Advertisement

ಎದೆಗೆ ಅಪ್ಪಳಿಸಿದ ಕಹಿ ಅಲೆಗಳು…

11:21 AM Dec 28, 2019 | mahesh |

ಹೊಸ ವರ್ಷದ ಹೊಸ್ತಿಲಲ್ಲಿ ಇರುವಾಗ ಕಹಿ ಘಟನೆಗಳನ್ನೇಕೆ ನೆನಪಿಸಿಕೊಳ್ಳಬೇಕು ಎನ್ನುವ ಪ್ರಶ್ನೆ ಎದುರಾಗುವುದು ಸಹಜವೇ. ಆದರೆ, ಈ ಘಟನೆಗಳ ಆಂತರ್ಯದಲ್ಲಿ ಹಲವು ಪಾಠಗಳು ಅಡಗಿವೆ. ಈ ಪಾಠಗಳು ಹೊಸ ವರ್ಷದ ಪಯಣದಲ್ಲಿ ನಮಗೆ, ದೇಶಕ್ಕೆ ಮಾರ್ಗದರ್ಶಿಯಾಗಲಿ…

Advertisement

ಪುಲ್ವಾಮಾದಲ್ಲಿ ರಕ್ಕಸರ ದಾಳಿ
ಈ ವರ್ಷದ ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರರು ನಡೆಸಿದ ಕಾರ್‌ಬಾಂಬ್‌ ದಾಳಿಯಲ್ಲಿ ನಮ್ಮ ಭದ್ರತಾ ಪಡೆಯ 44 ಯೋಧರು ಸಾವನ್ನಪ್ಪಿದರು. ಈ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಈ ಘಟನೆ ನಡೆದ ಕೇವಲ 12 ದಿನಗಳಲ್ಲಿ, ಅಂದರೆ ಫೆಬ್ರವರಿ 26ರಂದು ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿನ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿ, ಪ್ರಮುಖ ಅಡಗುದಾಣವನ್ನು ಪುಡಿಗಟ್ಟಿತು.

ಫೋನಿಗೆ ತತ್ತರಿಸಿದ ಸಾಗರಪ್ರದೇಶ
ಒಡಿಶಾ ರಾಜ್ಯ ಈ ವರ್ಷದ ಮೇ ತಿಂಗಳಲ್ಲಿ ಫೋನಿ ಚಂಡಮಾರುತದ ದಾಳಿಗೆ ತತ್ತರಿಸಿತು. ದೇಶದ ಹಲವು ರಾಜ್ಯಗಳು ಈ ಚಂಡಮಾರುತದ ಪರಿಣಾಮ ಎದುರಿಸಿದವಾದರೂ, ಒಡಿಶಾ ಹೆಚ್ಚು ಹಾನಿ ಅನುಭವಿಸಿತು. ಈ ಚಂಡಮಾರುತದಿಂದಾಗಿ ಭಾರತ(ಮುಖ್ಯವಾಗಿ ಒಡಿಶಾ) ಮತ್ತು ಬಾಂಗ್ಲಾದೇಶದ 89 ಜನ ಪ್ರಾಣ ಕಳೆದುಕೊಂಡರು. ಎರಡೂ ಬದಿ ಯ ಹಾನಿ ಪ್ರಮಾಣ 8.1 ಶತಕೋಟಿ ಡಾಲರ್‌ಗಳಷ್ಟು ಎಂಬ ಅಂದಾಜಿದೆ.

ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ
ವರ್ಷದ ಅಂತ್ಯದಲ್ಲಿ ಕೇಂದ್ರ ಸರ್ಕಾರ, ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿದ್ದೇ ತಂದಿದ್ದು, ದೇಶದ ಹಲವೆಡೆ ವಿರೋಧ ವ್ಯಕ್ತವಾಯಿತು. ಶಾಂತವಾಗಿ ಪ್ರತಿಭಟಿ ಸುವುದನ್ನು ಬಿಟ್ಟು, ಕೆಲವು ಕಿಡಿಗೇಡಿಗಳು ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ ಮುಂದಾದಾಗ, ಹಲವೆಡೆ ಗೋಲಿಬಾರ್‌ಗಳೂ ನಡೆದವು. ಅದರಲ್ಲಿ ರಾಜ್ಯದ ಮಂಗಳೂರಿನ ಪ್ರಕರಣವೂ ಒಂದು.

