Advertisement

2,000 ರೂ. ನೋಟು ವಾಪಸ್‌: ಜನರಲ್ಲಿ ಆತಂಕ ಬೇಡ

09:35 AM May 23, 2023 | Team Udayavani |

ಕಳೆದ ಶುಕ್ರವಾರವಷ್ಟೇ ಭಾರತೀಯ ರಿಸರ್ವ್‌ ಬ್ಯಾಂಕ್‌ ಸೆ.30ರಿಂದ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ವಾಪಸ್‌ ಪಡೆಯುವುದಾಗಿ ಹೇಳಿದೆ. 2018-19ರಲ್ಲೇ ಈ ನೋಟುಗಳ ಮುದ್ರಣ ನಿಲ್ಲಿಸಲಾಗಿದ್ದು, ಈಗ ಚಲಾವಣೆ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜತೆಗೆ 2,000 ಮುಖಬೆಲೆಯ ನೋಟುಗಳು ಇದ್ದವರು ಸೆ.30ರೊಳಗೆ ಯಾವುದೇ ಬ್ಯಾಂಕ್‌ಗೆ ಹೋಗಿ ಬದಲಾವಣೆ ಮಾಡಿಕೊಳ್ಳಬಹುದು ಅಥವಾ ಅಕೌಂಟ್‌ಗೆ ಹಾಕಬಹುದು ಎಂದು ಸೂಚನೆ ನೀಡಲಾಗಿದೆ. 2016ರಲ್ಲಿ ನೋಟು ಅಮಾನ್ಯದ ಬಳಿಕ ಜನ ಹಳೆಯ 1,000 ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಅನುಕೂಲವಾಗಲಿ ಎಂಬ ಕಾರಣದಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ 2,000 ರೂ. ಮುಖಬೆಲೆಯ ನೋಟುಗಳನ್ನು ಜಾರಿಗೆ ತಂದಿದ್ದು. ಆಗ ಈ ನೋಟು ಪರಿಚಯಿಸಿದ್ದಕ್ಕೆ ಸಾಕಷ್ಟು ಆಕ್ಷೇಪಗಳೂ ವ್ಯಕ್ತವಾಗಿದ್ದವು. ಕಪ್ಪು ಹಣ ನಿಯಂತ್ರಣ ಕಾರಣದಿಂದಾಗಿ ನೋಟು ಅಮಾನ್ಯ ಮಾಡಲಾಗಿದ್ದು, ಈಗ ಮತ್ತೆ ಗರಿಷ್ಠ ಮುಖಬೆಲೆಯ ನೋಟು ಜಾರಿಗೆ ತಂದರೆ ಮತ್ತೆ ಕಾಳಧನ ಸಂಗ್ರಹಕ್ಕೆ ದಾರಿ ಮಾಡಿಕೊಟ್ಟ ರೀತಿ ಆಗುತ್ತದೆ ಎಂಬ ಮಾತುಗಳೂ ಕೇಳಿಬಂದಿದ್ದವು.

Advertisement

ಆರಂಭದ ಹಂತದಲ್ಲಿ ಈ ನೋಟುಗಳ ಮೂಲಕ ವಹಿವಾಟು ಜೋರಾಗಿಯೇ ಇತ್ತು. ತದ ಅನಂತರದಲ್ಲಿ ಆರ್‌ಬಿಐ ನಿಧಾನಗತಿಯಲ್ಲಿ ಈ ನೋಟುಗಳ ಬಳಕೆ ಕಡಿಮೆ ಮಾಡಲು ಶುರು ಮಾಡಿತು. ಇತ್ತೀಚಿನ ವರ್ಷಗಳಲ್ಲಿ ಎಟಿಎಂಗಳಲ್ಲಿ ಈ ನೋಟುಗಳನ್ನು ಬಳಕೆ ಮಾಡುತ್ತಿರಲಿಲ್ಲ. ಸಾಮಾನ್ಯವಾಗಿ ಬ್ಯಾಂಕ್‌ಗಳಲ್ಲಿ ಮಾತ್ರ ಹಣ ಬಿಡಿಸಿಕೊಂಡರೆ ಕೊಡಲಾಗುತ್ತಿತ್ತು. ಅಂತೆಯೇ ಈಗ ಭಾರತೀಯ ರಿಸರ್ವ್‌ ಬ್ಯಾಂಕ್‌ 2,000 ರೂ. ಮುಖಬೆಲೆಯ ನೋಟುಗಳನ್ನು ವಾಪಸ್‌ ಪಡೆದಿದೆ. ಆದರೆ  ಈ ನೋಟುಗಳ ಮಾನ್ಯತೆ ಹಾಗೆಯೇ ಇರುತ್ತದೆ ಎಂದೂ ಹೇಳಿದೆ. ಜತೆಗೆ 2,000 ರೂ. ಮುಖಬೆಲೆ ನೋಟು ಹೊಂದಿರುವಂಥವರು ಯಾವುದೇ ಬ್ಯಾಂಕ್‌ನ, ಯಾವುದೇ ಬ್ರ್ಯಾಂಚ್‌ಗೆ ಹೋಗಿ ಬೇಕಾದರೂ ಬದಲಾಯಿಸಿಕೊಳ್ಳಬಹುದು ಎಂದಿದೆ.

