Advertisement

ಕಬ್ಬು ಬೆಳೆಗಾರರಿಗೆ 204 ಕೋಟಿ ಬಂಪರ್‌ ಕೊಡುಗೆ ಘೋಷಿಸಿದ ರಾಜ್ಯ ಸರ್ಕಾರ

10:36 PM Dec 05, 2022 | Team Udayavani |

ಬೆಂಗಳೂರು: ಇದೇ ಮೊದಲ ಬಾರಿಗೆ ಕಬ್ಬಿನ ಉಪ ಉತ್ಪನ್ನ ಎಥೆನಾಲ್‌ ಮೇಲಿನ ಲಾಭಾಂಶವನ್ನು ರೈತರಿಗೆ ನೀಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಕಬ್ಬು ಬೆಳೆಗಾರರಿಗೆ 204.47 ಕೋಟಿ ರೂ. ಬಂಪರ್‌ ಕೊಡುಗೆ ಘೋಷಿಸಿದೆ.

Advertisement

ವಿಕಾಸಸೌಧದಲ್ಲಿ ಸೋಮವಾರ ನಡೆದ ಕಬ್ಬು ನಿಯಂತ್ರಣ ಮಂಡಳಿ ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸಕ್ಕರೆ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ, ಇಲ್ಲಿವರೆಗೆ ಸಕ್ಕರೆಯ ಉಪ ಉತ್ಪನ್ನಗಳ ಮೇಲೆ ಲಾಭಾಂಶ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕಬ್ಬಿನ ಉಪ ಉತ್ಪನ್ನದ ಮೇಲೆ ರೈತರಿಗೆ ಲಾಭಾಂಶ ನೀಡಲು ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಉಪ ಉತ್ಪನ್ನಗಳ ಲಾಭಾಂಶ ಬೇಕೆಂದು ಅನೇಕ ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಅದರಂತೆ, ಮೊದಲ ಹಂತದಲ್ಲಿ ಕಬ್ಬಿನ ಉಪ ಉತ್ಪನ್ನ ಎಥೆನಾಲ್‌ ಮೇಲಿನ ಲಾಭ ನೀಡಲು ಸರ್ಕಾರ ಮುಂದಾಗಿದ್ದು, ಎಫ್ಆರ್‌ಪಿ ದರದ ಪಾವತಿ ಬಳಿಕ ಹೆಚ್ಚುವರಿಯಾಗಿ ಪ್ರತಿ ಟನ್‌ಗೆ 50 ರೂಪಾಯಿಯಂತೆ ಕಬ್ಬು ಬೆಳೆಗಾರರಿಗೆ 204.47 ಕೋಟಿ ರೂ. ನೀಡಲಾಗುತ್ತಿದೆ.

ರಾಜ್ಯ ಸರ್ಕಾರದ ನಿರ್ಣಯದ ಕುರಿತು ತಕ್ಷಣ ಆದೇಶ ಹೊರಡಿಸುವಂತೆ ಕಬ್ಬು ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಸೇರಿ ರೈತ ಪ್ರತಿನಿಧಿಗಳು, ಕಬ್ಬು ನಿಯಂತ್ರಣ ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ರೈತರ ತಿರಸ್ಕಾರ
ಕಬ್ಬು ಖರೀದಿ ಮಂಡಳಿ ಸಭೆಯಲ್ಲಿ ಸಕ್ಕರೆ ಸಚಿವರು ಕಬ್ಬಿನ ಉಪ ಉತ್ಪನ್ನಗಳಿಂದ ಟನ್‌ ಕಬ್ಬಿಗೆ 126 ರೂ. ಲಾಭ ಬರುತ್ತದೆ. ಅದರಲ್ಲಿ ಮೊದಲನೇ ಕಂತಾಗಿ ರೈತರಿಗೆ ಎಫ್ಆರ್‌ಪಿಗೆ ಹೆಚ್ಚುವರಿಯಾಗಿ 50 ರೂ. ನೀಡುವಂತೆ ಕಾರ್ಖಾನೆಗಳಿಗೆ ಆದೇಶ ಹೊರಡಿಸುವುದಾಗಿ ಸಕ್ಕರೆ ಸಚಿವ ಮುನೇನಕೊಪ್ಪ ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ತಿಳಿಸಿದರು. ಆದರೆ, ಸರ್ಕಾರದ ಈ ನಿಲುವು ತಿರಸ್ಕರಿಸಲಾಗಿದ್ದು, ಹೋರಾಟ ಮುಂದುವರಿಯಲಿದೆ ಎಂದು ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬೂರ ಶಾಂತಕುಮಾರ್‌ ತಿಳಿಸಿದ್ದಾರೆ.

ಆದರೆ, ಈ ವಿಚಾರವಾಗಿ ಮಂಗಳವಾರ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ಶಾಂತಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರ ರೈತರ ಪರ ಇದೆ:
ಸರ್ಕಾರದ ತೀರ್ಮಾನವನ್ನು ತಿರಸ್ಕರಿಸಿ ರೈತರು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ರೈತರ ಹೋರಾಟ ಇರಬೇಕು. ಆಗ ಮಾತ್ರ ಅನೇಕ ವಿಚಾರಗಳು ಸರ್ಕಾರದ ಗಮನಕ್ಕೆ ಬರುತ್ತವೆ. ರೈತರಿಗಾಗಿ, ರೈತರ ಪರ ಇರುವ ಸರ್ಕಾರ ನಮ್ಮದು. ಇಲ್ಲಿವರೆಗೆ ಸಕ್ಕರೆ ಉಪ ಉತ್ಪನ್ನ ಮೇಲಿನ ಲಾಭಾಂಶ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ನಮ್ಮ ಸರ್ಕಾರ ಕಬ್ಬಿನ ಉಪ ಉತ್ಪನ್ನ ಮೇಲೆ ಲಾಭಾಂಶ ನೀಡಲು ನಿರ್ಧರಿಸಿದೆ. ಮೊದಲ ಹಂತದಲ್ಲಿ 204 ಕೋಟಿ ರೂ. ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ಈ ವರ್ಷದ ಕಬ್ಬು ನುರಿಸುವಿಕೆ ಮುಗಿದ ಮೇಲೆ ಲಾಭ ಆಧರಿಸಿ ರೈತರಿಗೆ ಲಾಭಾಂಶ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next