ವಿಶ್ವಕಪ್‌ನಲ್ಲಿ ಮುಗ್ಗರಿಸಿದ ಭಾರತ
ಸಶಕ್ತ ಬ್ಯಾಟಿಂಗ್‌ ಪಡೆ, ಚಾಣಾಕ್ಷ ಬೌಲರ್‌ಗಳಿಂದ ಕೂಡಿದ್ದ ಟೀಂ ಇಂಡಿಯಾ 2019ರ ಕ್ರಿಕೆಟ್‌ ವಿಶ್ವಕಪ್‌ ಗೆದ್ದೇ ಗೆಲ್ಲುತ್ತೆ ಎನ್ನುವ ಲೆಕ್ಕಾಚಾರವಿತ್ತು. ಆದರೆ, ಕೊಹ್ಲಿ ಪಡೆಗೆ ಆ ಅದೃಷ್ಟವೇ ಕೂಡಿಬರಲಿಲ್ಲ. ನ್ಯೂಜಿಲೆಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ 18 ರನ್‌ಗಳಿಂದ ಸೋಲನ್ನಪ್ಪಿ, ಮುಗ್ಗರಿಸಿಬಿತ್ತು. ದೇಶದಾದ್ಯಂತ ಅಲ್ಲದೆ, ವಿಶ್ವಕ್ರಿಕೆಟ್‌ ಪ್ರೇಮಿಗಳಿಗೂ ಅಚ್ಚರಿಯ ಆಘಾತ ತಂದಿತ್ತ ಸೋಲು ಅದಾಗಿತ್ತು.

Advertisement

ಅಮೆಜಾನ್‌-ಬಂಡೀಪುರ ಕಾಡ್ಗಿಚ್ಚು
ವಿಶ್ವದ ಅತ್ಯಂತ ವೈವಿಧ್ಯಮಯ ಮಳೆಗಾಡು ಎಂಬ ಖ್ಯಾತಿಯ ಅಮೆಜಾನ್‌ ಕಳೆದೊಂದು ದಶಕದಲ್ಲೇ ಅತ್ಯಂತ ಭೀಕರ ಕಾಡ್ಗಿಚ್ಚನ್ನು ಎದುರಿಸಿತು. ಇದನ್ನು ಜಾಗತಿಕ ದುರಂತ ಎಂದೇ ಬಣ್ಣಿಸಲಾಯಿತು. ಇತ್ತ ರಾಜ್ಯದ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಫೆ. 21-ಫೆ.25ರವರೆಗೆ ಹರಡಿದ ಕಾಡ್ಗಿಚ್ಚಾ ಅಪಾರ ಹಾನಿ ಮಾಡಿತು. 15,000 ಎಕರೆ ಪ್ರದೇಶದ ಮರಗಳನ್ನು, ಅಸಂಖ್ಯ ವನ್ಯಜೀವಿಗಳನ್ನು ಆಹುತಿ ತೆಗೆದುಕೊಂಡಿತು.

ನೆರೆಗೆ ತತ್ತರಿಸಿದ ರಾಜ್ಯ
ಆಗಸ್ಟ್‌ ತಿಂಗಳು ಕರ್ನಾಟಕದ ಪಾಲಿಗಂತೂ ಕರಾಳವಾಗಿತ್ತು. ಮಹಾರಾಷ್ಟ್ರ ತನ್ನ ಜಲಾಶಯಗಳಿಂದ ಹರಿಬಿಟ್ಟ ಅಗಾಧ ಪ್ರಮಾಣದ ನೀರಿಗೆ, ಭಾರೀ ಮಳೆಯೂ ಜತೆಯಾಗಿ(ಸಾಮಾನ್ಯಕ್ಕಿಂತ 5 ಪಟ್ಟು ಹೆಚ್ಚು ಮಳೆ), ರಾಜ್ಯದ 22 ಜಿಲ್ಲೆಗಳು ಪ್ರವಾಹ ಸನ್ನಿವೇಶ ಎದುರಿಸಿದವು. ಅದರಲ್ಲೂ ಬೆಳಗಾವಿ, ಬಿಜಾಪುರ, ರಾಯಚೂರು, ಕಲಬುರಗಿ ಯಾದಗಿರಿ, ಉತ್ತರ ಕನ್ನಡ ಜಿಲ್ಲೆಗಳು ಪ್ರವಾಹದಿಂದ ಹೆಚ್ಚು ಹಾನಿಗೊಳಗಾದವು. ರಾಜ್ಯದಲ್ಲಿ 40,000 ಅಧಿಕ ಮನೆಗಳು ಹಾನಿಗೊಳಗಾದರೆ, 103 ತಾಲೂಕುಗಳ 2000ಕ್ಕೂ ಅಧಿಕ ಗ್ರಾಮಗಳು ಜಲಾವೃತವಾದವು. ಚಿಕ್ಕಮಗಳೂರು,ಕೊಡಗು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಭೂ ಕುಸಿತ ಕಾಣಿಸಿತು. ಈ ಪ್ರವಾಹಕ್ಕೆ 900ಕ್ಕೂ ಅಧಿಕ ಜಾನುವಾರುಗಳು ಮೃತಪಟ್ಟವು. 69,7948 ಜನರ ರಕ್ಷಣೆ, 1160 ನಿರಾಶ್ರಿತ ಶಿಬಿರಗಳನ್ನು ತೆರೆಯಲಾಯಿತು..

