Advertisement

ಕೊಂಕಣಿ ಪ್ರದರ್ಶನ ಕಲೆಗೊಂದು ಮಕುಟಮಣಿ

12:52 PM Aug 03, 2018 | Team Udayavani |

ಮಹಾನಗರ : ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್‌ ಸೊಭಾಣ್‌ 2002ರಿಂದ ಪ್ರತಿ ತಿಂಗಳ ಪ್ರಥಮ ರವಿವಾರ ನಡೆಸಿಕೊಂಡು ಬರುತ್ತಿರುವ ತಿಂಗಳ ವೇದಿಕೆ (ಮ್ಹಯ್ನ್ಯಾಳಿ ಮಾಂಚಿ) ಕಾರ್ಯಕ್ರಮ 200ರ ಹೊಸ್ತಿಲಲ್ಲಿದೆ.

Advertisement

‘ಕೊಂಕಣಿ ಕಲೆಗೆ ವೇದಿಕೆ ಮತ್ತು ಕಲಾವಿದರಿಗೆ  ಪ್ರೋತ್ಸಾಹ’ ಎಂಬ ಉದ್ದೇಶದೊಂದಿಗೆ 2002 ಜನವರಿ 6ರಿಂದ ಮೊದಲ್ಗೊಂಡು 16 ವರ್ಷ 8 ತಿಂಗಳು ನಿರಂತರವಾಗಿ ಕೊಂಕಣಿ ಪ್ರದರ್ಶನ ಕಲೆಯ ವೈವಿಧ್ಯಮಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿದ್ದು, ಇದೇ ಆಗಸ್ಟ್‌ 5ರಂದು 200ನೇ ಕಾರ್ಯಕ್ರಮ ನಡೆಯಲಿದೆ.

ಹುಟ್ಟು, ಹಿನ್ನೆಲೆ
ಜಾಗತೀಕರಣದ ಭರಾಟೆಯಲ್ಲಿ ಸ್ಥಳೀಯ ಭಾಷೆಗಳು ತಮ್ಮ ಅಸ್ತಿತ್ವಕ್ಕಾಗಿ ಕಷ್ಟಪಡುತ್ತಿವೆ, ಹಲವು ಭಾಷೆಗಳು ಅಳಿವಿನ ಅಂಚಿನಲ್ಲಿವೆ, ಜನಗಣತಿಯಲ್ಲಿ ಕೊಂಕಣಿ ಜನಸಂಖ್ಯೆ ಇಳಿಮುಖವಾಗಿದೆ ಇತ್ಯಾದಿ ಕಳವಳಕಾರಿ ಸಂಗತಿಗಳು ಕೇಳಿ ಬರುತ್ತಿರುವ ಇಂದು ಕೊಂಕಣಿಯಲ್ಲಿ ಸದ್ದಿಲ್ಲದೆ ಇಂತಹ ದಾಖಲೆಯೊಂದು ಸೃಷ್ಟಿಯಾಗಿದೆ.

ಪ್ರತಿ ತಿಂಗಳ ಮೊದಲ ರವಿವಾರ, ಮಳೆಯಿರಲಿ, ಬೆಳಕಿರಲಿ ಅಥವಾ ಇತರ ಯಾವುದೇ ಜಂಜಾಟವಿರಲಿ; ಜನ ಬರಲಿ, ಬಾರದಿರಲಿ, ಸಂಜೆ ಗಂಟೆ 6.30 ಆಯಿತೆಂದರೆ ಶಕ್ತಿನಗರದ ಕಲಾಂಗಣ್‌ ನ ಬಯಲು ರಂಗ ಮಂದಿರದಲ್ಲಿ ಒಂದು ಅಪೂರ್ವ ಸಾಂಸ್ಕೃತಿಕ ಲೋಕ ತೆರೆದುಕೊಳ್ಳುತ್ತದೆ. 6.30 ಅಂದರೆ 6.30. 6 ಗಂಟೆ ಆಗಿ 31 ನಿಮಿಷ ಅಲ್ಲ. ಟ್ರಿನ್‌ ಎಂದು ಮೂರನೇ ಗಂಟೆ ಬಾರಿಸುತ್ತಲೇ ಅಲ್ಲಿಂದಿತ್ತ, ಇಲ್ಲಿಂದತ್ತ ಸುಳಿದಾಡುವ ಪ್ರೇಕ್ಷಕರು ಆಸೀನರಾಗುತ್ತಾರೆ. ಮುಂದಿನ ಎರಡು ಗಂಟೆ ಕೊಂಕಣಿಯ ವೈವಿಧ್ಯಮಯ ಪ್ರದರ್ಶನ ಕಲೆಯ ಪ್ರಪಂಚ ಸಂಗೀತ, ನಾಟಕ, ನೃತ್ಯ ಮತ್ತಿತರ ಪ್ರಕಾರಗಳಲ್ಲಿ ಹೊಸ ಕಳೆಯೊಂದಿಗೆ ಇಲ್ಲಿ ಜೀವ ತಳೆಯುತ್ತದೆ.

