Advertisement

2019- ಸ್ಯಾಂಡಲ್‌ವುಡ್‌ ರಂಗಿನೋಟ

06:00 AM Dec 28, 2018 | |

ಮತ್ತೂಂದು ಹೊಸ ವಸಂತಕ್ಕೆ ಚಿತ್ರರಂಗ ಎದುರಾಗುತ್ತಿದೆ. ಎಂದಿನಂತೆ ಹೊಸ ಆಸೆ, ಆಕಾಂಕ್ಷೆ ಮತ್ತು ಕನಸುಗಳು ಗರಿಗೆದರುತ್ತಿವೆ. 2018ರಲ್ಲಿ ಆಸೆಗಳು ಹೆಚ್ಚಾಗಲಿಲ್ಲ, ಕನಸುಗಳು ದೊಡ್ಡದಾಗಲಿಲ್ಲ. ಚಿಟಿಕೆಯಷ್ಟು ಖುಷಿ ಸಂಭ್ರಮಿಸಿ, ಹಿಡಿಯಷ್ಟು ನೋವು ಅನುಭವಿಸಿದ ಚಿತ್ರರಂಗ, ಇದೀಗ ಹೊಸ ವರ್ಷದಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹೊತ್ತುಕೊಂಡಿದೆ. ಹಾಗೆ ನೋಡಿದರೆ, 2018 ರಲ್ಲಿ ಸ್ಟಾರ್‌ ನಟರ ಅಬ್ಬರ ಜೋರಾಗಿರಲಿಲ್ಲ. ಬಿಡುಗಡೆಯಾದ ನೂರಾರು ಚಿತ್ರಗಳ ಪೈಕಿ ಬೆರಳೆಣಿಕೆಯಷ್ಟು ಸ್ಟಾರ್‌ ಚಿತ್ರಗಳು ಮಾತ್ರ ಬಿಡುಗಡೆಯಾಗಿವೆ. ಆದರೆ, ಹೊಸ ವರ್ಷಕ್ಕೆ ಸ್ಟಾರ್ ಚಿತ್ರಗಳ ಅಬ್ಬರ ಎಂದಿಗಿಂತಲೂ ಜೋರಾಗಿರಲಿದೆ ಅಂದರೆ ನಂಬಲೇಬೇಕು. ವಿಶೇಷವೆಂದರೆ, ಹೊಸ ವರ್ಷದಲ್ಲಿ ಸ್ಟಾರ್‌ಗಳ ಕಮರ್ಷಿಯಲ್‌ ಚಿತ್ರಗಳ ಜೊತೆ ಜೊತೆಗೆ ಭರ್ಜರಿ ಎನಿಸುವ ಐತಿಹಾಸಿಕ ಚಿತ್ರಗಳೂ ಪ್ರೇಕ್ಷಕರಿಗೆ ರಸದೌತಣ ಕೊಡಲಿವೆ. 2018 ರಲ್ಲಿ ತಮ್ಮ ಪ್ರೀತಿಯ ಸ್ಟಾರ್‌ ನಟರ ಚಿತ್ರಗಳ್ಯಾವು ಬಿಡುಗಡೆಯಾಗಲೇ ಇಲ್ಲ ಎಂಬ ಅಭಿಮಾನಿಗಳ ಕೊರಗನ್ನು 2019 ನೀಗಿಸಲಿದೆ ಎಂಬ ಆಶಾಭಾವನೆ ಅಭಿಮಾನಿಗಳ ಮನದಲ್ಲಿ ದಟ್ಟವಾಗಿದೆ. ಹೊಸ ವರ್ಷದಲ್ಲಿ ಬಹುತೇಕ ಎಲ್ಲಾ ಸ್ಟಾರ್‌ಗಳ ಚಿತ್ರಗಳು ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ವಿಶೇಷ ಕೊಡುಗೆ ಕೊಡುವ ಉತ್ಸಾಹದಲ್ಲಿವೆ ಎಂಬುದು ವಿಶೇಷತೆಗಳಲ್ಲೊಂದು. ಹೊಸ ವರ್ಷ ಅಭಿಮಾನಿಗಳ ಪಾಲಿಗೆ ಮಹಾಹಬ್ಬವೆಂದರೆ ತಪ್ಪಿಲ್ಲ. ಕಾರಣ, ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್‌ ನಟರು ಒಂದಲ್ಲ, ಎರಡು, ಮೂರು ಚಿತ್ರಗಳ ಮೂಲಕ ಅಭಿಮಾನಿಗಳ ಮುಂದೆ ಹಾಜರಾಗಲಿದ್ದಾರೆ. ಹಾಗೆ ವಿವರಿಸುವುದಾದರೆ, ಪುನೀತ್‌ರಾಜಕುಮಾರ್‌ ಅಭಿನಯದ “ನಟಸಾರ್ವಭೌಮ’ ಮತ್ತು “ಯುವರತ್ನ’, ದರ್ಶನ್‌ ನಟಿಸಿರುವ “ಕುರುಕ್ಷೇತ್ರ’, “ಯಜಮಾನ’, “ಒಡೆಯ’, ಶಿವರಾಜಕುಮಾರ್‌ ಅವರ “ಕವಚ’,”ರುಸ್ತುಂ’,”ದ್ರೋಣ’ ಮತ್ತು “ಆನಂದ್‌’, ಸುದೀಪ್‌ ಅವರ “ಪೈಲ್ವಾನ್‌’ ಮತ್ತು “ಕೋಟಿಗೊಬ್ಬ 3′, ಉಪೇಂದ್ರ ಅಭಿನಯದ “ಐಲವ್‌ಯೂ’, “ರವಿಚಂದ್ರ’,”ಹೋಮ್‌ ಮಿನಿಸ್ಟರ್‌’, ಶ್ರೀಮುರಳಿ ಅಭಿನಯದ “ಭರಾಟೆ’ ಬಿಡುಗಡೆಯ ಜೊತೆಗೆ ವಷಾಂತ್ಯದಲಿ “ಮದಗಜ’ ಬಿಡುಗಡೆಯಾಗುವ ಸಾಧ್ಯತೆ ಇದೆ. ಗಣೇಶ್‌ ಅಭಿನಯಿಸಿರುವ “ಗಿಮಿಕ್‌’ ಮತ್ತು “ಗೀತಾ’, ಧ್ರುವ ಸರ್ಜಾ ಅವರ “ಪೊಗರು’, ರಕ್ಷಿತ್‌ ಶೆಟ್ಟಿ ಅಭಿನಯದ “ಅವನೇ ಶ್ರೀಮನ್ನಾರಾಯಣ’ ಮತ್ತು “ಚಾರ್ಲಿ’ ಚಿತ್ರಗಳು ಬಿಡುಗಡೆಯಾಗಲಿವೆ. ಯಶ್‌ ಅವರ “ಕಿರಾತಕ-2′ ಅಂದುಕೊಂಡಂತೆ ನಡೆದರೆ 2019ರಲ್ಲಿ ಬಿಡುಗಡೆಯಾಗಬಹುದು. ಇದು ಸ್ಟಾರ್‌ ನಟರ ಚಿತ್ರಗಳ ವಿವರವಾದರೆ, ಇವರ ಜೊತೆಗೆ ರವಿಚಂದ್ರನ್‌, ಜಗ್ಗೇಶ್‌, ನಿಖೀಲ್‌ಕುಮಾರ್‌, ಪ್ರಜ್ವಲ್‌, ಸತೀಶ್‌ ನೀನಾಸಂ, ದಿಗಂತ್‌, ವಿನೋದ್‌ಪ್ರಭಾಕರ್‌, ಶರಣ್‌, ಅಜೇಯ್‌ರಾವ್‌, ಯೋಗೇಶ್‌, ಕಿಶೋರ್‌, ಚಿರಂಜೀವಿ ಸರ್ಜಾ, ಅನೀಶ್‌ ತೇಜೇಶ್ವರ್‌ ಸೇರಿದಂತೆ ಹಲವು ನಟರ ಚಿತ್ರಗಳು ಸಹ ತೆರೆಗೆ ಬರಲಿವೆ. ಅಲ್ಲಿಗೆ ಹೊಸ ವರ್ಷ ಚಿತ್ರರಂಗಕ್ಕೆ ಹೊಸ ರಂಗು ತುಂಬುವುದರಲ್ಲಿ ಅಚ್ಚರಿ ಇಲ್ಲ.

