1984ರಲ್ಲಿ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದರು. ಆಗ ಉಡುಪಿ ವಿಧಾನಸಭಾ ಸದಸ್ಯರಾಗಿದ್ದ ಡಾ|ವಿ.ಎಸ್.ಆಚಾರ್ಯ ಬಿಜೆಪಿ ಶಾಸಕಾಂಗ ನಾಯಕರೂ ಆಗಿದ್ದರು. ದೊಡ್ಡ ದೊಡ್ಡ ಜಿಲ್ಲೆಗಳನ್ನು ವಿಭಜಿಸಿ ಚಿಕ್ಕ ಜಿಲ್ಲೆಗಳನ್ನಾಗಿ ಮಾಡಬೇಕೆಂದು ಡಾ| ಆಚಾರ್ಯರು ರಾಮಕೃಷ್ಣ ಹೆಗಡೆಯವರಿಗೆ ಹೇಳಿದಾಗ ಒಂದು ತಿಂಗಳೊಳಗೆ ಇದಕ್ಕಾಗಿ ಸಮಿತಿ ರಚಿಸುವುದಾಗಿ ಭರವಸೆ ನೀಡಿದ್ದರು. ಒಂದು ದಿನ ಹೆಗಡೆಯವರು ಟಿ.ಎಂ.ಹುಂಡೇಕರ್ ಅವರನ್ನು ಕರೆದರು. ಆಗ ಡಾ|ಆಚಾರ್ಯ, ಜೀವರಾಜ ಆಳ್ವ, ದೇವೇಗೌಡ ಇದ್ದರು. “ನೀವು ಸೀನಿಯರ್ ಇದ್ದೀರಿ. ಜಿಲ್ಲಾ ಪುನರ್ವಿಂಗಡನಾ ಸಮಿತಿ ನೇತೃತ್ವ ವಹಿಸಿರಿ’ ಎಂದು ಹೆಗಡೆ ಹೇಳಿದ್ದರು. ಅದಕ್ಕಿಂತ ಮೊದಲು ಬೀಜ ನಿಗಮದ ಅಧ್ಯಕ್ಷರಾಗಿ ಹುಂಡೇಕರ್ ಅವರನ್ನು ನೇಮಿಸಿದ್ದರೂ ಅಧಿಕಾರ ಸ್ವೀಕರಿಸಿರಲಿಲ್ಲ. “ಇದೊಂದು ಮೋನ್ಯುಮೆಂಟಲ್ ವರ್ಕ್. ಇದನ್ನು ನಿರ್ವಹಿಸುತ್ತೇನೆ’ ಎಂದು ಹೇಳಿದರು.
Advertisement
ಏಳು ಸದಸ್ಯರಿರುವ ಸಮಿತಿಯ ಅವಧಿ 1987ರ ಆಗಸ್ಟ್ 2ರಂದು ಮುಗಿಯುವುದಿತ್ತು. ಜುಲೈನಲ್ಲಿ ವರದಿಯನ್ನು ಕೊಡಲಾಯಿತು. ಮತ್ತೆ ಕಾಂಗ್ರೆಸ್ ಸರಕಾರ ಬಂತು. ಜೆ.ಎಚ್.ಪಟೇಲ್ ಸರಕಾರ ಬಂದಾಗ ಗಟ್ಟಿ ನಿಲುವು ತಳೆದು ಗದಗ, ಹಾವೇರಿ, ಬಾಗಲಕೋಟೆ, ಕೊಪ್ಪಳ, ದಾವಣಗೆರೆ, ಉಡುಪಿ, ಚಾಮರಾಜನಗರ ಈ ಏಳು ಜಿಲ್ಲೆಗಳನ್ನು 1997ರಲ್ಲಿ ಉದ್ಘಾಟಿಸಿದರು. “ಯಾದಗಿರಿಯನ್ನು ನಾನು ಶಿಫಾರಸು ಮಾಡಿದ್ದೆ. ಆದರೆ ರಾಜಕೀಯದಿಂದ ಅದು ಜಾರಿಗೊಳ್ಳಲಿಲ್ಲ. ಮತ್ತೆ ಯಡಿಯೂರಪ್ಪನವರ ಸರಕಾರದ ವೇಳೆ ಇದು ಆಯಿತು’ ಎನ್ನುತ್ತಾರೆ ಹುಂಡೇಕರ್ ಅವರು.
ನನಗೆ ತೃಪ್ತಿಕೊಟ್ಟ ಕೆಲಸ ಇದು. ನನ್ನ ವರದಿಗೆ ಒಂದೇ ಒಂದು ಕಡೆ ಸಾರ್ವಜನಿಕರ ಪ್ರತಿಭಟನೆ ನಡೆಯಲಿಲ್ಲ. ಎಲ್ಲರೂ ಮನಸಾರೆ ಒಪ್ಪಿಕೊಂಡರು. ಯಾವ ಪಕ್ಷದವರ ತಕರಾರೂ ಇರಲಿಲ್ಲ. ಗದಗವನ್ನು ನಾನು ಶಿಫಾರಸು ಮಾಡುತ್ತೇನೋ ಇಲ್ಲವೋ ಎಂಬ ಸಂಶಯ ಕೆಲವರಿಗೆ ಇತ್ತು. ಇನ್ನೊಂದು ವಿಶೇಷವೆಂದರೆ ಯಾವ ಪಕ್ಷದವರೂ, ಶಾಸಕರೂ ನನ್ನ ಮೇಲೆ ಒತ್ತಡ ತರಲಿಲ್ಲ. ನನ್ ಜೋಡಿ ಮಾತಾಡ್ತಿದ್ರು. ಸಲಹೆ ಕೊಡ್ತಿದ್ರು. ಜೆ.ಎಚ್. ಪಟೇಲರ ಸ್ವಕ್ಷೇತ್ರ ಚನ್ನಗಿರಿಯನ್ನು ತಾಲೂಕು ಮಾಡಬೇಕೆಂಬ ಒತ್ತಡವಿತ್ತು. ನಾನು ಅಲ್ಲಿಗೆ ಭೇಟಿ ನೀಡಿದೆ. ಅದನ್ನು ತಾಲೂಕು ಕೇಂದ್ರವಾಗಿ ಮಾಡುವ ಅರ್ಹತೆ ಇರಲಿಲ್ಲ. ನಾನು ಪಟೇಲರಲ್ಲಿ ಅದನ್ನು ತಾಲೂಕಾಗಿ ಮಾಡೋಕೆ ಬರೋದಿಲ್ಲ ಎಂದಾಗ ಬಿಟ್‌ಬಿಡ್ರೀ ಎಂದರು. ರಾಮಕೃಷ್ಣ ಹೆಗಡೆಯವರೂ ಇದೇ ರೀತಿ ನಡೆದುಕೊಂಡಿದ್ರು.
– ಟಿ.ಎಂ.ಹುಂಡೇಕರ್
Related Articles
– ಟಿ.ಎಂ.ಹುಂಡೇಕರ್
Advertisement