ಬಳ್ಳಾರಿ: ಪ್ರಧಾನಿ ಮೋದಿ 2014ರಲ್ಲಿ ಅಚ್ಚೇ ದಿನ್ ಬರುತ್ತದೆ ಅಂದರು, 2022 ಆದ್ರೂ ಅಚ್ಚೇ ದಿನ್ ಬಂದಿಲ್ಲ. ಪ್ರಧಾನಿ ಬರೀ ಸುಳ್ಳು ಹೇಳುತ್ತಾರೆ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘ಭಾರತ ಜೋಡೋ’ ಯಾತ್ರೆಯ ಅಂಗವಾಗಿ ಬಳ್ಳಾರಿಯಲ್ಲಿ ಅ. 15ರಂದು ಬೃಹತ್ ಸಮಾವೇಶ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಮುನ್ಸಿಪಲ್ ಮೈದಾನಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
‘ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ನ ಭದ್ರಕೋಟೆ’ ಎಂದ ಸಿದ್ದರಾಮಯ್ಯ, ‘ದೇಶದಲ್ಲಿ ಮೋದಿ, ಅಮಿತ್ ಶಾ ರನ್ನು ಪ್ರಶ್ನಿಸೋರಿಲ್ಲ.ಬಿಜೆಪಿ ಆಡಳಿತದಿಂದ ಜನ ಆತಂಕದಲ್ಲಿದ್ದಾರೆ.ರಾಜ್ಯದಲ್ಲಿ ಬಿಜೆಪಿಯವರು ಲಂಚದ ಹಣಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ. 2018ರಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬಂದಿತ್ತಾ? 17 ಶಾಸಕರನ್ನು ಕೊಂಡುಕೊಂಡು ಬಿಜೆಪಿಯವರು ಅಧಿಕಾರಕ್ಕೆ ಬಂದರು. ಬಿಜೆಪಿ ಬಂದಾಗಿನಿಂದ ಧರ್ಮ ಸಂಘರ್ಷ ಹೆಚ್ಚಿದೆ’ ಎಂದು ಕಿಡಿ ಕಾರಿದರು.
‘ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದರು. ರೈತರ ವ್ಯವಸಾಯದ ಖರ್ಚು ದುಪ್ಪಟ್ಟಾಗಿದೆ, ಆದಾಯ ಅಷ್ಟೇ ಇದೆ. ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ಗೊಬ್ಬರ, ಅಡುಗೆ ಎಣ್ಣೆ ಸೇರಿ ಇತರೆ ವಸ್ತುಗಳ ಬೆಲೆಗಳು ಗಗನಕ್ಕೇರಿವೆ’ ಎಂದರು.
‘2018ರಲ್ಲಿ ರಾಮುಲು ಬಿಜೆಪಿ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ಮೀಸಲಾತಿ ಹೆಚ್ಚಿಸುತ್ತೇನೆ ಅಂದರು. ರಕ್ತದಲ್ಲಿ ಬರೆದು ಕೊಡುತ್ತೇನೆ ಅಂದರು. ನಾಲ್ಕು ವರ್ಷ ಅವರ ಹತ್ತಿರ ರಕ್ತ ಇದ್ದಿಲೆನ್ರೀ?’ ಎಂದು ಸಚಿವ ಶ್ರೀರಾಮುಲು ವಿರುದ್ಧ ವ್ಯಂಗ್ಯವಾಡಿದರು.
‘ಕಾಂಗ್ರೆಸ್ಸಿಗರದ್ದು ಪಾದಯಾತ್ರೆ, ಬಿಜೆಪಿಗರದ್ದು ರಥಯಾತ್ರೆ. ರಾಜ್ಯದಲ್ಲಿ 40% ಸರಕಾರ ಇನ್ನೂ ಇರಬೇಕಾ’ ಎಂದು ಪ್ರಶ್ನಿಸಿದರು.
‘ ಮುಸ್ಲಿಮರು ಹಿಂದೂ ದೇಶದಲ್ಲಿರಲು ಸಾಧ್ಯವಿಲ್ಲ ಎಂದವರು ಸಾವರ್ಕರ್. ಮಹಾತ್ಮ ಗಾಂಧಿಜೀಯನ್ನು ಕೊಂದ ಕೊಲೆಗಡುಕ ನಾಥೂರಾಮ್ ಗೋಡ್ಸೆ. ಈ ಇಬ್ಬರನ್ನು ಬಿಜೆಪಿಯವರು ಪೂಜಿಸುತ್ತಾರೆ. ಇಂಥ ಭ್ರಷ್ಟ ಹಾಗೂ ದ್ವೇಷದ ರಾಜಕೀಯ ಮಾಡುವ ಬಿಜೆಪಿ ಸರಕಾರ ಬೇಕಾ ಎಂದು ವಾಗ್ದಾಳಿ ನಡೆಸಿದರು.