Advertisement

2018 ಚಿತ್ರರಂಗಕ್ಕೆ ಒಂದಷ್ಟು ಖುಷಿ ಕೊಟ್ಟಿದ್ದು ಬಿಟ್ಟರೆ, ಹೆಚ್ಚೇನೂ ಸಂಭ್ರಮ ಕಾಣಿಸಲಿಲ್ಲ. ಸ್ಟಾರ್‌ಗಳಿಗಿಂತ ಹೊಸಬರೇ ಹೆಚ್ಚು ಕಾಣಿಸಿಕೊಂಡರು. ಆದರೆ, 2019 ಸ್ಟಾರ್‌ಗಳದ್ದೇ ಹವಾ ಎಂಬುದು ಸುಳ್ಳಲ್ಲ. ಸಾಲು ಸಾಲು ಸ್ಟಾರ್‌ ನಟರ ಚಿತ್ರಗಳು ಬಿಡುಗಡೆಯಾಗುವ ಮೂಲಕ ಹೊಸ ವರ್ಷಕ್ಕೆ ಅಭಿಮಾನಿಗಳ ಮನದಲ್ಲಿ ಮತ್ತಷ್ಟು ಚಿತ್ತಾರ ಮೂಡಿದರೆ ಅಚ್ಚರಿಯೇನಿಲ್ಲ. ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಲೇಬೇಕು. ಸ್ಟಾರ್‌ ನಟರು ಕಮರ್ಷಿಯಲ್‌ ಚಿತ್ರಗಳ ಜೊತೆ ಜೊತೆಗೇ ಐತಿಹಾಸಿಕ ಚಿತ್ರಗಳತ್ತವೂ ಮುಖ ಮಾಡಿರುವುದು ಇನ್ನೊಂದು ವಿಶೇಷ. ದರ್ಶನ್‌ ಹೊಸ ವರ್ಷದಲ್ಲಿ “ಗಂಡುಗಲಿ ಮದಕರಿ ನಾಯಕ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಆ ಚಿತ್ರ 2019 ರ ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಬಹುದು. ಇನ್ನು, ಸುದೀಪ್‌ ಕೂಡ ಮದಕರಿನಾಯಕ ಚರಿತ್ರೆಯ ಸಿನಿಮಾ ಮಾಡಲು ಅಣಿಯಾಗಿದ್ದಾರೆ. ಆ ಚಿತ್ರಕ್ಕೂ ಹೊಸ ವರ್ಷದಲ್ಲಿ ಚಾಲನೆ ಸಿಗುವ ಸಾಧ್ಯತೆ ಇದೆ. ಈಗಾಗಲೇ “ಬಿಚ್ಚುಗತ್ತಿ’ ಎಂಬ ಮತ್ತೂಂದು ಐತಿಹಾಸಿಕ ಚಿತ್ರಕ್ಕೆ ಚಾಲನೆ ಸಿಕ್ಕಾಗಿದೆ. ಇನ್ನು, ಕಿಶೋರ್‌ ಅವರು “ಶೂರ ಸಿಂಧೂರ ಲಕ್ಷ್ಮಣ’ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇವು ಹೊಸ ವರ್ಷದಲ್ಲಿ ಕಾಣಸಿಗಲಿರುವ ಐತಿಹಾಸಿಕ ಚಿತ್ರಗಳು. ಇವುಗಳೊಂದಿಗೆ ಇನ್ನಷ್ಟು ಚಿತ್ರಗಳು ಸೆಟ್ಟೇರಿದರೂ ಅಲ್ಲಗಳೆಯುವಂತಿಲ್ಲ.