ಇದಕ್ಕೆ ಕಾರಣವೂ ಇದೆ. ಈ ಹಿಂದೆ ನೋಟು ಅಮಾನ್ಯ ಮಾಡಿದಾಗ ಇಡೀ ದೇಶಾದ್ಯಂತ ಬ್ಯಾಂಕ್‌ಗಳ ಮುಂದೆ ಜನ ಸರದಿ ನಿಲ್ಲುವ ಸ್ಥಿತಿ ಎದುರಾಗಿತ್ತು. ಈ ಬಗ್ಗೆ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು. ಈಗಲೂ ಅಂಥ ಸ್ಥಿತಿ ಬರಬಾರದು ಎಂದು ಮೊದಲೇ ಆರ್‌ಬಿಐ ಮುನ್ನೆಚ್ಚರಿಕೆ ವಹಿಸಿದೆ.

ಈ ವಿಚಾರದಲ್ಲಿ ಕಿಡಿಗೇಡಿಗಳು ಸಾಕಷ್ಟು ವದಂತಿ ಹಬ್ಬಿಸುವ ಸಾಧ್ಯತೆಗಳು ಹೆಚ್ಚಾಗಿವೆ. 2,000 ರೂ. ನೋಟು ಅಮಾನ್ಯವಾಗಿಲ್ಲ ಎಂದು ಸ್ವತಃ ಆರ್‌ಬಿಐ ಸ್ಪಷ್ಟಪಡಿಸಿದೆ. ಹಾಗೆಯೇ ನೋಟು ಬದಲಾವಣೆಗೆ ಗುರುತಿನ ಚೀಟಿ ಕೇಳುತ್ತಾರೆ, ಅರ್ಜಿ ಭರ್ತಿ ಮಾಡುತ್ತಾರೆ ಎಂದೆಲ್ಲ ಸುದ್ದಿಗಳು ಓಡಾಡಿದ್ದವು. ಇದನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ ನಿರಾಕರಿಸಿದ್ದು ಇಂಥ ಯಾವುದೇ ಕ್ರಮದ ಬಗ್ಗೆ ಸೂಚನೆ ಕೊಟ್ಟಿಲ್ಲ ಎಂದಿದೆ.

ಹೀಗಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಹರಿದಾಡುವಂಥ ಸುದ್ದಿಗಳನ್ನು ಜನ ನಂಬಲು ಹೋಗಬಾರದು. ಒಮ್ಮೆಗೆ 20,000 ರೂ. ಮೌಲ್ಯದ ನೋಟು ಬದಲಾವಣೆ ಅಥವಾ ಅಕೌಂಟ್‌ಗೆ ಹಾಕಲು ಅವಕಾಶವಿದೆ. ಹೀಗಾಗಿ ಸಾವಧಾನದಿಂದ ಹೋಗಿ ನೋಟು ಬದಲಾಯಿಸಿಕೊಳ್ಳಿ. ನಿಮ್ಮ ಬಳಿ ಇರುವ ನೋಟು ಮಾನ್ಯತೆ ಕಳೆದುಕೊಂಡಿಲ್ಲ, ಅದು ಚಾಲ್ತಿಯಲ್ಲಿರುವ ಹಣ ಎಂಬುದು ಆರ್‌ಬಿಐನ ಖಚಿತೋಕ್ತಿ. ಹೀಗಾಗಿ ಯಾರ ಮಾತುಗಳಿಗೂ ಕಿವಿಗೊಡದೆ ಆತಂಕದಿಂದ ವರ್ತಿಸಬೇಡಿ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next