ ಪುಸ್ತಕವನ್ನು ನಾನೆಲ್ಲೂ ಓದಿಲ್ಲ. ಹೀಗಾಗಿ ಇಂತಹ ಪುಸ್ತಕ ಬರೆಯಲು ಮುಂದಾಗಿರುವುದಾಗಿ ಗಾಲವ್ ಗೌಡ ತಿಳಿಸಿದ್ದಾರೆ.
ಕಾನೂನು ಹೊರತುಪಡಿಸಿ ಸುಪ್ರೀಂಕೋರ್ಟ್ ಬಗೆಗಿನ ಪ್ರತಿಯೊಂದು ಮಾಹಿತಿಯನ್ನು ಕಲೆಹಾಕಿದ್ದೇನೆ. ಇಂಟರ್ನೆಟ್ ನಲ್ಲಿ ಲಭ್ಯವಿರದ ಅಪರೂಪದ ಫೋಟೊಗಳು ಇವೆ. ಹಲವಾರು ಅಪರೂಪದ ಸಂಗತಿಗಳು ಇದ್ದಿರುವುದಾಗಿ ತಿಳಿಸಿದ್ದಾರೆ.