ಎಂದಿನಂತೆ ಹೊಸ ವರ್ಷದಲ್ಲೂ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳ ಸಂಖ್ಯೆಗೇನೂ ಕಮ್ಮಿಯಿಲ್ಲ. ಹಿರಿಯ ನಿರ್ದೇಶಕ ಸುನೀಲ್‌ಕುಮಾರ್‌ ದೇಸಾಯಿ ಅವರ “ಉದ^ರ್ಷ’ ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶ ಹೊಂದಿದ್ದರೆ, “ಅನುಕ್ತ’ ಚಿತ್ರ ಕೂಡ ಅದೇ ಜಾನರ್‌ಗೆ ಸೇರಿದ ಚಿತ್ರ. “ತ್ರಯಂಬಕಂ’ ಎಂಬ ಚಿತ್ರ ಕೂಡ ಹೊಸ ಹಾದಿಯ ಸಿನಿಮಾ ಎನ್ನಲ್ಲಡ್ಡಿಯಿಲ್ಲ. ಹೊಸ ವರ್ಷದಲ್ಲಿ ಹೊಸಬರ ಆಗಮನದ ತಯಾರಿಯೂ ಜೋರಾಗಿದೆ. ಈ ಮಧ್ಯೆ ಹೊಸ ವಸಂತದೊಂದಿಗೆ ಮಿಂದೇಳಲು ತರಹೇವಾರಿ ಚಿತ್ರಗಳು ನೋಡುಗರ ಮುಂದೆ ಬರಲಿವೆ. ಆ್ಯಕ್ಷನ್‌, ರೊಮ್ಯಾಂಟಿಕ್‌ ಲವ್‌ಸ್ಟೋರಿ, ಹಾರರ್‌, ಸಸ್ಪೆನ್ಸ್‌ ಥ್ರಿಲ್ಲರ್‌, ಮಹಿಳಾ ಪ್ರಧಾನ, ಹಾಸ್ಯ ಪ್ರಧಾನ, ಸೈನ್ಸ್‌ ಫಿಕ್ಷನ್‌ ಸೇರಿದಂತೆ ಮಕ್ಕಳ ಚಿತ್ರಗಳೂ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಕಳೆದ ಸಲ ಪ್ರಯೋಗಾತ್ಮಕ ಚಿತ್ರಗಳಿಗೇನೂ ಬರವಿರಲಿಲ್ಲ. ಅಂತೆಯೇ ಹೊಸ ವರ್ಷದಲ್ಲೂ ಅದು ಮುಂದುವರೆದಿದೆ. ಹೊಸ ವರ್ಷದಲ್ಲಿ ಕಾಣಿಸಲಿರುವ ಪ್ರಯೋಗಾತ್ಮಕ ಚಿತ್ರಗಳನ್ನು ಹಾಗೊಮ್ಮೆ ಹೆಸರಿಸುವುದಾದರೆ, “ಕವಲುದಾರಿ’, “ಮಾಯಬಜಾರ್‌’, “ಗೋಧಾ’, “ಚಂಬಲ್‌’, “ಬೀರಬಲ್‌’,”ಭಿನ್ನ’, “ಕಥಾ ಸಂಗಮ’, “ಮಿಸ್ಸಿಂಗ್‌ ಬಾಯ್‌’, “ಅಮ್ಮನ ಮನೆ’, “ಭೀಮಸೇನ ನಳಮಹಾರಾಜ’, “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸೇರಿದಂತೆ ಇನ್ನೂ ಅನೇಕ ಪ್ರಯೋಗವುಳ್ಳ ಚಿತ್ರಗಳು ಹೊಸ ವರ್ಷದ ಕೊಡುಗೆಯಾಗಲಿವೆ ಎಂಬ ಬಲವಾದ ನಂಬಿಕೆಯನ್ನು ಹೆಚ್ಚಿಸಿವೆ.