ಏರೋ ಶೋ ವೇಳೆ ಕಾರುಗಳ ಆಹುತಿ
ಏರೋ ಇಂಡಿಯಾ ಶೋ ಈ ಬಾರಿ ಶಿಳ್ಳೆ, ಚಪ್ಪಾಳೆಗಳ ಸಂಭ್ರಮ ಆಗಿರಲಿಲ್ಲ. ಬೆಂಗಳೂರಿನ ಏರೋ ಇಂಡಿಯಾದ ಡೊಮೆಸ್ಟಿಕ್‌ ಪಾರ್ಕಿಂಗ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ಸುಮಾರು 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾದವು. ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೂ ಮುನ್ನ ವೈಮಾನಿಕ ತರಬೇತಿ ವೇಳೆ, 2 ಲಘು ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಒಬ್ಬ ಪೈಲಟ್‌ ಸಾವನ್ನಪ್ಪಿದ ಘಟನೆ ನಡೆದಿತ್ತು.

ಈರುಳ್ಳಿ ಬೆಲೆ ಏರಿಕೆ
ಈರುಳ್ಳಿ ಇಲ್ಲದಿದ್ದರೆ, ಅಡುಗೆಗೆ ರುಚಿಯೇ ಇಲ್ಲ ಎಂದು ನಂಬಿದವರು ಅನೇಕರು. ಆದರೆ, ಈ ವರ್ಷಾಂತ್ಯದಲ್ಲಿ ಈರುಳ್ಳಿಯ ಬೆಲೆ ಶ್ರೀಸಾಮಾನ್ಯನ ನಿದ್ದೆಗೆಡಿಸಿತು. ಮಹಾರಾಷ್ಟ್ರ, ಬೆಳಗಾವಿ ಭಾಗದಿಂದ ಅತಿಹೆಚ್ಚು ಬೆಳೆಯಲ್ಪಡುತ್ತಿದ್ದ ಈರುಳ್ಳಿ, ಪ್ರವಾಹ ಮತ್ತು ಇತರೆ ಕಾರಣಗಳಿಗೆ ಸಿಲುಕಿ, ಮಾರುಕಟ್ಟೆ ಸೇರುವಾಗ “ಬಂಗಾರ”ದ ಬೆಲೆ ಪಡೆಯಿತು. ಕೆ.ಜಿಗೆ 150- 180 ರೂ.ಗಳವರೆಗೆ ದಾಖಲೆ ಏರಿಕೆ ಕಂಡಿದ್ದು, ಮಧ್ಯಮವರ್ಗದ ನಾಲಿಗೆಯನ್ನು ಕಹಿಯಾಗಿಸಿದ ಪ್ರಸಂಗವೇ ಹೌದು.

ಅತ್ಯಾಚಾರ ದುಷ್ಕೃತ್ಯಗಳು
ನ.27ರಂದು ಹೈದ್ರಾಬಾದ್‌ನಲ್ಲಿ ನಾಲ್ವರು ರಕ್ಕಸರು 26 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿ, ಕೊಂದು, ಸುಟ್ಟುಹಾಕಿದ ಪೈಶಾಚಿಕ ಕೃತ್ಯ ಬೆಳಕಿಗೆ ಬಂದದ್ದೇ, ಇಡೀ ದೇಶವೇ ಆಕ್ರೋಶದಿಂದ ರಸ್ತೆಗಿಳಿಯಿತು. ಈ ಘಟನೆಯೆಡೆಗೆ ಆಕ್ರೋಶ ಯಾವ ಪ್ರಮಾಣದಲ್ಲಿ ಇತ್ತೆಂದರೆ, ಡಿ.6ರಂದು ನಾಲ್ಕೂ ಪಾತಕಿಗಳು ಎನ್‌ಕೌಂಟರ್‌ನಲ್ಲಿ ಸತ್ತಾಗ ಇಡೀ ದೇಶವೇ ಸಂಭ್ರಮಿಸಿತು. ಆದರೆ, ಆ ಸಂಭ್ರಮ ಹೆಚ್ಚು ಸಮಯ ಇರಲಿಲ್ಲ. ಏಕೆಂದರೆ, ಅದೇ ದಿನವೇ ಉತ್ತರ ಪ್ರದೇಶದ ಉನ್ನಾವೋದಲ್ಲಿ ಅತ್ಯಾಚಾರ ಪೀಡಿತೆ ಕೊನೆಯುಸಿರೆಳೆದಳು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಅತ್ಯಾಚಾರಿಗಳು ಕೋರ್ಟ್‌ಗೆ ತೆರಳುತ್ತಿದ್ದ ಸಂತ್ರಸ್ತೆ ಯುವತಿಯ ಮೇಲೆ ದಾಳಿ ಎಸಗಿ, ಬೆಂಕಿ ಹಚ್ಚಿ ಓಡಿ ಹೋಗಿದ್ದರು.

