Advertisement

ಮುಖ್ಯ ರಸ್ತೆ ಮೇಲ್ದರ್ಜೆಗೆ 21 ಕೋಟಿ ರೂ. ಅನುದಾನ

04:26 PM Sep 29, 2020 | Suhan S |

ಮುದ್ದೇಬಿಹಾಳ: ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾಗಿದ್ದ ಮುದ್ದೇಬಿಹಾಳ ಪಟ್ಟಣದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ವಿಜಯಪುರ ರಸ್ತೆಯ ಬಿದರಕುಂದಿ ಕಿರು ಸೇತುವೆವರೆಗಿನ ಒಂದೂವರೆ ಕಿ.ಮೀ. ಹೆದ್ದಾರಿ ಮಾದರಿಯ 14 ಮೀ. ಅಗಲದ ಡಾಂಬರೀಕರಣ ಹಾಗೂ ಅಲ್ಲಿಂದ ಅಗಸಬಾಳ ಕ್ರಾಸ್‌ ವರೆಗಿನ 13.5 ಕಿ.ಮೀ.ವರೆಗಿನ 7 ಮೀ. ಅಗಲದ ಡಾಂಬರೀಕರಣ ರಸ್ತೆ ದುರಸ್ತಿ ಕಾಮಗಾರಿಗೆ ಸರ್ಕಾರ ಸೋಮವಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು ಸಾರ್ವಜನಿಕ ವಲಯದಲ್ಲಿ ಹರ್ಷಕ್ಕೆ ಕಾರಣವಾಗಿದೆ.

Advertisement

ಈ ರಸ್ತೆ ದುರಸ್ತಿಗಾಗಿ ಸ್ಥಳೀಯ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರು ಕಳೆದ ಮೂರು ತಿಂಗಳಿಂದ ಸರ್ಕಾರದ ಮಟ್ಟದಲ್ಲಿ ನಡೆಸುತ್ತಿದ್ದ ಪ್ರಯತ್ನಕ್ಕೆ ಯಶ ದೊರಕಿದಂತಾಗಿದ್ದು ಶಾಸಕರ ಜನಪರ ಕಾಳಜಿಯನ್ನು ಸಾರ್ವಜನಿಕರು ಕೊಂಡಾಡಿದ್ದಾರೆ. ಈಗಾಗಲೇ ಕರ್ನಾಟಕದ ಮಹಾರಾಷ್ಟ್ರ ಗಡಿಭಾಗದಲ್ಲಿರುವ ಶಿರಾಡೋಣದಿಂದ ರಾಯಚೂರು ಜಿಲ್ಲೆ ಲಿಂಗಸಗೂರವರೆಗೆ ರಾಜ್ಯ ಹೆದ್ದಾರಿ 41ರ ಕಾಮಗಾರಿ ಹಂತ ಹಂತವಾಗಿ ಪ್ರಗತಿಯಲ್ಲಿದೆ. ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಈ ರಸ್ತೆಯು ವಿಜಯಪುರ ಮುಖ್ಯ ರಸ್ತೆಯ ಅಗಸಬಾಳ ಕ್ರಾಸ್‌ನಿಂದ ಮುದ್ದೇಬಿಹಾಳ, ನಾಲತವಾಡ ಪಟ್ಟಣಗಳ ಮೂಲಕ ನಾರಾಯಣಪುರ ಚೆಕ್‌ಪೋಸ್ಟ್‌ವರೆಗೂ, ನಂತರಬಸವಸಾಗರ ಜಲಾಶಯ ಮುಂಭಾಗ ಮಾರ್ಗವಾಗಿ ಲಿಂಗಸಗೂರು ತಾಲೂಕಿಗೆ ಪ್ರವೇಶಿಸುತ್ತದೆ. ಕಳೆದ ವರ್ಷ ಹಾಗೂ ಈ ವರ್ಷದ ಮಳೆಗೆ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಅಡಿ ಬರುವ ವಿಜಯಪುರ ರಸ್ತೆ ಸಂಪೂರ್ಣ ಹಾಳಾಗಿ ಸಂಚಾರ ದುಸ್ತರವಾಗಿದ್ದನ್ನು ಶಾಸಕರು ಗಂಭೀರವಾಗಿ ಪರಿಗಣಿಸಿದ್ದರು.