ಪ್ರತಿ ವರ್ಷವೂ ಹೊಸ ನಟರ ಆಗಮನ ಸಹಜ. ಅಂತೆಯೇ ಈ ವರ್ಷ ಹೊಸ ನಾಯಕರ ಚಿತ್ರಗಳು ನಿರೀಕ್ಷೆ ಹೆಚ್ಚಿಸಿರುವುದು ಸುಳ್ಳಲ್ಲ. “ಅಮರ್‌’ ಮೂಲಕ ಅಭಿಷೇಕ್‌ ಅಂಬರೀಶ್‌ ನಿರೀಕ್ಷೆ ಹುಟ್ಟಿಸಿದ್ದಾರೆ. ಉಳಿದಂತೆ “ಪಡ್ಡೆಹುಲಿ’ ಮೂಲಕ ಶ್ರೇಯಸ್‌, “ಮೊಡವೆ’ ಮೂಲಕ ಆದಿತ್ಯ ಶಶಿಕುಮಾರ್‌, ಡಾ.ರಾಜಕುಮಾರ್‌ ಮೊಮ್ಮಗ ಧೀರನ್‌ ನಟಿಸಲಿರುವ “ದಾರಿತಪ್ಪಿದ ಮಗ’ ಹಾಗು “ಬಜಾರ್‌’ ಚಿತ್ರದ ಮೂಲಕ ಒಂದಷ್ಟು ಸುದ್ದಿಯಾಗಿರುವ ಧನ್ವೀರ್‌ ಅವರು 2018 ರಲ್ಲಿ ಲಾಂಚ್‌ ಆಗಿದ್ದು, 2019 ರಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿಯುವುದು ನಿಶ್ಚಿತ. ಇಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಆಮೇಲಿನ ಮಾತು. ಆದರೆ, ಹೊಸ ವರ್ಷ ಹೊಸದೊಂದು ಭವಿಷ್ಯ ಬರೆಯುತ್ತೆ ಎಂದು ನಂಬಿದವರ ಸಂಖ್ಯೆಯೇ ಇಲ್ಲಿ ಹೆಚ್ಚು. ಅದೇನೆ ಇರಲಿ, ಹೊಸ ವರ್ಷಕ್ಕೆ ಮೈಯೊಡ್ಡಲು ಕಾದು ನಿಂತಿರುವ ಕನ್ನಡ ಚಿತ್ರರಂಗ, ಈ ಬಾರಿ ಹೊಸದೊಂದು ಆಶಾಭಾವನೆ ಇಟ್ಟುಕೊಂಡಿರುವುದಂತೂ ಸುಳ್ಳಲ್ಲ. ಈ ಸಲ ಅತೀ ಹೆಚ್ಚು ಚಿತ್ರಗಳು ಬಿಡುಗಡೆಯಾಗಿ ಜೋರು ಸುದ್ದಿ ಮಾಡಿದರೆ, ಹೊಸ ವರ್ಷದಲ್ಲಿ ಜೋರಾಗಿಯೇ ಸದ್ದು ಮಾಡಲು ಸ್ಟಾರ್ ನಟರು ಸಾಲಾಗಿ ನಿಂತಿದ್ದಾರೆ. ಅವರೊಂದಿಗೆ ನಮ್ಮದೂ ಒಂದು ಸೌಂಡು ಇರಬೇಕೆಂಬ ನಿಟ್ಟಿನಲ್ಲಿ ಹೊಸಬರೂ ಸಜ್ಜಾಗಿ ನಿಂತಿದ್ದಾರೆ. ಹೊಸ ವರ್ಷಕ್ಕೆ ಗಾಂಧಿನಗರದ ಅಂಗಳದಲ್ಲಿ ಹೊಸತನದ ಕಲರವ ಕೇಳಿಸುವುದಂತೂ ಗ್ಯಾರಂಟಿ. ಆ ನಂಬಿಕೆಯಲ್ಲೇ ಹಳೆಯ ನೆನಪು, ಸೋಲು, ನೋವು ಎಲ್ಲವನ್ನೂ ಬದಿಗೊತ್ತಿ, ಹೊಸ ಕನಸುಗಳನ್ನು ಬೆನ್ನತ್ತಿರುವ ಸಿನಿಮಂದಿಯ ಆಕಾಂಕ್ಷೆಗಳೆಲ್ಲಾ ಈಡೇರುವಂತಾಗಲಿ ಎಂಬುದೇ ಎಲ್ಲರ ಆಶಯ. ಹೊಸ ವರ್ಷದಲ್ಲಿ ಬರಲಿರುವ ಸಿನಿಮಾಗಲು, ಅತಿ ಹೆಚ್ಚು ಮಿಂಚಲಿರುವ ನಾಯಕಿಯರು, ಸ್ಟಾರ್‌ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿರುವವರ ಬಗ್ಗೆ ಇಲ್ಲಿ ಹೇಳಲಾಗಿದೆ. 2019ರ ಸಿನಿಮಾ ನಿರೀಕ್ಷೆ ಸುತ್ತ ಒಂದು ರೌಂಡಪ್‌ …

Advertisement

Udayavani is now on Telegram. Click here to join our channel and stay updated with the latest news.

Next