ಬೆಂಗಳೂರು: ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಸಂಬಂಧ ಮಂಗಳವಾರ ನಡೆಯಲಿರುವ ಕಾಂಗ್ರೆಸ್ ಚುನಾವಣ ಸಮಿತಿ ಸಭೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮಂಗಳವಾರ ದಿಲ್ಲಿಗೆ ಪ್ರಯಾಣ ತೆರಳಲಿದ್ದಾರೆ. ಬಾಕಿ ಉಳಿದಿರುವ ರಾಜ್ಯದ 21 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಭೆಯಲ್ಲಿ ಅಂತಿಮಗೊಳ್ಳುವ ಸಾಧ್ಯತೆಗಳಿವೆ.
ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಕಲಬುರಗಿ, ಬಳ್ಳಾರಿ, ಕೋಲಾರ, ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು-ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಬೆಳಗಾವಿ, ಚಿಕ್ಕೋಡಿ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ, ಉತ್ತರ ಕನ್ನಡ, ದಾವಣಗೆರೆ, ಕೊಪ್ಪಳ, ರಾಯಚೂರು, ಬೀದರ್ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಆಗಬೇಕಿದೆ.
ಸಿಇಸಿ ಸಭೆಗೂ ಮುನ್ನ ಮೈಸೂರು, ಬೆಳಗಾವಿ, ಚಿಕ್ಕೋಡಿ, ಕಲಬರುಗಿ ಮತ್ತಿತರ ಕೆಲವು ಕ್ಷೇತ್ರಗಳ ಬಗ್ಗೆ ರಾಜ್ಯದಲ್ಲಿ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುಜೇìವಾಲ ಅವರೊಂದಿಗೆ ಒಂದು ಸುತ್ತಿನ ಸಭೆ ನಡೆಯಲಿದೆ. ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಅವರ ಸ್ವಂತ ಜಿಲ್ಲೆ ಮೈಸೂರಿನಿಂದ ಬಿಜೆಪಿಯ ಹಾಲಿ ಸಂಸದ ಪ್ರತಾಪಸಿಂಹ ಬದಲಿಗೆ ಯದುವೀರ್ ಒಡೆಯರ್ ಕಣಕ್ಕಿಳಿದಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಸಿಎಂ ವಿವೇಚನೆಗೆ ಬಿಡಲಾಗಿದೆ.
ಜತೆಗೆ ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುತ್ತಿದ್ದ ಕಲಬುರಗಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಯನ್ನು ಖರ್ಗೆ ವಿವೇಚನೆಗೆ ಬಿಡಲಾಗಿದೆ. ಹೀಗಾಗಿ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಮುನ್ನ ಎಐಸಿಸಿ ಉಸ್ತುವಾರಿ ಸಮ್ಮುಖದಲ್ಲಿ ಸಿಎಂ, ಡಿಸಿಎಂ ಅವರು ಸಮಾಲೋಚನೆ ನಡೆಸಿ ಅಲ್ಲಿ ಒಮ್ಮತದ ಅಭಿಪ್ರಾಯ ಮೂಡಿ ಬಂದರೆ ಅದನ್ನು ಸಿಇಸಿಗೆ ಶಿಫಾರಸು ಮಾಡಲಿದ್ದಾರೆ. ಬಹುತೇಕ ಮಂಗಳವಾರದ ಸಭೆ ಯಶಸ್ವಿಯಾದರೆ ರಾತ್ರಿ ಅಥವಾ ಬುಧವಾರ ಪಟ್ಟಿ ಹೊರಬೀಳುವ ಸಾಧ್ಯತೆಗಳಿವೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.