ಶ್ರೀಲಂಕಾ ಚರ್ಚ್‌ ದಾಳಿ
ಏಪ್ರಿಲ್‌ 21ರ ಈಸ್ಟರ್‌ ಭಾನುವಾರದಂದು ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟಗಳು, ಏಷ್ಯಾ ಖಂಡದಲ್ಲಿ ಬಲಪಡೆಯುತ್ತಿರುವ ಐಸಿಸ್‌ ಉಗ್ರವಾದಕ್ಕೆ ಸಾಕ್ಷಿಯಾದವು. ಚರ್ಚ್‌, ಹೋಟೆಲ್‌ಗಳು ಸೇರಿದಂತೆ 8 ಪ್ರದೇಶಗಳಲ್ಲಿ ಬಾಂಬ್‌ ಸ್ಫೋಟವಾದವು. ಈ ದಾಳಿಯಲ್ಲಿ ಮುಖ್ಯವಾಗಿ ಕೇರಳದ ಕ್ರಿಶ್ಚಿಯನ್ನರು ಮತ್ತು ಪ್ರವಾಸಿಗಳನ್ನು ಟಾರ್ಗೆಟ್‌ ಮಾಡಲಾಗಿತ್ತು. ಶ್ರೀಲಂಕಾ ಉಗ್ರ ದಾಳಿಯಲ್ಲಿ 45 ವಿದೇಶಿ ಪ್ರವಾಸಿಗಳು ಸೇರಿದಂತೆ 259 ಜನ ಮೃತಪಟ್ಟರು.

ಧಾರವಾಡ ಕಟ್ಟಡ ಕುಸಿತ
ಮಾರ್ಚ್‌ 19ರದು ಧಾರವಾಡದಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿದು ಸಂಭವಿಸಿದ ದುರಂತದಲ್ಲಿ 15ಕ್ಕೂ ಹೆಚ್ಚು ಜನ ಮೃತಪಟ್ಟರು. ವಿಪತ್ತು ನಿರ್ವಹಣಾ ಸಿಬ್ಬಂದಿಯ ಅತೀವ ಪರಿಶ್ರಮದ ಫ‌ಲವಾಗಿ 60ಕ್ಕೂ ಹೆಚ್ಚು ಜನರು ಬದುಕುಳಿದರು. ಕಟ್ಟಡ ಕಟ್ಟಲು ಅನುಮತಿ ನೀಡಿದ, ಸಿಸಿ ನೀಡಿದ ಇಲಾಖೆಯ ಅಧಿಕಾರಿಗಳೇನೋ ಅಮಾನತಾದರು. ಆದರೆ ಈ ನಿಷ್ಕಾಳಜಿಯ ಪರಿಣಾಮ ಅಮಾಯಕರು ಪ್ರಾಣ ಕಳೆದುಕೊಳ್ಳಬೇಕಾಯಿತು.

ಕಳಪೆ ಮದ್ಯಕ್ಕೆ 168 ಮಂದಿ ಸಾವು
21 ಫೆಬ್ರವರಿಯಿಂದ 25 ಫೆಬ್ರವರಿಯ ನಡುವೆ ಅಸ್ಸಾಂನ ಗೋಲಾ^ಟ್‌ ಜಿಲ್ಲೆಯಲ್ಲಿ 168 ಮಂದಿ ಮದ್ಯವ್ಯಸನಿಗಳು ಕಳ್ಳಭಟ್ಟಿ ಕುಡಿದು ಸಾವನ್ನಪ್ಪಿದರು. 300ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾದರು.

Advertisement

Udayavani is now on Telegram. Click here to join our channel and stay updated with the latest news.

Next