Advertisement

2024 LS Polls; ಯಾರೊಂದಿಗೂ ಮೈತ್ರಿ ಇಲ್ಲ: ಎಚ್ ಡಿಕೆ ಸ್ಪಷ್ಟ ನುಡಿ

05:47 PM Aug 20, 2023 | Team Udayavani |

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಇಲ್ಲ.ಈ ಬಗ್ಗೆ ಚರ್ಚೆಯೇ ಆಗಿಲ್ಲ, ಯಾರೂ ಮೈತ್ರಿಗೆ ಮುಂದೆ ಬಂದಿಲ್ಲ.ಹೀಗಿದ್ದಾಗ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳೋದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Advertisement

”ನಮ್ಮ ಪಕ್ಷದ ಸಂಘಟನೆಗೆ ವಿಶೇಷ ಒತ್ತು ನೀಡಬೇಕಿದೆ.ಇದಕ್ಕಾಗಿ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಮಾಡಿದ್ದೇವೆ. ಅವರ ನೇತೃತ್ವದಲ್ಲಿ ನಾಲ್ಕು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡುತ್ತೇವೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜ‌ನರಿಗೆ ಮನವರಿಕೆ ಮಾಡಬೇಕಿದೆ. ಇದರ ಜತೆಗೆ ಲೋಕಸಭೆ ಚುನಾವಣೆಯೂ ಬರುತ್ತಿದೆ. ರಾಜಕೀಯ ಪಕ್ಷವಾಗಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಹಿಂದೆ ನಮ್ಮ ನೀರು ನಮ್ಮ ಹಕ್ಕು ಅಂತಿದ್ದವರು.ಈಗ ನಮ್ಮ ನೀರು ತಮಿಳುನಾಡು ಹಕ್ಕು ಅನ್ನುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಅಧಿಕಾರಕ್ಕೆ ಬರೋದಕ್ಕೂ ಮುಂಚೆ ಮೇಕೆದಾಟು ಹೋರಾಟ ಮಾಡಿದ್ದರು. ನೀರಿಗಾಗಿ ಹೋರಾಟ ಮಾಡಿದ್ದವರು ಈಗ ಏನು ಮಾಡುತ್ತಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ನಮ್ಮವರು ವಾದವನ್ನೇ ಮಾಡಿಲ್ಲ. ನನಗೆ ಒಂದು ಬಾರಿ ಪೆನ್ ಕೊಡಿ ಅಂತ ಕೇಳಿದ್ದು ಇದಕ್ಕಾ? ಸರ್ಕಾರ ನಡೆಸುವವರಿಗೆ ರೈತರು, ಕುಡಿಯುವ ನೀರಿನ ಬಗ್ಗೆ ಸರಿಯಾದ ಮಾಹಿತಿ ಇರಬೇಕಿತ್ತು.ಬೆಂಗಳೂರಿಗೂ ಕುಡಿಯುವ ನೀರಿಗೆ ಸಮಸ್ಯೆ ಆಗಲಿದೆ. ನಮ್ಮ ಬೆಳೆಗೇ ನೀರಿಲ್ಲದೇ ಇದ್ದರೂ ತಮಿಳುನಾಡಿಗೆ ನೀರು ಹರಿಯುತ್ತಿದೆ. ನಾವೆಲ್ಲ ಹೋರಾಟ ಮಾಡಿದ ಮೇಲೆ ಸುಪ್ರೀಂಕೋರ್ಟ್ ಮುಂದೆ ಅಪೀಲು ಹಾಕಲು ಮುಂದಾಗಿದ್ದಾರೆ ಎಂದು ಕಿಡಿ ಕಾರಿದರು.

ಗ್ಯಾರಂಟಿ ಯೋಜನೆಗಳಿಗಾಗಿ 86 ಸಾವಿರ ಕೋಟಿ ರೂ. ಸಾಲ ಮಾಡಲಾಗಿದೆ. ಈಗ ಮಾಡಿದ ಸಾಲ ತೀರಿಸುವವರು ಯಾರು ? ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಲಾಗುತ್ತಿದೆ. 200 ಯೂನಿಟ್ ವಿದ್ಯುತ್ ಉಚಿತ ಅಂದಿದ್ದರು.ಈಗ ಕಂಡೀಷನ್ ಮೇಲೆ ಕಂಡೀಷನ್ ಹಾಕುತ್ತಿದ್ದಾರೆ.ಗ್ಯಾರಂಟಿ ಯೋಜನೆಗಳ ಕಾರಣಕ್ಕಾಗಿ ಅಭಿವೃದ್ಧಿ ನಿಂತೇ ಹೋಗಿದೆ. ಶಾಸಕರಿಗೆ ಅನುದಾನ ಸಿಗುತ್ತಿಲ್ಲ.ಮುಂದೆ ಇದೆಲ್ಲ ಎಲ್ಲಿಗೆ ಹೋಗಿ ನಿಲ್ಲುತ್ತೆ ನೋಡುತ್ತಿರಿ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next