Advertisement
ಕಾಂಗೋ ಗಣರಾಜ್ಯದಲ್ಲಿ “ಡಾಕ್ಟರ್ ಮಿರಾಕಲ್’ ಎಂದೇ ಖ್ಯಾತರಾಗಿರುವ ಡಾ. ಡೆನ್ನಿಸ್ ಮುಕ್ವೆಗೆ ಅವರು, ತಮ್ಮ ತಾಯ್ನಾಡಿನಲ್ಲಿ ಆಂತರಿಕ ಗಲಭೆಗಳ ಹೆಸರಿನಲ್ಲಿ ಅತ್ಯಾಚಾರ ಕ್ಕೊಳಗಾದ ಸಾವಿರಾರು ಮಹಿಳೆಯರಿಗೆ ತಾವು ಸ್ಥಾಪಿಸಿರುವ “ಪಾಂಝಿ’ ಆಸ್ಪತ್ರೆಯಲ್ಲಿ ಪುನರ್ಜನ್ಮ ನೀಡಿದ್ದಾರೆ. ಈವರೆಗೆ ಸುಮಾರು 30,000ಕ್ಕೂ ಹೆಚ್ಚು ಸಂತ್ರಸ್ತೆಯರು ದೈಹಿಕ ಹಾಗೂ ಮಾನಸಿಕ ಆಘಾತಗಳಿಂದ ಹೊರ ಬರಲು ನೆರವಾಗಿದ್ದಾರೆ. ಅತ್ಯಾಚಾರವನ್ನು “ಸಮೂಹನಾಶದ ಒಂದು ಅಸ್ತ್ರ’ ಎಂದೇ ಪರಿಗಣಿಸಿರುವ ಅವರು, 2014ರಲ್ಲಿ ನಡೆದಿದ್ದ ಅವರ ಹತ್ಯೆ ಯತ್ನದಿಂದ ಪಾರಾದರೂ ಜೀವದ ಹಂಗು ತೊರೆದು ಸಂತ್ರಸ್ತೆಯರ ಆರೈಕೆಯಲ್ಲಿ ಜೀವನ ಸವೆಸುತ್ತಿದ್ದಾರೆ.
ಇರಾಕ್‌ನ “ಯಾಜಿದಿ’ ಸಮುದಾಯದಲ್ಲಿ ಜನಿಸಿದ ನಾದಿಯಾ ಮುರಾದ್‌ಗೆ 19 ವರ್ಷವಿದ್ದಾಗಲೇ ಐಸಿಸ್ ಉಗ್ರರು ಅವರನ್ನು ಅಪಹರಿಸಿದ್ದರು. 3 ತಿಂಗಳ ಕಾಲ ಬಂಧಿಯಾಗಿದ್ದ ಅವರನ್ನು ಲೈಂಗಿಕ ಗುಲಾಮಳನ್ನಾಗಿ ಬಳಸಿಕೊಳ್ಳಲಾಗಿತ್ತಲ್ಲದೆ, ಉಗ್ರರ ತಂಡಗಳ ನಡುವೆಯೇ ಅವರು ಅನೇಕ ಬಾರಿ ಮಾರಾಟವಾಗಿದ್ದರು, ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದರು, ಚಿತ್ರಹಿಂಸೆ ಅನುಭವಿಸಿದ್ದರು. 2014ರಲ್ಲಿ ಐಸಿಸ್ ಪಂಜರದಿಂದ ತಪ್ಪಿಸಿಕೊಂಡು ಬಂದ ನಂತರ, ಮಾನವ ಕಳ್ಳಸಾಗಣೆ ಹಾಗೂ ಅತ್ಯಾಚಾರ ವಿರುದ್ಧ ಹೋರಾಟಗಾರ್ತಿಯಾಗಿ ಮಹಿಳೆಯರ ಹಕ್ಕುಗಳ ಸಂರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಒಟ್ಟಿನಲ್ಲಿ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಲೈಂಗಿಕ ದೌರ್ಜನ್ಯಗಳನ್ನು ಅಸ್ತ್ರವಾಗಿ ಬಳಸುವುದರ ವಿರುದ್ಧ ಹೋರಾಡಿದ ಇಬ್ಬರಿಗೆ ಈ ಬಾರಿಯ ಶಾಂತಿ ನೊಬೆಲ್ ಸಂದಿದೆ.