ಹೇಗಿರಲಿದೆ ರಸ್ತೆ?: ಈಗಾಗಲೇ ಮುದ್ದೇಬಿಹಾಳ ಪಟ್ಟಣದಲ್ಲಿ ಪ್ರಗತಿಯಲ್ಲಿರುವ ಹುನಗುಂದ- ತಾಳಿಕೋಟೆ ರಾಜ್ಯ ಹೆದ್ದಾರಿಮಾದರಿಯಲ್ಲೇ ಅಂಬೇಡ್ಕರ್‌ ಸರ್ಕಲ್‌ನಿಂದ ಬಿದರಕುಂದಿ ಬಳಿಯ ಕಿರು ಸೇತುವೆವರೆಗೂ 14 ಮೀ. ಅಗಲ ಡಾಂಬರೀಕೃತ ಡಬಲ್‌ ರಸ್ತೆ ನಿರ್ಮಾಣಗೊಳ್ಳಲಿದೆ. ಎರಡೂ ಬದಿಚರಂಡಿ, ರಸ್ತೆ ಮಧ್ಯೆ ಒಂದೂವರೆ ಮೀಟರ್‌ನ ರಸ್ತೆ ವಿಭಜಕ ಇರಲಿದ್ದು ಪಿಲೇಕೆಮ್ಮ ನಗರದ ಹೆಸ್ಕಾಂ ಕಚೇರಿಬಳಿ ನಿಂತು ಬಸವೇಶ್ವರ, ಅಂಬೇಡ್ಕರ್‌ ವೃತ್ತದ ಮೂಲಕ ನೋಡಿದರೆ ಒಂದೇ ಮಾದರಿ ರಸ್ತೆಯಂತೆ ಕಾಣುವ ಹಾಗೆ ಯೋಜನೆ ರೂಪಿಸಲಾಗಿದೆ.

ಮೇಲ್ಭಾಗದಿಂದ ಹರಿದು ಬರುವ ನೀರು ಬಿದರಕುಂದಿ ಹಳ್ಳ ಸೇರಿಸಲು ವ್ಯವಸ್ಥೆ ಕಲ್ಪಿಸಿದ್ದು ಚರಂಡಿ ನೀರಿನ ಸಮಸ್ಯೆಗೆ ಮುಕ್ತಿ ಹೇಳುವಂತಿದೆ. ಇನ್ನು ಕಿರು ಸೇತುವೆಯಿಂದ ಅಗಸಬಾಳ ಕ್ರಾಸ್‌ವರೆಗೆ ಸದ್ಯ ಇರುವ 5.5 ಮೀ. ಅಗಲದ ಡಾಂಬರೀಕೃತ ವಿಜಯಪುರ ಮುಖ್ಯರಸ್ತೆಯ 13.5 ಕಿ.ಮೀ. ಅಂತರದ ರಸ್ತೆಯನ್ನು 7 ಮೀ. ಡಾಂಬರೀಕೃತ ರಸ್ತೆಯನ್ನಾಗಿ ಅಗಲೀಕರಣಗೊಳಿಸುವುದು ಯೋಜನೆಯಲ್ಲಿ ಸೇರಿದೆ.

2019-20ನೇ ಸಾಲಿನ ಅತಿವೃಷ್ಟಿಯಿಂದ ಸಂಪೂರ್ಣ ಹಾಳಾಗಿದ್ದ ಈ ರಸ್ತೆ ಅಭಿವೃದ್ಧಿಗೆ ಉಪ ಮುಖ್ಯಮಂತ್ರಿಗಳು, ಪಿಡಬ್ಲೂಡಿ ಸಚಿವರು ಸಹಕರಿಸಿದ್ದಾರೆ. ಜನರ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ. ಶೀಘ್ರ ಟೆಂಡರ್‌ ಪ್ರಕ್ರಿಯೆ ಪ್ರಾರಂಭಗೊಂಡು ಕನಸು ನನಸಾಗಲಿದೆ.– ಎ.ಎಸ್‌. ಪಾಟೀಲ ನಡಹಳ್ಳಿ, ಶಾಸಕ

Advertisement
Advertisement

Udayavani is now on Telegram. Click here to join our channel and stay updated with the latest news.

Next