ಇಲ್ಲಿ ಪ್ರತಿಯೊಂದಕ್ಕೂ ಶಿಸ್ತಿದೆ. ಅಭ್ಯಾಸವಿಲ್ಲದೇ ಕಲಾವಿದರು ವೇದಿಕೆ ಏರುವಂತಿಲ್ಲ. ಕ್ಲಪ್ತ ಸಮಯಕ್ಕೆ ಆರಂಭ, ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಸರಿಯಾಗಿ ರಾತ್ರಿ 8.30ಕ್ಕೆ ಮುಕ್ತಾಯ. ತತ್‌ ಕ್ಷಣ ಕಲಾವಿದರಿಗೆ ಸೂಕ್ತ ಸಂಭಾವನೆ ಮತ್ತು ಪರವೂರಿನವರಿಗೆ ಪ್ರಯಾಣ ಭತ್ತೆ ನೀಡಲಾಗುತ್ತದೆ. ಬೆಳಕು-ಧ್ವನಿ, ಪ್ರಚಾರ, ವಸತಿ, ಚಾ-ತಿಂಡಿ ಉಪಚಾರ- ಇವನ್ನು ಮಾಂಡ್‌ ಸೊಭಾಣ್‌ ವತಿಯಿಂದ ವ್ಯವಸ್ಥೆ ಮಾಡಲಾಗುತ್ತದೆ.

Advertisement

ಆರಂಭ
1986 ನವೆಂಬರ್‌ 30ರಂದು ನಗರದ ವುಡ್‌ಲ್ಯಾಂಡ್ಸ್‌ ಹೊಟೇಲಿನ ವೇದಿಕೆಯಲ್ಲಿ ‘ಕೊಂಕಣಿ ಸಂಗೀತದಲ್ಲಿ ಕೊಂಕಣಿ ಸ್ವರೂಪದ ಹುಡುಕಾಟ’ ಎಂಬ ನೆಲೆಯಲ್ಲಿ ಮಾಂಡ್‌ ಸೊಭಾಣ್‌ ಹುಟ್ಟಿಕೊಂಡಿತ್ತು. ಕ್ರಮೇಣ ಸಾಂಸ್ಥಿಕ ರೂಪದಲ್ಲಿ ಮಾಂಡ್‌ ಸೊಭಾಣ್‌ ತನ್ನ ಅಸ್ತಿತ್ವ ಕಂಡು ಕೊಂಡಾಗ ‘ಕಲಾಂಗಣ್‌’ ಎಂಬ ವಿಶಿಷ್ಟ ವಿನ್ಯಾಸದ ಕಲೆಯ ಅಂಗಣ ಶಕ್ತಿನಗರದಲ್ಲಿ ನಿರ್ಮಾಣಗೊಂಡಿತು. ಈ ಕಟ್ಟಡಕ್ಕೆ ಜೀವ ತುಂಬ ಬೇಕೆಂದುಕೊಂಡಾಗ ಕೊಂಕಣಿಯ ಎಲ್ಲ ಕಲಾ ಪ್ರಕಾರಗಳಿಗೆ ಮತ್ತು ಕಲಾವಿದರಿಗೆ ವೇದಿಕೆ ಒದಗಿಸುವ ಬಗ್ಗೆ ಚಿಂತನೆ ಮೂಡಿತು. ಕಲಾವಿದ ಎರಿಕ್‌ ಒಝೇರಿಯೊ ಮತ್ತು ಲುವಿ ಪಿಂಟೋ ಅವರು ಈ ಬಗ್ಗೆ ತಮ್ಮ ಸಮಿತಿಯಲ್ಲಿ ಚರ್ಚಿಸಿ ಇದಕ್ಕೆ ‘ಮ್ಹಯ್ನ್ಯಾಳಿ ಮಾಂಚಿ’ (ತಿಂಗಳ ವೇದಿಕೆ ) ಎಂಬ ಹೆಸರನ್ನಿತ್ತರು. 2002 ಜನವರಿ 6 (ರವಿವಾರ) ರಂದು ‘ಮಾಂಡ್‌ ಸೊಭಾಣ್‌ ಮೊತಿಯಾಂ’ ಎಂಬ ಸಂಗೀತ ರಸಮಂಜರಿಯೊಂದಿಗೆ ಈ ವೇದಿಕೆ ಅನಾವರಣಗೊಂಡಿತು.

