Advertisement
ಮತ್ತೊಮ್ಮೆ ಪ್ರಧಾನಿ ಗದ್ದುಗೆ ಏರಿದ್ದ ನರೇಂದ್ರ ಮೋದಿ:
Related Articles
Advertisement
ಜಮ್ಮು-ಕಾಶ್ಮೀರ ವಿಶೇಷ 370ನೇ ವಿಧಿ ರದ್ದು
ಭಾರತದ ಮುಕುಟ ಮಣಿಯಂತಿದ್ದ ಜಮ್ಮು-ಕಾಶ್ಮೀರದ 370ನೇ ವಿಧಿಯನ್ನು ಆಗಸ್ಟ್ 5ರಂದು ಕೇಂದ್ರ ಸರ್ಕಾರ ರದ್ದುಗೊಳಿಸಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು. ಈ ನಿರ್ಧಾರದಿಂದ ವಿಪಕ್ಷಗಳು ಪ್ರತಿಭಟಿಸಿದ್ದವು. ಆದರೆ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ಶಾಲಾ, ಕಾಲೇಜಿಗೆ ರಜೆ ಘೋಷಿಸಿ, ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿ, ಸಾವಿರಾರು ಯೋಧರನ್ನು ಕಣಿವೆ ರಾಜ್ಯದಲ್ಲಿ ನಿಯೋಜಿಸಿತ್ತು. 370ನೇ ವಿಧಿ ರದ್ದತಿ ಬಗ್ಗೆ ಪಾಕಿಸ್ತಾನ ಸಾಕಷ್ಟು ಕ್ಯಾತೆ ತೆಗೆದಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಚಾರವನ್ನು ಪ್ರಸ್ತಾಪಿಸಿ ಕೊನೆಗೆ ಮುಖಭಂಗ ಅನುಭವಿಸಿತ್ತು.
ಐಎನ್ ಎಕ್ಸ್ ಪ್ರಕರಣದಲ್ಲಿ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಬಂಧನ
ರಾಷ್ಟ್ರ ರಾಜಕಾರಣದ ಸುಮಾರು 27 ಗಂಟೆಗಳ ಹೈಡ್ರಾಮಾದ ಬಳಿಕ ಕಾಂಗ್ರೆಸ್ ಹಿರಿಯ ಮುಖಂಡ, ಕೇಂದ್ರ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರನ್ನು ಐಎನ್ ಎಕ್ಸ್ ಮೀಡಿಯಾ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ಬಂಧಿಸಿತ್ತು. ಈ ಪ್ರಕರಣ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿತ್ತು. ಸುಪ್ರೀಂಕೋರ್ಟ್ ಪ್ರಕರಣದಲ್ಲಿ ಮೂರು ತಿಂಗಳ ಬಳಿಕ ಚಿದಂಬರಂಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ತ್ರಿವಳಿ ತಲಾಖ್ ರದ್ದು:
ಲೋಕಸಭಾ ಚುನಾವಣೆ ಪ್ರಚಾರದ ವೇಳೆಯಲ್ಲಿಯೇ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಪಕ್ಷಗಳ ಹಾಗೂ ಮುಸ್ಲಿಂ ಸಮುದಾಯದ ವಿರೋಧವನ್ನು ಲೆಕ್ಕಿಸದೆ ಮಹತ್ವದ ತ್ರಿವಳಿ ತಲಾಖ್ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿತ್ತು. ತ್ರಿವಳಿ ತಲಾಖ್ ಅಸಾಂವಿಧಾನಿಕ ಕ್ರಮ ಎಂದು ಸುಪ್ರೀಂಕೋರ್ಟ್ ಕೂಡ ತೀರ್ಪು ನೀಡಿತ್ತು. ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿಯಾಗಿದ್ದು, ಏಕಕಾಲಕ್ಕೆ ತಲಾಖ್ ನೀಡಿದರೆ ಕಾನೂನು ಪ್ರಕಾರ ಪತಿ ಶಿಕ್ಷೆಗೆ ಗುರಿಯಾಗಲಿದ್ದಾನೆ.
ರಾಷ್ಟ್ರೀಯ ಪೌರತ್ವ ನೋಂದಣಿ/ಪೌರತ್ವ ತಿದ್ದುಪಡಿ ಕಾಯ್ದೆ (ಎನ್ ಆರ್ ಸಿ/ಸಿಎಎ):
ಅಸ್ಸಾಂನಲ್ಲಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ನಿರ್ದೇಶನದಂತೆ ಎನ್ ಆರ್ ಸಿಯನ್ನು ಜಾರಿಗೊಳಿಸಿತ್ತು. ನಂತರ ಕೇಂದ್ರ ಸರ್ಕಾರ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ಪಡೆದಿತ್ತು. ಇದು ನೆರೆಯ ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತದ ಕಾಯಂ ಪೌರತ್ವ ನೀಡುವ ಕಾಯ್ದೆಯಾಗಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಂ ವಿರೋಧಿ ಎಂದು ವಿಪಕ್ಷಗಳು ಆರೋಪಿಸಿದ್ದು, ದೇಶಾದ್ಯಂತ ಪ್ರತಿಭಟನೆ, ಹಿಂಸಾಚಾರ ನಡೆಯಿತು.
ಪಂಚರಾಜ್ಯಗಳಲ್ಲಿ ಸೋಲು:
ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಜಯಸಾಧಿಸಿದ್ದ ಭಾರತೀಯ ಜನತಾ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿತ್ತು. ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್ ಗಢ, ಮಹಾರಾಷ್ಟ್ರ, ಜಾರ್ಖಂಡ್ ನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯದೇ ಸೋಲನ್ನನುಭವಿಸಿದೆ. ಈ ವರ್ಷದ ನಡೆದ ಚುನಾವಣೆಯಲ್ಲಿ ಬಿಜೆಪಿ ಐದು ರಾಜ್ಯಗಳನ್ನು ಕಳೆದುಕೊಂಡಿದೆ.
ಸಿಕ್ಕಿಂ, ಅರುಣಾಚಲದಲ್ಲಿ ಕೈ ಸುಟ್ಟುಕೊಂಡ ಕಾಂಗ್ರೆಸ್:
ಸಿಕ್ಕಿಂ, ಅರುಣಾಚಲಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಿನ್ನಡೆ ಅನುಭವಿಸಿತ್ತು. ಸಿಕ್ಕಿಂ ಕ್ರಾಂತಿ ಮೋರ್ಚಾ ಹದಿನೇಳು ಸ್ಥಾನಗಳನ್ನು ಪಡೆದು ಬಹುಮತ ಪಡೆದಿತ್ತು. ಮತ್ತೊಂದು ಪ್ರಾದೇಶಿಕ ಪಕ್ಷ ಎಸ್ ಡಿಎಫ್ 15 ಸ್ಥಾನ ಗಳಿಸಿ ಪ್ರಬಲ ವಿಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಕಾಂಗ್ರೆಸ್, ಬಿಜೆಪಿ ಶೂನ್ಯ ಸಂಪಾದನೆ ಗಳಿಸಿ ಮುಖಭಂಗ ಅನುಭವಿಸಿತ್ತು. ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷ 41 ಸ್ಥಾನ ಪಡೆದು ಗದ್ದುಗೆ ಏರಿದ್ದರೆ, ಕಾಂಗ್ರೆಸ್ ಪಕ್ಷ ಕೇವಲ ನಾಲ್ಕು ಸ್ಥಾನ ಗಳಿಸಿ ತೀವ್ರ ಮುಖಭಂಗ ಅನುಭವಿಸಿತ್ತು.