ಪಡುಬಿದ್ರಿ: ಹೆಜಮಾಡಿ ಗ್ರಾ.ಪಂ.ಗೆ ಸತತ 10ನೇ ಬಾರಿ ತಾನು ಭೇಟಿ ನೀಡಿದ್ದು ತನ್ನ ಶಾಸಕತ್ವದ ಅವಧಿಯಲ್ಲಿ 21 ಕೋಟಿ ರೂ.ಗಳನ್ನು ಹೆಜಮಾಡಿಯ ಗ್ರಾಮಾಭಿವೃದ್ಧಿಯ ವಿವಿಧ ಕಾಮಗಾರಿಗಳಿಗಾಗಿ ವಿನಿಯೋಗಿಸಲಾಗಿದೆ ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಜು. 12ರಂದು ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೆಜಮಾಡಿ ಗ್ರಾ. ಪಂ. ನೂತನ ಕಟ್ಟಡದ ಶಿಲಾನ್ಯಾಸವನ್ನು ಗೈದು ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಜಮಾಡಿ ಬಂದರು ಯೋಜನೆಗಾಗಿ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ರವಾನಿಸಲಾಗಿದೆ. ಕ್ರೀಡಾ ಇಲಾಖೆಯಿಂದ ರಾಜೀವ್ ಗಾಂಧಿ ತಾ | ಕ್ರೀಡಾಂಗಣದ ಸ್ಟೇಡಿಯಂ ರಚನೆಗಾಗಿ 3ಕೋಟಿ ರೂ. ಬಿಡುಗಡೆಯಾಗಲಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯೂ ಶೀಘ್ರವೇ ಅನುಷ್ಟಾನಗೊಳ್ಳಲಿರುವುದಾಗಿ ಶಾಸಕ ಸೊರಕೆ ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಸಾಮಾಜಿಕ ನ್ಯಾಯ ಹಾಗೂ ಅಧಿಕಾರ ವಿಕೇಂದ್ರೀಕರಣದಡಿಯಲ್ಲಿ ಗ್ರಾ. ಪಂ. ವ್ಯವಸ್ಥೆಯಲ್ಲಿ ಮೀಸಲಾತಿಯನ್ನು ತರುವುದರೊಂದಿಗೆ ಸರಕಾರವು ಮಹಿಳೆಯರಿಗೂ ಗ್ರಾಮಾಭಿವೃದ್ಧಿಯಲ್ಲಿ ಪಾಲುದಾರರಾಗುವ ಅವಕಾಶಗಳು ಲಭ್ಯವಾಗಿವೆ.
ಗ್ರಾಮಸಭೆಯ ನಿರ್ಣಯಗಳು ಇಂದು ಬಲಿಷ್ಠವೆನಿಸಿದ್ದು ಬಾಪೂಜಿ ಕೇಂದ್ರಗಳಿಂದಾಗಿ ಜನತೆಗೆ ಅಗತ್ಯವಾಗಿರುವ 100 ಸೇವೆಗಳು ಗ್ರಾಮ ಮಟ್ಟದಲ್ಲೇ ಲಭ್ಯವಾಗುತ್ತವೆ. ಹಾಗಾಗಿ ಗ್ರಾ. ಪಂ. ಗೂ ಹೊಸ ಕಟ್ಟಡ ಇತ್ಯಾದಿ ಮೂಲಭೂತ ಸೌಕರ್ಯಗಳು ಅಗತ್ಯವೆನಿಸುತ್ತವೆ ಎಂದರು. ಜಿ. ಪಂ. ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿದರು. ವೇದಿಕೆಯಲ್ಲಿ ತಾ. ಪಂ. ಸದಸ್ಯೆ ರೇಣುಕಾ ಪುತ್ರನ್, ಮಾಜಿ ತಾ. ಪಂ. ಸದಸ್ಯರಾದ ನವೀನ್‌ಚಂದ್ರ ಜೆ. ಶೆಟ್ಟಿ, ನಾರಾಯಣ ಪೂಜಾರಿ, ಕೆಎಂಎಫ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಪಂಚಾಯತ್ ರಾಜ್ ಎಂಜೀನಿಯರ್ ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಗ್ರಾ. ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ವಾಮನ್ ಕೋಟ್ಯಾನ್ ಪ್ರಸ್ತಾವಿಸಿದರು. ಗ್ರಾ. ಪಂ. ಪಿಡಿಒ ಮಮತಾ ಶೆಟ್ಟಿ ಹಾಗೂ ಸದಸ್ಯ ಗೋವರ್ಧನ್ ಕೋಟ್ಯಾನ್ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಸದಸ್ಯ ಪ್ರಾಣೇಶ್ ಹೆಜಮಾಡಿ ವಂದಿಸಿದರು.
ಶಿಲಾನ್ಯಾಸ ಕಾರ್ಯಕ್ರಮದ ಧಾರ್ಮಿಕ ವಿಧಿ ವಿಧಾನಗಳನ್ನು ವೇ | ಮೂ | ಹರಿದಾಸ ಭಟ್ ನಿರ್ವಹಿಸಿದರು. ಮೂಲ್ಕಿ ಚರ್ಚ್‌ನ ಧರ್ಮಗುರುಗಳಾದ ರೆ | ಫಾ | ಕ್ಸೇವಿಯರ್ ಗೋಮ್ಸ್ ಹಾಗೂ ವೇ | ಮೂ | ರಾಮಚಂದ್ರ ಭಟ್ ಶುಭಾಶಂಸನೆ ಗೈದರು. ಹಿರಿಯ ನಾಗರಿಕರು, ಗ್ರಾಮಸ್ಥರು ಈ ಸಮಾರಂಭದಲ್ಲಿ ಹಾಜರಿದ್ದರು.