ಆರಂಭದಲ್ಲಿ 30 ರೂ. ಮತ್ತು 100 ರೂ. ಪ್ರವೇಶ ದರವಿತ್ತು. ಬೆರಳೆಣಿಕೆಯ ಪ್ರೇಕ್ಷಕರಿದ್ದರು. ನಗರದ ಹೊರವಲಯ, ವಾಪಸ್‌ ಬರಲು ವಿರಳ ವಾಹನ ಸೌಕರ್ಯ ಇತ್ಯಾದಿ ನೆವನಗಳಿದ್ದವು. ಬಳಿಕ ಉಚಿತ ಪ್ರವೇಶ ನೀಡಲಾಯಿತು. ಐಚ್ಛಿಕ ವಂತಿಗೆಯ ಅವಕಾಶ ಕಲ್ಪಿಸಲಾಯಿತು. ಸಾಂಸ್ಕೃತಿಕ ಲೋಕದಲ್ಲಿ ಮಾಂಡ್‌ ಸೊಭಾಣ್‌ ತನ್ನ ಛಾಪನ್ನು ಬಲಿಷ್ಠಗೊಳಿಸಿ, ಶಿಸ್ತು ಮತ್ತು ನಿರಂತರತೆಯನ್ನು ಕಾಯ್ದುಕೊಳ್ಳುತ್ತಿದ್ದಂತೆ ತಿಂಗಳ ವೇದಿಕೆ ಇಪ್ಪತ್ತೈದು, ಐವತ್ತು, ನೂರರ ಗಡಿ ದಾಟಿ, ನೂರೈವತ್ತನ್ನೂ ಮೀರಿ, ಈಗ ಇನ್ನೂರರ ಹೊಸ್ತಿಲಲ್ಲಿದೆ.

ಕೊಂಕಣಿ ಕಲಾಕ್ಷೇತ್ರದ ಘಟಾನುಘ‌ಟಿಗಳು ಇಲ್ಲಿ ತಮ್ಮ ಪ್ರದರ್ಶನ ನೀಡಿದ್ದಾರೆ. ಸಿದ್ದಿ, ಕುಡುಬಿ, ಖಾರ್ವಿ, ದಾಲ್ದಿ, ಜಿಎಸ್‌ಬಿ, ಸಾರಸ್ವತ್‌, ಗಾಬ್ಡೆ, ಕ್ರೈಸ್ತ ಮತ್ತಿತರ ವಿವಿಧ ಸಮುದಾಯಗಳು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ವಿದೇಶದ ಕಲಾತಂಡಗಳು ಮತ್ತು ಕಲಾವಿದರು ಇಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಲು ಅವಕಾಶ ಪಡೆದಿದ್ದಾರೆ. 

ವೈವಿಧ್ಯ ಪ್ರದರ್ಶನ
ಸಂಗೀತ, ನಾಟಕ, ನೃತ್ಯ, ತಿಯಾತ್ರ, ಹಾಸ್ಯ ಪ್ರಹಸನ, ನಾಟಕ ಪ್ರಯೋಗಗಳು, ಮಕ್ಕಳ ನಾಟಕ, ಹರಿಕಥೆ, ಯಕ್ಷಗಾನ, ಜನಪದ ಪ್ರಕಾರಗಳು, ವಿವಿಧ ವಿನೋದಾವಳಿ, ಹಿರಿಯ ಕಲಾವಿದರ ನೆನೆಯುವ ಸಂಗೀತ ಸಂಜೆಗಳು, ಭಕ್ತಿ ಸಂಗೀತ, ಸಂಗೀತ ರೂಪಕ, ನೃತ್ಯ ರೂಪಕ, ಕಾವ್ಯ-ಕುಂಚ-ಗಾಯನ, ಸಂಗೀತ-ಗಾಯನ ಜುಗಲ್ಬಂದಿ, ಯುವ ಮಹೋತ್ಸವಗಳು-ಹೀಗೆ ಕೊಂಕಣಿಯಂತಹ ಅಲ್ಪಸಂಖ್ಯಾಕ ಭಾಷೆಯಲ್ಲೂ ಇಷ್ಟೊಂದು ವಿವಿಧತೆ ಇದೆಯೇ ಎಂಬಷ್ಟು ಮನಕ್ಕೆ ತಂಪೆರೆಯುವ ಕಲೆಯ ಪ್ರಕಾರಗಳು ಇಲ್ಲಿ ಪ್ರದರ್ಶನಗೊಂಡಿವೆ. 

200ನೇ ಕಾರ್ಯಕ್ರಮ ‘ಅಪುಟ್‌’ 
ಇದೇ ಆ. 5ರಂದು ಸಂಜೆ 6 ಗಂಟೆಗೆ ಕಲಾಂಗಣ್‌ನ ಆವರಣದಲ್ಲಿ “ಅಪುಟ್‌’ ಎಂಬ ಹೆಸರಿನಲ್ಲಿ ತಾಜಾ ಮಾಂಡ್‌ ಸೊಭಾಣ್‌ ಸಂಗೀತ ಸುಧೆ ಹರಿಸಿ, ಜನಮನ ರಂಜಿಸಲು ಬಹುಮುಖೀ ಕಲಾವಿದರು ತಯಾರಿ ನಡೆಸಿದ್ದಾರೆ. 32 ವರ್ಷಗಳ ಮೊದಲು ಒಂದು ಪ್ರಯೋಗವಾಗಿ ಅಸ್ತಿತ್ವಕ್ಕೆ ಬಂದ ಮಾಂಡ್‌ ಸೊಭಾಣ್‌ ಸಂಗೀತದ 185ನೇ ಸಂಚಿಕೆ ಇದಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next