ದೋಹಾ: ಆರ್ಜೆಂಟೀನಾ-ಫ್ರಾನ್ಸ್, ಮೆಸ್ಸಿ,-ಎಂಬಪೆ, ಎಕ್ಸ್‌ಟ್ರಾ ಟೈಮ್-ಶೂಟೌಟ್… ಹೀಗೆ ಕಾಲ್ಚೆಂಡಿನ ಮಾಯಾಲೋಕದ ಅಷ್ಟೂ ರಸರೋಮಾಂಚನ, ಮಹಾಕೌತುಕವನ್ನು ತೆರೆದಿರಿಸಿ ಕ್ರೀಡಾಲೋಕವನ್ನು ಬೆರಗುಗೊಳಿಸಿದ ಕತಾರ್ ವಿಶ್ವಕಪ್‌ಗೆ ತೆರೆ ಬಿದ್ದಿದೆ.
ಅರಬ್ ನಾಡಿನಲ್ಲಿ ಮೊದಲ ಸಲ ನಡೆದ ಈ ಕ್ರೀಡಾಕೂಟ ಅತ್ಯಂತ ಶಿಸ್ತುಬದ್ಧವಾಗಿ ಸಾಗಿ ಮೆಸ್ಸಿ ಎಂಬ ಮಾಯಾವಿಯ ಬಹುಕಾಲದ ಕನಸನ್ನು ಸಾಕ್ಷಾತ್ಕರಿಸಿತು; ಫುಟ್‌ಬಾಲ್ ಚರಿತ್ರೆಯ ಸ್ಮರಣೀಯ ಅಧ್ಯಾಯವಾಗಿ ಇತಿಹಾಸದ ಪುಟವನ್ನು ಸೇರಿತು. ಹಾಗೆಯೇ ಮುಂದಿನ ಫುಟ್‌ಬಾಲ್ ಜಗತ್ತು ಕೈಲಿಯನ್ ಎಂಬಪೆ ಎಂಬ ಮಿಂಚಿನ ಆಟಗಾರನಿಗೆ ಮುಡಿಪು ಎಂಬುದಕ್ಕೆ ಮುನ್ನುಡಿಯನ್ನೂ ಬರೆಯಿತು.
ಮಹಾಸಂಭ್ರಮವೊಂದು ಮುಗಿದ ಬಳಿಕ ಹಿನ್ನೋಟ ಹಾಯಿಸಿದಾಗ ಕಂಡುಬರುವ ಸ್ವಾರಸ್ಯಗಳಿಗೆ, ದಾಖಲೆಗಳಿಗೆ ಕೊನೆ ಇರದು. ಇದಕ್ಕೆ ಕತಾರ್ ಕೂಟವೂ ಹೊರತಲ್ಲ. ಈ ಪಂದ್ಯಾವಳಿಯ ಬಹುದೊಡ್ಡ ದಾಖಲೆಯೆಂದರೆ, ಅತ್ಯಧಿಕ ಸಂಖ್ಯೆಯ ಗೋಲುಗಳದ್ದು. ಫೈನಲ್‌ಮುಖಾಮುಖಿಯಲ್ಲಿ 6 ಗೋಲು ಸಿಡಿದುದರಿಂದ ಗೋಲುಗಳ ಒಟ್ಟು ಸಂಖ್ಯೆ 172ಕ್ಕೆ ಏರಿತು. ಇದರೊಂದಿಗೆ ವಿಶ್ವಕಪ್ ಚರಿತ್ರೆಯಲ್ಲಿ ಅತ್ಯಧಿಕ ಗೋಲುಗಳನ್ನು ಕಂಡ ದಾಖಲೆ ಕತಾರ್ ಪಂದ್ಯಾವಳಿಯದ್ದಾಯಿತು.
ಹಿಂದಿನ ದಾಖಲೆ 171 ಗೋಲ್. 1998 ಮತ್ತು 2014ರಲ್ಲಿ ಈ ದಾಖಲೆ ನಿರ್ಮಾಣಗೊಂಡಿತ್ತು. 1998ರ ಫ್ರಾನ್ಸ್ ಕೂಟದಲ್ಲಿ ಮೊದಲ ಸಲ 32 ತಂಡಗಳು ಕಣಕ್ಕಿಳಿದಿದ್ದವು. 64 ಪಂದ್ಯಗಳು ನಡೆದಿದ್ದವು.
Related Articles
2026ರ ಪಂದ್ಯಾವಳಿಯಲ್ಲಿ ನೂತನ ದಾಖಲೆ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ. ಇಲ್ಲಿ 48 ತಂಡಗಳು ಭಾಗವಹಿಸಲಿದ್ದು, 80 ಅಥವಾ 104 ಪಂದ್ಯಗಳನ್ನು ಆಡಲಿವೆ.
ಸರಾಸರಿ ಲೆಕ್ಕದಲ್ಲಿ ಈ ಕೂಟದ ಪಂದ್ಯವೊಂದು 2.63 ಗೋಲುಗಳನ್ನು ಕಂಡಿತು. ಆದರೆ ಇದು ದಾಖಲೆಯಲ್ಲ. 1954ರ ಸ್ವಿಜರ್ಲೆಂಡ್ ವಿಶ್ವಕಪ್‌ನಲ್ಲಿ 5.38ರ ಸರಾಸರಿಯಲ್ಲಿ ಗೋಲು ಸಿಡಿದದ್ದು ಇಂದಿಗೂ ದಾಖಲೆಯಾಗಿ ಉಳಿದಿದೆ.
ಫ್ರಾನ್ಸ್ 16 ಗೋಲು
ಈ ಕೂಟದಲ್ಲಿ ಅತ್ಯಧಿಕ 16 ಗೋಲು ಬಾರಿಸಿದ ದಾಖಲೆ ಫ್ರಾನ್ಸ್ ತಂಡದ್ದಾಯಿತು. ಬೆಲ್ಜಿಯಂ, ಡೆನ್ಮಾರ್ಕ್, ಕತಾರ್ ಮತ್ತು ವೇಲ್ಸ್ ಕನಿಷ್ಠ ಒಂದು ಗೋಲು ದಾಖಲಿಸಿದವು.