Advertisement

ಕರ್ನಾಟಕದಲ್ಲಿ ಕಾಂಗ್ರೆಸ್‌ ಅವಸಾನಕ್ಕೆ 2023ಕ್ಕೆ ಮುಹೂರ್ತ: ಬೊಮ್ಮಾಯಿ

10:15 AM Nov 24, 2022 | Team Udayavani |

ದಾವಣಗೆರೆ: ಕಾಂಗ್ರೆಸ್‌ ಮುಳುಗುತ್ತಿರುವ ಹಡಗು. ಕರ್ನಾಟಕ ದಲ್ಲಿಯೂ ಕಾಂಗ್ರೆಸ್‌ ಮುಳುಗಲು 2023ರ ಚುನಾವಣೆ ಮುಹೂರ್ತ ನಿಶ್ಚಯವಾಗಿದೆ. ಮುಳುತ್ತಿರುವ ಹಡಗನ್ನು ಯಾರೂ ಹತ್ತುವುದಿಲ್ಲ.ಒಂದು ವೇಳೆ ಹತ್ತಿದ್ದರೆ ಅಥವಾ ಹತ್ತುವವರಿದ್ದರೆ ಅವರು ಮೂರ್ಖರು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಹರಿಹರ ನಗರದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಎಲ್ಲ ಭಾಗ್ಯ ಹೋಗಿ ರಾಜ್ಯಕ್ಕೆ ದೌರ್ಭಾಗ್ಯ ಬಂದಿತು.

ಅನ್ನಭಾಗ್ಯ ಯೋಜನೆಯಲ್ಲಿ ಕೆಜಿ ಅಕ್ಕಿಗೆ 27 ರೂ. ಕೊಟ್ಟಿದ್ದು ಕೇಂದ್ರ ಸರಕಾರ. ಆದರೆ ಮೂರು ರೂ. ಕೊಟ್ಟು ಕಾಂಗ್ರೆಸ್‌ ತನ್ನ ಫೋಟೋ ಹಾಕಿ ಪ್ರಚಾರ ಪಡೆದುಕೊಂಡಿತು ಎಂದರು.

ಎಸ್‌ಸಿ-ಎಸ್ಟಿ ಅವಗಣನೆ
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿನವರು ಹಿಂದುಳಿದವರನ್ನು ಹಿಂದೆಯೇ ಬಿಟ್ಟು ತಾವಷ್ಟೇ ಮುಂದೆ ಹೋದರು. ಎಸ್‌ಸಿ – ಎಸ್‌ಟಿಯವರು ವಿದ್ಯಾವಂತರಾದರೆ ತಮ್ಮ ಮತ ಕೈಬಿಟ್ಟು ಹೋಗುತ್ತವೆ ಎಂದು ಅವರನ್ನು ಎಲ್ಲಿಡಬೇಕೋ ಅಲ್ಲಿಯೇ ಇಟ್ಟರು. ಅಂದರೆ ಬಾವಿಯೊಳಗಿಟ್ಟು ಐದು ವರ್ಷಕ್ಕೊಮ್ಮೆ ಹಗ್ಗ ಹಾಕಿ ಮೇಲೆತ್ತಿ ಮತ ಹಾಕಿಸಿ ಮತ್ತೆ ಬಾವಿಯೊಳಗೆ ಬಿಡುವ ಕೆಲಸ ಮಾಡುತ್ತ ಬಂದಿದೆ ಎಂದರು.

ಭ್ರಷ್ಟಾಚಾರವೇ ಕಾಂಗ್ರೆಸ್‌ನ ಬಹುದೊಡ್ಡ ಸಾಧನೆ
ಕಾಂಗ್ರೆಸ್‌ ಎಂದರೆ ಕಮಿಷನ್‌, ಕಮಿಷನ್‌ ಎಂದರೆ ಕಾಂಗ್ರೆಸ್‌ ಎಂಬಂತಾಗಿದೆ. ಭ್ರಷ್ಟಾಚಾರವೇ ಕಾಂಗ್ರೆಸ್‌ ಸಾಧನೆ. ಬಿಡಿಎ, ಡಿನೋಟಿಫಿಕೇಶನ್‌, ನೀರಾವರಿ ಹೀಗೆ ಎಲ್ಲದರಲ್ಲಿಯೂ ಕಮಿಷನ್‌ ಹೊಡೆದಿದೆ. ಇದನ್ನು ಲೋಕಾಯುಕ್ತ ಹೊರಗೆ ತೆಗೆಯುತ್ತದೆ ಎಂಬ ಭಯದಿಂದ ಲೋಕಾಯುಕ್ತವನ್ನೇ ಮುಚ್ಚಿದರು.

Advertisement

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಮಾಡಿ ದಾಖಲಾಗಿದ್ದ ಪ್ರಕರಣಗಳಿಗೆ ಬಿ ರಿಪೋರ್ಟ್‌ ಹಾಕಿಸಿದರು. ಕಾಂಗ್ರೆಸ್‌ಗೆ ಯಾವ ಪುರುಷಾರ್ಥಕ್ಕೆ ಮತ್ತೆ ಅಧಿಕಾರ ಕೊಡಬೇಕು ಎಂದು ಪ್ರಶ್ನಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next